ಗೋಬಿ ಮಂಚೂರಿ ಮಾಡುವ ವ್ಯಕ್ತಿಯ ಕೊಲೆ

KannadaprabhaNewsNetwork | Published : Oct 19, 2023 12:46 AM

ಸಾರಾಂಶ

ಗೋಬಿಮಂಚೂರಿ ಹಾಕುವ ಕೆಲಸ ಮಾಡುತ್ತಿದ್ದ ವ್ಯಕ್ತಿ ಓರ್ವನನ್ನು ಕಲ್ಲು, ಇಟ್ಟಿಗೆಯಿಂದ ಮನಸೋ ಇಚ್ಛೆ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಅರಸೀಕೆರೆ ಮುಖ್ಯ ರಸ್ತೆಯಲ್ಲಿಯೇ ನಡೆದಿದೆ.
ಕನ್ನಡಪ್ರಭ ವಾರ್ತೆ ಹಾಸನ ಗೋಬಿಮಂಚೂರಿ ಹಾಕುವ ಕೆಲಸ ಮಾಡುತ್ತಿದ್ದ ವ್ಯಕ್ತಿ ಓರ್ವನನ್ನು ಕಲ್ಲು, ಇಟ್ಟಿಗೆಯಿಂದ ಮನಸೋ ಇಚ್ಛೆ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಅರಸೀಕೆರೆ ಮುಖ್ಯ ರಸ್ತೆಯಲ್ಲಿಯೇ ನಡೆದಿದೆ. ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದ ಕೋಟೆ ಬಡಾವಣೆ ನಿವಾಸಿ ಕಾಂತರಾಜು (೪೫) ಎಂಬುವವರು ಕೊಲೆಯಾದವರು. ಕಾಂತರಾಜು ಕಾಟೀಹಳ್ಳಿ ಬಡಾವಣೆಯ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರೆಂದು ಹೇಳಲಾಗಿದೆ. ಮಂಗಳವಾರ ರಾತ್ರಿ ಸ್ನೇಹಿತರೊಂದಿಗೆ ಎಣ್ಣೆ ಕುಡಿದು ಗಲಾಟೆ ಮಾಡಿಕೊಂಡಿರುವ ಬಗ್ಗೆ ಕೇಳಿ ಬಂದಿದೆ. ಮೂವರು ಸೇರಿ ಹೊಡೆದು ಕೊಂದಿರೋ ಸಾಧ್ಯತೆ ಇದ್ದು, ಇಟ್ಟಿಗೆ ಹಾಗೂ ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೊಲೆ ಮಾಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಸ್ಥಳೀಯ ನಿವಾಸಿ ವೇಣುಗೋಪಾಲ್ ಮಾಧ್ಯಮದೊಂದಿಗೆ ಮಾತನಾಡಿ, ಗಲಾಟೆ ನಡೆದು ನಂತರ ಕೊಲೆ ಆಗಿರುವ ಮಾಹಿತಿ ಬಂದಿದ್ದು, ನನಗೆ ಪೂರ್ಣ ಮಾಹಿತಿ ತಿಳಿದಿರುವುದಿಲ್ಲ. ಮೂಲತಃ ಅರಲಕಗೂಡು ನಿವಾಸಿ ಹಾಸನದಲ್ಲಿ ಗೋಬಿಮಂಚೂರಿ ಕೆಲಸ ಮಾಡುತ್ತಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದರು. ಬಿ. ಕಾಟೀಹಳ್ಳಿಯಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ಹೋಟೆಲ್ ಮಾಲೀಕರು ಮಾತನಾಡಿ, ಕೊಲೆಯಾಗಿರುವ ವ್ಯಕ್ತಿ ನಮ್ಮ ಹೋಟೆಲ್‌ನಲ್ಲಿ ಗೋಬಿ ಮಂಚೂರಿ ಕೆಲಸ ಮಾಡುತ್ತಿದ್ದು, ಕೆಲಸ ಬಿಟ್ಟು ಹೋಗಿ ಒಂದು ತಿಂಗಳಾಗಿದ್ದು, ಈಗ ಡಾಬಾದಲ್ಲಿ ಕೆಲಸ ಮಾಡುತ್ತಿರುವುದಾಗಿ ಮಾಹಿತಿ ಇದೆ. ಪ್ರತಿನಿತ್ಯ ಹೆಚ್ಚು ಮದ್ಯಪಾನ ಮಾಡುತ್ತಿದ್ದು, ಹೋಟೆಲ್‌ನಲ್ಲಿ ಸರಿಯಾಗಿ ಕೆಲಸವೇ ಮಾಡುತ್ತಿರಲಿಲ್ಲ. ಇವರ ಮೂಲ ಸ್ಥಳ ಅರಕಲಗೂಡಿನ ಕೋಟೆ ಸ್ಥಳ ಎಂದು ತಿಳಿದು ಬಂದಿದೆ. ಅವನ ಹೆಸರು ಕಾಂತರಾಜು ಎಂದು ಗೊತ್ತಿದೆ. ಮೊದಲ ೬ ತಿಂಗಳು ಕೆಲಸ ಮಾಡಿ ಆಂಧ್ರಕ್ಕೆ ಹೋಗಿ ವಾಪಸ್ ಬಂದು ಎರಡು ತಿಂಗಳಿದ್ದರು. ಮದುವೆ ಆಗಿ ಹೆಂಡತಿ ಬಿಟ್ಟು ಮತ್ತೊಂದು ಮದುವೆ ಆಗಿ ಆಕೆಯಿಂದಲೂ ಕೂಡ ದೂರ ಇರುವುದಾಗಿ ತಿಳಿದು ಬಂದಿದೆ ಎಂದು ಮಾಹಿತಿ ನೀಡಿದರು.

Share this article