ಮುಡಗೇರಿ ಅರಣ್ಯದಲ್ಲಿ ಗೋವಾ ಮದ್ಯ ಜಪ್ತಿ, ಸವಾರ ಪರಾರಿ!

KannadaprabhaNewsNetwork |  
Published : Mar 11, 2026, 02:15 AM IST
ವಶಪಡಿಸಿಕೊಂಡ ಮದ್ಯ ಹಾಗೂ ದ್ವಿಚಕ್ರ ವಾಹನ  | Kannada Prabha

ಸಾರಾಂಶ

ಸಿನಿಮೀಯ ಶೈಲಿಯಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಆರೋಪಿಯು ವಾಹನ ಬಿಟ್ಟು ಪರಾರಿಯಾಗಿದ್ದಾನೆ.

ಕನ್ನಡಪ್ರಭ ವಾರ್ತೆ ಕಾರವಾರ

ಜಿಲ್ಲೆಯಲ್ಲಿ ಅಕ್ರಮ ಮದ್ಯ ಸಾಗಾಟದ ವಿರುದ್ಧ ಅಬಕಾರಿ ಇಲಾಖೆ ತನ್ನ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದು, ಮಂಗಳವಾರ ಮುಡಗೇರಿ ಅರಣ್ಯ ಪ್ರದೇಶದ ಬಳಿ ಭರ್ಜರಿ ಕಾರ್ಯಾಚರಣೆ ನಡೆಸಿ ಗೋವಾ ಮದ್ಯ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸಿನಿಮೀಯ ಶೈಲಿಯಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಆರೋಪಿಯು ವಾಹನ ಬಿಟ್ಟು ಪರಾರಿಯಾಗಿದ್ದಾನೆ.

ಅಬಕಾರಿ ಸಿಬ್ಬಂದಿ ಮುಡಗೇರಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಬಿಳಿ ಬಣ್ಣದ ದ್ವಿಚಕ್ರ ವಾಹನವೊಂದು ಅರಣ್ಯದಿಂದ ಮುಡಗೇರಿ ಗ್ರಾಮದ ಕಡೆಗೆ ಅತಿ ವೇಗವಾಗಿ ಬರುತ್ತಿರುವುದು ಕಂಡುಬಂದಿದೆ. ಅನುಮಾನಗೊಂಡ ಅಧಿಕಾರಿಗಳು ವಾಹನ ನಿಲ್ಲಿಸಲು ಸೂಚಿಸಿದರೂ ಸವಾರ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ.

ಅಬಕಾರಿ ಅಧಿಕಾರಿಗಳು ದ್ವಿಚಕ್ರ ವಾಹನ ಬೆನ್ನಟ್ಟಿದ್ದು, ರಸ್ತೆಯ ತಿರುವುಗಳಲ್ಲಿ ಅತಿ ವೇಗವಾಗಿ ವಾಹನ ಚಲಾಯಿಸಿದ ಸವಾರ, ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ವಾಹನದೊಂದಿಗೆ ಕೆಳಕ್ಕೆ ಬಿದ್ದಿದ್ದಾನೆ. ಅಧಿಕಾರಿಗಳು ಹತ್ತಿರ ಬರುತ್ತಿದ್ದಂತೆಯೇ ವಾಹನ ಮತ್ತು ಮದ್ಯದ ಚೀಲವನ್ನು ಅಲ್ಲಿಯೇ ಬಿಟ್ಟು ಆರೋಪಿಯು ಕಾಡಿನೊಳಗೆ ಓಡಿ ಹೋಗಿ ನಾಪತ್ತೆಯಾಗಿದ್ದಾನೆ.

ಪರಿಶೀಲನೆಯ ವೇಳೆ ದ್ವಿಚಕ್ರ ವಾಹನದಲ್ಲಿದ್ದ ಚೀಲದಲ್ಲಿ 750 ಮಿ.ಲೀ.ನ 36 ಗೋವಾ ಸ್ಪೆಷಲ್ ರ್ಫಮ್ ಫೆನ್ನಿ ಬಾಟಲಿಗಳು ಹಾಗೂ 500 ಮಿ.ಲೀ.ನ 12 ಕಿಂಗ್ ಫಿಶರ್ ಸ್ಟ್ರಾಂಗ್ ಬಿಯರ್ ಟಿನ್‌ಗಳು ಪತ್ತೆಯಾಗಿವೆ. ದ್ವಿಚಕ್ರ ವಾಹನ ಹಾಗೂ ಮದ್ಯ ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಅಂದಾಜು ಮೌಲ್ಯ ₹79,800 ಎಂದು ತಿಳಿದುಬಂದಿದೆ. ಜಿಲ್ಲಾ ಅಬಕಾರಿ ತಂಡದ ನಿರೀಕ್ಷಕರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾದ ಆರೋಪಿಯ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನಕಾಚಲಪತಿ ಜಾತ್ರೆ ಸಜ್ಜುಗೊಂಡ ಕನಕಗಿರಿ
ಕಾರ್ಖಾನೆ ಸಮಸ್ಯೆ ಪರಿಹಾರಕ್ಕೆ ಶೀಘ್ರ ಎಚ್‌ಡಿಕೆ ಭೇಟಿ