ಗೋವಾ ಕನ್ನಡ ಮಾಧ್ಯಮ ಶಾಲೆಗೆ ಗೇಟ್‌ಪಾಸ್‌!

KannadaprabhaNewsNetwork |  
Published : Jun 29, 2026, 02:00 AM ISTUpdated : Jun 29, 2026, 11:18 AM IST
School

ಸಾರಾಂಶ

ಆರೇಳು ದಶಕಗಳಿಂದ ತನ್ನ ನೆಲದಲ್ಲಿ ವಾಸವಾಗಿರುವ ವಲಸಿಗ ಕನ್ನಡಿಗರನ್ನು ಏಕಾಏಕಿ ಒಕ್ಕಲೆಬ್ಬಿಸುವ, ವಲಸಿಗ ಕನ್ನಡಿಗರಿಗೆ ಉದ್ಯೋಗ ತಿರಸ್ಕರಿಸುವ ಮೂಲಕ ಕಿರುಕುಳ ನೀಡುತ್ತಾ ಬಂದಿರುವ ನೆರೆಯ ಪುಟ್ಟ ರಾಜ್ಯ ಗೋವಾ, ಇದೀಗ ತನ್ನಲ್ಲಿನ 21 ಕನ್ನಡ ಮಾಧ್ಯಮ ಶಾಲೆಗಳಿಗೆ ಗೇಟ್‌ಪಾಸ್‌ ಗೆ ರೆಡಿ ಮಾಡಿದೆ!

ಮಲ್ಲಿಕಾರ್ಜುನ ಸಿದ್ದಣ್ಣವರ

 ಹುಬ್ಬಳ್ಳಿ:  ಆರೇಳು ದಶಕಗಳಿಂದ ತನ್ನ ನೆಲದಲ್ಲಿ ವಾಸವಾಗಿರುವ ವಲಸಿಗ ಕನ್ನಡಿಗರನ್ನು ಏಕಾಏಕಿ ಒಕ್ಕಲೆಬ್ಬಿಸುವ, ವಲಸಿಗ ಕನ್ನಡಿಗರಿಗೆ ಉದ್ಯೋಗ ತಿರಸ್ಕರಿಸುವ ಮೂಲಕ ಕಿರುಕುಳ ನೀಡುತ್ತಾ ಬಂದಿರುವ ನೆರೆಯ ಪುಟ್ಟ ರಾಜ್ಯ ಗೋವಾ, ಇದೀಗ ತನ್ನಲ್ಲಿನ 21 ಕನ್ನಡ ಮಾಧ್ಯಮ ಶಾಲೆಗಳಿಗೆ ಗೇಟ್‌ಪಾಸ್‌ ಗೆ ರೆಡಿ ಮಾಡಿದೆ!

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ರ ಕಟ್ಟುನಿಟ್ಟಿನ ಅನುಷ್ಠಾನದ ನೆಪದಲ್ಲಿ ‘ತ್ರಿಭಾಷಾ ಸೂತ್ರ’ (ಕೊಂಕಣಿ/ಮರಾಠಿ, ಹಿಂದಿ, ಇಂಗ್ಲಿಷ್) ಜಾರಿ ಮಾಡಿದ್ದರಿಂದ ತಾನೇ ಸ್ಥಾಪಿಸಿರುವ 19 ಸರ್ಕಾರಿ ಶಾಲೆ (15-ಪ್ರಾಥಮಿಕ, 4-ಹಿರಿಯ ಪ್ರಾಥಮಿಕ) ಮತ್ತು 2 ಖಾಸಗಿ ಅನುದಾನಿತ (2-ಹೈಸ್ಕೂಲ್‌) ಶಾಲೆಗಳಿಗೆ ಮರಣ ಶಾಸನ ಬರೆದಿದೆ. ಗೋವಾ ಸರ್ಕಾರದ ಈ ನಿರ್ಧಾರದಿಂದಾಗಿ ಈ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದುತ್ತಿದ್ದ ಸಾವಿರಾರು ಕನ್ನಡಿಗ ಮಕ್ಕಳು ಇದೀಗ ಅತಂತ್ರರಾಗಿದ್ದಾರೆ.

ಕನ್ನಡ ಶಿಕ್ಷಕರೇ ಇಲ್ಲ:

ತ್ರಿಭಾಷಾ ಸೂತ್ರದಡಿ ಆರ್‌-1 ಕೊಂಕಣಿ/ ಮರಾಠಿ, ಆರ್‌-2 ಇಂಗ್ಲಿಷ್, ಆರ್‌-3 ಕೊಂಕಣಿ/ಮರಾಠಿ ಸೇರಿದಂತೆ ಇತರ ಭಾಷಾ ಮಾಧ್ಯಮ ಬೋಧಿಸಲು ಅವಕಾಶವಿದೆ ಎನ್ನುವ ನಿಯಮ ರೂಪಿಸಿ ಕಾನೂನು ಕುಣಿಕೆಯಿಂದ ತಪ್ಪಿಸಿಕೊಂಡಿರುವ ಗೋವಾ ಸರ್ಕಾರ, ಈ 21 ಕನ್ನಡ ಮಾಧ್ಯಮ ಶಾಲೆಗಳಲ್ಲಿ ನಿವೃತ್ತಿ ಇತ್ಯಾದಿ ಕಾರಣಗಳಿಂದ ತೆರವು ಆಗಿರುವ 36 ಬೋಧಕ ಹುದ್ದೆಗಳಿಗೆ ಮರಾಠಿ ಶಿಕ್ಷಕರನ್ನು ನೇಮಿಸಿದೆ.

ಅಲ್ಲದೆ, 2025-26ನೇ ಸಾಲಿನಿಂದ ಈ ತ್ರಿಭಾಷಾ ಸೂತ್ರ ಜಾರಿಗೆ ಬಂದಿದ್ದರೂ ಪ್ರಸಕ್ತ ಸಾಲಿನಿಂದ (2026-27) ಕಟ್ಟುನಿಟ್ಟಾಗಿ ಅನುಷ್ಠಾನ ಆಗುತ್ತಿದೆ. ಹಾಗಾಗಿ, ಈ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಒಂದನೇ ವರ್ಗಕ್ಕೆ ಪ್ರವೇಶ ಪಡೆಯುವ ಮಕ್ಕಳು ಕೊಂಕಣಿ ಇಲ್ಲವೇ ಮರಾಠಿ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವುದು ಕಡ್ಡಾಯ ಆಗಿದ್ದು, ಕನ್ನಡಕ್ಕೆ ಅವಕಾಶವೇ ಇಲ್ಲದಂತಾಗಿದೆ.

ಈಗಾಗಲೇ 3 ರಿಂದ 7ರ ವರೆಗೆ ಓದುತ್ತಿರುವ ಮಕ್ಕಳಿಗೆ ಗಣಿತ, ಪರಿಸರ ವಿಜ್ಞಾನ ಸೇರಿದಂತೆ ಇತರ ವಿಷಯಗಳನ್ನು ಕನ್ನಡ ಮಾಧ್ಯಮದಲ್ಲಿ ಬೋಧಿಸಬಹುದು ಎಂದು ಹೇಳಿದ್ದರೂ ಕನ್ನಡದಲ್ಲಿ ಬೋಧಿಸುವ ಶಿಕ್ಷಕರೂ ಇಲ್ಲ, ಪಠ್ಯವೂ ಪೂರೈಕೆಯಾಗಿಲ್ಲ. ಹಾಗಾಗಿ, ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳು ಈಗ ಮರಾಠಿಯಲ್ಲಿ ಓದುವುದು ಅನಿವಾರ್ಯವಾಗಿದೆ.

ಇನ್ನು, ಅಲ್ಲಿನ ಹೈಸ್ಕೂಲುಗಳನ್ನು ಕಾರವಾರದ ಶಿವಾಜಿ ಸೆಕೆಂಡರಿ ಸ್ಕೂಲ್‌ಗೆ ಅಫಿಲೇಟೆಡ್‌ ಮಾಡಿ ಆ ವಿದ್ಯಾರ್ಥಿಗಳಿಗೆ ಕರ್ನಾಟಕ ಸಿಲೆಬಸ್‌ ಬೋಧಿಸಲಾಗುತ್ತಿತ್ತು. ಈಗ ಅದಕ್ಕೂ ಕೊಕ್ಕೆ ಬಿದ್ದಿದೆ.

ಕನ್ನಡಿಗ ಮಕ್ಕಳು ಅತಂತ್ರ:

ಗೋವಾದಲ್ಲಿ ಈಗ ಕನ್ನಡಿಗರ ಸಂಖ್ಯೆ 4 ಲಕ್ಷ ದಾಟುತ್ತದೆ. ಇವರಲ್ಲಿ ನೂರಾರು ಕುಟುಂಬಗಳು 5, 6 ದಶಕದಿಂದ ಅಲ್ಲಿಯೇ ನೆಲೆಸಿವೆ. ಹಂಗಾಮುವಾರು ವಲಸೆ ಬಂದು-ಹೋಗುವ ಕನ್ನಡಿಗರ ಸಂಖ್ಯೆಯೂ ಸುಮಾರ 2 ಲಕ್ಷ. ಹಾಗಾಗಿ, ಉದ್ಯೋಗ ಅರಸಿ ವಲಸೆ ಹೋಗುವ ಕನ್ನಡಿಗರ ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದು ಅತ್ಯಗತ್ಯ. ಪ್ರಾಥಮಿಕ ಹಂತದಲ್ಲೆ ಮಾತೃಭಾಷೆಯಲ್ಲಿ ಬೀಜಾಕ್ಷರ ಕಲಿಯದೆ ಹೋದರೆ ಆ ಮಕ್ಕಳ ಮೇಲೆ ಆಗುವ ಪರಿಣಾಮ ಊಹೆಗೂ ನಿಲುಕದು.

ಉದ್ಯೋಗ ಅರಸಿ ಗೋವಾಕ್ಕೆ ಹೋದ ಕನ್ನಡಿಗರ ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಕೊಡಿಸುವ ಕಾಳಜಿಯಿಂದ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡದ ವೈ.ಆರ್‌.ಬೆಳಗಲಿ ಅವರು 90ರ ದಶಕದಲ್ಲೇ ವಾಸ್ಕೋದ ಮೂರು ಕಡೆ ಶ್ರೀ ಯಲ್ಲಾಲಿಂಗೇಶ್ವರ ಶಾರದಾ ಮಂದಿರ ಪ್ರೌಢಶಾಲೆಗಳನ್ನು ತೆರೆದು ಅನುಕೂಲ ಕಲ್ಪಿಸಿದ್ದರು. ಅವುಗಳನ್ನು ಅನುದಾನಕ್ಕೆ ಒಳಪಡಿಸಿದ್ದ ಗೋವಾ ಸರ್ಕಾರ ಈಗ ತೆರವಾಗುವ ಹುದ್ದೆಗಳಿಗೆ ಮರಾಠಿ ಶಿಕ್ಷಕರನ್ನು ನೇಮಿಸುವಂತೆ ಹೇಳುತ್ತಿದೆ.

ಸರ್ಕಾರದ ಕನ್ನಡ ವಿರೋಧಿ ನಿಲುವಿನಿಂದಾಗಿ ಪ್ರಸಕ್ತ ಸಾಲಿನಲ್ಲಿ ಯಾವುದೇ ಕನ್ನಡಿಗ ಮಕ್ಕಳು ಮರಾಠಿ ಮಾಧ್ಯಮದಲ್ಲಿ ಓದಲು ಪ್ರವೇಶ ಪಡೆಯುತ್ತಿಲ್ಲ. ಹಾಗಾಗಿ, ಈಗಾಗಲೇ 4 ಶಾಲೆಗಳಿಗೆ ಬೀಗ ಬಿದ್ದಿದೆ. ಇನ್ನುಳಿದ ಶಾಲೆಗಳಲ್ಲಿ ಕನ್ನಡ ಬೋಧಿಸುವವರೇ ಇಲ್ಲ.

ಸಿಎಂ ಸಾವಂತ ಹಾರಿಕೆ ಉತ್ತರ

ಈ ಎಲ್ಲ ಕನ್ನಡ ಮಾಧ್ಯಮ ಶಾಲೆಗಳು ಮರ್ಮಗೋವಾ, ವಾಸ್ಕೋ, ದಾಬೋಲಿಂ ಮತ್ತು ಪರಿವಲಿಂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿವೆ. ಇಲ್ಲಿ ಯಾವುದೇ ಅಭ್ಯರ್ಥಿ ಗೆಲುವು ಸಾಧಿಸಲು ಕನ್ನಡಿಗರ ಮತಗಳೇ ನಿರ್ಣಾಯಕ. ಹಾಗಾಗಿ ‘ಕನ್ನಡ ಸಂಘ, ಜುವಾರಿನಗರ’ ಇವರ ನೇತೃತ್ವದಲ್ಲಿ ಆ ನಾಲ್ಕೂ ಶಾಸಕರೊಂದಿಗೆ ಕನ್ನಡಿಗರ ನಿಯೋಗ ಮುಖ್ಯಮಂತ್ರಿ ಪ್ರಮೋದ ಸಾವಂತ ಅವರನ್ನು ಕಂಡು ಪರಿಸ್ಥಿತಿಯನ್ನು ತಿಳಿಸಿತು.

‘1 ರಿಂದ 10ರವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ಹೆಚ್ಚಿನ ವ್ಯಾಸಂಗ ಮಾಡಲು ಗೋವಾದಲ್ಲಿ ಕನ್ನಡ ಮಾಧ್ಯಮ ಕಾಲೇಜುಗಳಿಲ್ಲ. ಹಾಗಾಗಿ, ಬಾಲ್ಯದಿಂದಲೇ ಕೊಂಕಣಿ, ಮರಾಠಿ, ಹಿಂದಿ, ಇಂಗ್ಲಿಷ್‌ ರೂಢಿಸಿಕೊಂಡರೆ ಅವರ ಭವಿಷ್ಯಕ್ಕೆ ಅನುಕೂಲ ಆಗುತ್ತದೆ ಎನ್ನುವ ಕಾರಣಕ್ಕೆ ಸರ್ಕಾರ ಈ ತ್ರಿಭಾಷಾ ಸೂತ್ರ ಜಾರಿಗೆ ತಂದಿದೆ’ ಎನ್ನುವ ಹಾರಿಕೆ ಉತ್ತರ ನೀಡಿದ್ದಾರೆ.

ನಿರ್ಧಾರ ಪರಿಶೀಲಿಸಿ

ಈ ಗೋವಾವನ್ನು ಕಟ್ಟಿ ಬೆಳೆಸಿದವರು ಮತ್ತು ಈಗಲೂ ಪ್ರತಿಯೊಂದಕ್ಕೂ ಹೆಗಲಾಗಿ ನಿಂತು ಮುನ್ನಡೆಸುವವರು ಕನ್ನಡಿಗರು. ಆದಾಗ್ಯೂ ಸರ್ಕಾರ ಅವರ ಮಾತೃಭಾಷಾ ಶಿಕ್ಷಣದ ಹಕ್ಕನ್ನು ಕಿತ್ತುಕೊಂಡಿರುವುದು ಸರಿಯಲ್ಲ. ಮುಖ್ಯಮಂತ್ರಿಯವರು ತಮ್ಮ ನಿರ್ಧಾರವನ್ನು ಮರುಪರಿಶೀಲಿಸಲಿ.

-ಶಿವಾನಂದ ಬಿಂಗಿ, ಅಧ್ಯಕ್ಷ, ಕನ್ನಡ ಸಂಘ-ಜುವಾರಿನಗರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಝೆನ್ ಜೀ ಹಿಂಸೆ : ಸಂಸತ್ತಿಗೆ ಉತ್ತರಿಸಲು ಶಾ ಸಿದ್ಧ
ರಾಜ್ಯದಲ್ಲಿ ''ತೇರೆ-ಮೇರೆ ಸಪ್ನೆ-ಕೂಡಿ ಬಾಳೋಣ'' ಯೋಜನೆ ಜಾರಿ: ಸಿಎಸ್‌