ಕನ್ನಡಪ್ರಭ ವಾರ್ತೆ ಕಾರವಾರ
ಖಚಿತ ಮಾಹಿತಿಯ ಮೇರೆಗೆ ಅಬಕಾರಿ ಅಧಿಕಾರಿಗಳು ಕಾರವಾರ ವಲಯದ ಮಾರ್ಗ ಸಂಖ್ಯೆ 2ರಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮುಡಗೇರಿ ಅರಣ್ಯ ಪ್ರದೇಶಕ್ಕೆ ಹೋಗುವ ರಸ್ತೆಯ ಬಲಭಾಗದಲ್ಲಿರುವ ಸ್ಮಶಾನದ ಬಳಿ ಅಧಿಕಾರಿಗಳು ಕಾಯುತ್ತಿದ್ದರು. ಈ ವೇಳೆ ಅರಣ್ಯದ ದಾರಿಯಿಂದ ಗ್ರಾಮದ ಕಡೆಗೆ ದ್ವಿಚಕ್ರ ವಾಹನವೊಂದು ಬಂದಿದ್ದು, ಸಮವಸ್ತ್ರದಲ್ಲಿದ್ದ ಅಬಕಾರಿ ಸಿಬ್ಬಂದಿ ಕಂಡ ಕೂಡಲೇ ಸವಾರ ವಾಹನವನ್ನು ರಸ್ತೆಯಲ್ಲೇ ಬಿಟ್ಟು, ಸ್ಮಶಾನದ ಹಿಂಭಾಗದ ದಟ್ಟವಾದ ಅರಣ್ಯದೊಳಗೆ ಓಡಿ ಹೋಗಿ ಪರಾರಿಯಾಗಿದ್ದಾನೆ.
ವಾಹನದಲ್ಲಿದ್ದ ಚೀಲ ಪರಿಶೀಲಿಸಿದಾಗ ಗೋವಾದಲ್ಲಿ ಮಾರಾಟಕ್ಕೆ ಮಾತ್ರ ಸೀಮಿತವಾಗಿದ್ದ 18 ಲೀಟರ್ ಮದ್ಯ, 71.250 ಲೀಟರ್ ಗೋವಾ ಫೆನ್ನಿ ಹಾಗೂ 24 ಲೀಟರ್ ಬಿಯರ್ ಪತ್ತೆಯಾಗಿದೆ. ವಶಪಡಿಸಿಕೊಳ್ಳಲಾದ ಮದ್ಯದ ಅಂದಾಜು ಮೌಲ್ಯ ₹66,700 ಹಾಗೂ ವಾಹನದ ಮೌಲ್ಯ ₹48,000 ಸೇರಿದಂತೆ ಒಟ್ಟು ₹1,14,700 ಮೌಲ್ಯದ ಸ್ವತ್ತನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.ಈ ಕುರಿತು ಅಬಕಾರಿ ನಿರೀಕ್ಷರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ಮುಂದುವರೆದಿದೆ.ಅಂತರ್ ಜಿಲ್ಲಾ ಕಳ್ಳನ ಬಂಧನ:
ಬಂಗಾರ, ಹಣ ಕಳ್ಳತನ ಮಾಡಿದ ಅಂತರ್ ಜಿಲ್ಲಾ ಕಳ್ಳನೊಬ್ಬನನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.ಜೋಯಿಡಾ ತಾಲೂಕಿನ ಅಣಶಿಯ ಕೂಣೆಮಣದ ಸಮೀರ್ ಸೂರಜ ಪಾಟೀಲ ಬಂಧಿತರು. ಈತ ಕಳೆದ ನ. ೧ ರಂದು ಕಣ್ಣಿಗೇರಿ ಸಮೀಪದ ಸಾರಬೈಲಿನ ಮಿಲಾಗ್ರಿ ಸುನೀಲ್ ವಾಜ್ ಅವರ ಮನೆಯೊಳಗೆ ಹೊಕ್ಕು ೧೭ ಗ್ರಾಂ ಬಂಗಾರ ಹಾಗೂ ೨೫ ಗ್ರಾಂ ಬೆಳ್ಳಿ ಸೇರಿ ಒಟ್ಟು ₹೧.೧೩ ಲಕ್ಷ ಮೌಲ್ಯದ ಆಭರಣ ಕದ್ದೊಯ್ದಿದ್ದ.ಕಳೆದ ನ. ೨೧ರಂದು ಯಲ್ಲಾಪುರದ ಬೆಲ್ ರಸ್ತೆ ಪಕ್ಕ ತಾಪಂ ಕಾರ್ಯಾಲಯದ ಬಳಿ ಇರುವ ಸೀತಾಲಕ್ಷ್ಮೀ ಮೆಡಿಕಲ್ಸ್‌ನಿಂದ ₹೪೫ ಸಾವಿರ ಕಳ್ಳತನ ಮಾಡಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಎರಡೂ ಪ್ರಕರಣಗಳಲ್ಲಿ ಕಳ್ಳತನ ಮಾಡಿದ ವಿಚಾರವನ್ನು ಬಂಧಿತ ಸಮೀರ್ ಒಪ್ಪಿಕೊಂಡಿದ್ದಾನೆ. ವಿಚಾರಣೆ ವೇಳೆ ಈತ ಅಂತರ್ ಜಿಲ್ಲಾ ಕಳ್ಳ ಎಂಬುದು ತಿಳಿದು ಬಂದಿದೆ. ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ೧೨ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಿವೆ.