ಕನ್ನಡಪ್ರಭ ವಾರ್ತೆ ಹನೂರು
ಚಿರತೆ ದಾಳಿಗೆ ಮೇಕೆ ಬಲಿಯಾಗಿರುವ ಘಟನೆ ಕಾಂಚಳ್ಳಿ ಗ್ರಾಮದಲ್ಲಿ ಜರುಗಿದೆ.ಹನೂರು ತಾಲೂಕಿನ ಸಮೀಪದ ಸುಳ್ಳೇರಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದ ರೈತ ಮುತ್ತುರಾಜು ಅವರಿಗೆ ಸೇರಿದ ಮೇಕೆ ಚಿರತೆಗೆ ಬಲಿಯಾಗಿರುವ ಘಟನೆ ಸೋಮವಾರ ವರದಿಯಾಗಿದೆ.
ವಿವರ :ಮಲೆ ಮಾದೇಶ್ವರ ವನ್ಯಜೀವಿ ವಿಭಾಗದ ಬಪ್ಪರ್ ಜೋನ್ ವಲಯ ವ್ಯಾಪ್ತಿಯಲ್ಲಿ ಬರುವ ಕಾಂಚಲ್ಲಿ ಗ್ರಾಮದ ರೈತ ಮುತ್ತರಾಜುಗೆ ಸೇರಿದ ಮೇಕೆಯನ್ನು ಕೊಟ್ಟಿಗೆಯಿಂದ ಹೊತ್ತೊಯ್ದು ಮುಸುಕಿನ ಜೋಳದ ತೋಟದ ಜಮೀನಿನ ಮಧ್ಯದಲ್ಲಿ ಸಂಪೂರ್ಣವಾಗಿ ತಿಂದು ಹಾಕಿ ಕಳೆ ಬರಹವನ್ನು ಬಿಟ್ಟು ಹೋಗಿರುವ ಬಗ್ಗೆ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿರತೆ ಸೆರೆಗೆ ಒತ್ತಾಯ :ಕಳೆದ ಹಲವಾರು ತಿಂಗಳುಗಳಿಂದ ಗಂಗನ ದೊಡ್ಡಿ, ಬಸಪ್ಪನ ದೊಡ್ಡಿ, ಪಳನಿಮೇಡು, ದೊಮ್ಮನಗದ್ದೆ ಹಾಗೂ ಇನ್ನಿತರ ಗ್ರಾಮಗಳು ಸೇರಿದಂತೆ ಉಡುತೊರೆ ಹಳ್ಳ ಜಮೀನಿನಂಚಿನಲ್ಲಿಯೇ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಸಾಕುಪ್ರಾಣಿಗಳನ್ನು ಕೊಂದು ತಿನ್ನುತ್ತಿರುವ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಸಾಕಷ್ಟು ಬಾರಿ ರೈತರು ದೂರು ಸಲ್ಲಿಸಿದ್ದರು ಕೂಡ, ಅಧಿಕಾರಿಗಳು ಚಿರತೆ ಸೆರೆಹಿಡಿಯಲು ವಿಫಲರಾಗಿರುವುದರಿಂದ ತೋಟದ ಮನೆಗಳಲ್ಲಿ ವಾಸಿಸುವ ರೈತರ ಪ್ರಾಣ ಹಾನಿ ಸಂಭವಿಸುವ ಮುನ್ನ ಉಪಟಳ ನೀಡುತ್ತಿರುವ ಚಿರತೆಯನ್ನು ಸೆರೆಹಿಡಿಯಬೇಕು ಜೊತೆಗೆ ಸಾಕು ಪ್ರಾಣಿಗಳನ್ನು ಕೊಂದು ತಿನ್ನುತ್ತಿರುವ ಬಗ್ಗೆ ಪರಿಶೀಲಿಸಿ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ತೋಟದ ಮನೆಯಲ್ಲಿ ಕಟ್ಟಿದ್ದ ಮೇಕೆಯನ್ನು ಚಿರತೆ ಹೊತ್ತೊಯ್ದು ಮುಸುಕಿನ ತೋಟದ ಜಮೀನಿನ ಮಧ್ಯದಲ್ಲಿ ತಿಂದು ಹಾಕಿ ತಲೆ ಹಾಗೂ ಕಳೆ ಬರಹವನ್ನು ಅಲ್ಲೇ ಬಿಟ್ಟು ಹೋಗಿರುವುದರಿಂದ ಜಮೀನುಗಳಲ್ಲಿ ವಾಸಿಸುತ್ತಿರುವ ರೈತರು ಭಯಭೀತರಾಗಿದ್ದಾರೆ. ಕೂಡಲೇ ಅರಣ್ಯ ಅಧಿಕಾರಿಗಳು ಉಪಟಳ ನೀಡುತ್ತಿರುವ ಚಿರತೆಯನ್ನು ಸೆರೆಹಿಡಿಯಬೇಕು ಎಂದು ಕಾಂಚಳ್ಳಿ ರೈತ ಮುತ್ತರಾಜು ಒತ್ತಾಯಿಸಿದ್ದಾರೆ.