ನಿಜ ಜೀವನದಲ್ಲಿ ದೇವರು ನೀಡಿದ ಪಾತ್ರ ಸರಿಯಾಗಿ ನಿಭಾಯಿಸೋಣ-ಗವಿಸಿದ್ದೇಶ್ವರ ಸ್ವಾಮೀಜಿ

KannadaprabhaNewsNetwork |  
Published : Nov 17, 2023, 06:45 PM IST
16ಕೆಪಿಎಲ್9:ಕೊಪ್ಪಳದ ಸಾಹಿತ್ಯ ಭವನದಲ್ಲಿ ಕೊಪ್ಪಳ ಮೀಡಿಯಾ ಕ್ಲಬ್ ಸದಸ್ಯರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜರುಗಿದ ಪತ್ರಿಕಾ ದಿನಾಚರಣೆ ಹಾಗು ಸಂಪತ್ತಿಗೆ ಸವಾಲ್  ನಾಟಕ ಪ್ರದರ್ಶನದ ದಿವ್ಯ ಸಾನಿದ್ಯ ವಹಿಸಿ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಆಶೀವರ್ಚನ ನೀಡಿದರು.  | Kannada Prabha

ಸಾರಾಂಶ

ಆದಾಯ, ಸಂಪತ್ತಿನ ಭರದಲ್ಲಿ ಆರೋಗ್ಯ, ಆನಂದ ಕಣ್ಮರೆಯಾಗುತ್ತಿದೆ. ಮನುಷ್ಯ ಬಿಡುವಿನ ಸಮಯದಲ್ಲಿ ಸಂತೋಷವಾಗಿ ಇರುವುದನ್ನು ಕಲಿಯಬೇಕು. ಮನುಷ್ಯ ಎಲ್ಲ ಗಳಿಸುತ್ತಿದ್ದಾನೆ. ಎಲ್ಲ ಪಡೆದುಕೊಳ್ಳುತ್ತಿದ್ದಾನೆ. ಆದರೆ ಎರಡನ್ನೂ ಮರೆಯುತ್ತಿದ್ದಾನೆ. ನಿಜ ಜೀವನದಲ್ಲಿ ದೇವರು ನೀಡಿದ ಪಾತ್ರವನ್ನು ಪ್ರತಿಯೊಬ್ಬರು ಸರಿಯಾಗಿ ನಿಭಾಯಿಸಬೇಕಿದೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ನಿಜ ಜೀವನದಲ್ಲಿ ದೇವರು ನೀಡಿದ ಪಾತ್ರವನ್ನು ಪ್ರತಿಯೊಬ್ಬರು ಸರಿಯಾಗಿ ನಿಭಾಯಿಸಬೇಕಿದೆ ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ಮೀಡಿಯಾ ಕ್ಲಬ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದಿ. ಮಹಾಂತಮ್ಮ ಸಂಗಣ್ಣ ಗಡಾದ ಶೆಟ್ರ‍ ಮೆಮೋರಿಯಲ್ ಟ್ರಸ್ಟ್, ಗವಿಶ್ರೀ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸೇವಾ ಸಂಸ್ಥೆ ಸಹಯೋಗದಲ್ಲಿ ದಿ.ನೀಲನಗೌಡ ಹಿರೇಗೌಡರ್ ಭಾನಾಪುರ ಸ್ಮರಣಾರ್ಥ, ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಗುರುವಾರ ಸಂಜೆ ಏರ್ಪಡಿಸಿದ್ದ ದಿ.ಪಿ.ಬಿ ಧುತ್ತರಗಿ ವಿರಚಿತ ‘ಸಂಪತ್ತಿಗೆ ಸವಾಲ್’ ನಾಟಕ ಪ್ರದರ್ಶನದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಆದಾಯ, ಸಂಪತ್ತಿನ ಭರದಲ್ಲಿ ಆರೋಗ್ಯ, ಆನಂದ ಕಣ್ಮರೆಯಾಗುತ್ತಿದೆ. ಮನುಷ್ಯ ಬಿಡುವಿನ ಸಮಯದಲ್ಲಿ ಸಂತೋಷವಾಗಿ ಇರುವುದನ್ನು ಕಲಿಯಬೇಕು. ಮನುಷ್ಯ ಎಲ್ಲ ಗಳಿಸುತ್ತಿದ್ದಾನೆ. ಎಲ್ಲ ಪಡೆದುಕೊಳ್ಳುತ್ತಿದ್ದಾನೆ. ಆದರೆ ಎರಡನ್ನೂ ಮರೆಯುತ್ತಿದ್ದಾನೆ ಎಂದರು.ವಿಲಿಯಂ ಶೇಕ್ಸ್ ಪೀಯರ್ ಅತ್ಯಂತ ದೊಡ್ಡ ನಾಟಕಕಾರ. ಆತನ ತನ್ನ ನಾಟಕದಲ್ಲಿ ಜಗತ್ತು ಒಂದು ನಾಟಕ ಮಂದಿರ ಎಂದು ಬರೆಯುತ್ತಾನೆ. ಜೀವಿಗಳು ಪಾತ್ರಧಾರಿಗಳು. ನಿರ್ದೇಶನ ಮಾಡುವ ದೇವರು ನಾಟಕಕಾರ. ದೇವರ ನಿರ್ದೇಶನ ಇಲ್ಲದೇ ಯಾವ ಪಾತ್ರ, ಯಾವ ಕ್ರಿಯೆ ಸಹ ನಡೆಯುವುದಿಲ್ಲ. ಮನುಷ್ಯ ಎಷ್ಟೇ ಬುದ್ಧಿವಂತ ಆಗಿರಬಹುದು. ಆದರೆ ನಾವು ಬಂಗಾರ ತಯಾರು ಮಾಡುವ ಫ್ಯಾಕ್ಟರಿ ಹಾಕಿದ್ದೇವೆಯೇ ಹೊರತು ವಿಜ್ಞಾನ ಎಷ್ಟೇ ಮುಂದುವರೆದು ರಕ್ತ ತಯಾರಿಸುವ ಫ್ಯಾಕ್ಟರಿ ತಯಾರು ಮಾಡಲು ಆಗದು ಎಂದರು.

ಬದುಕೆಂಬ ಈ ನಾಟಕದ ವೇದಿಕೆಗೆ ಒಂದೇ ಎಂಟ್ರಿ, ಒಂದೇ ಎಕ್ಸಿಟ್‌. ನಿಸರ್ಗದ ಮನುಷ್ಯನ ಎಂಟ್ರಿಗೆ ಈ ಭೂಮಿ ಮೇಲೆ ಮರವೊಂದರಿಂದ ಹುಟ್ಟಿದಾಗ ತೊಟ್ಟಿಲು ತಯಾರಿಸಿದರೆ, ಎಕ್ಸಿಟ್ ಆಗುವಾಗ ಮರಣದ ವೇಳೆ ಮರವೊದರಿಂದ ಚಟ್ಟ ತಯಾರಿ ಮಾಡಿ ದೇವರು ಇಟ್ಟಿರುತ್ತಾನೆ. ಬದುಕಿನಲ್ಲಿ ನಮ್ಮ ಪಾತ್ರ ಸರಿಯಾಗಿ ನಿಭಾಯಿಸಬೇಕು ಎಂದರು.ಮೀಡಿಯಾ ಕ್ಲಬ್ ಕಾರ್ಯದರ್ಶಿ ಪತ್ರಕರ್ತ ರವೀಂದ್ರ ವಿ.ಕೆ. ಮಾತನಾಡಿ, ನಾಟಕ ಪ್ರದರ್ಶನ ಮಾಡಿದ್ದೇವೆ. ವೃತ್ತಿ ಜೊತೆಗೆ ಕಲೆಗೂ ಆದ್ಯತೆ ನೀಡಿದ್ದೇವೆ. ಸುದ್ದಿಯೊಂದಿಗೆ ಓಡುವ ಪತ್ರಕರ್ತರು ಅಭಿನಯಕ್ಕೂ ಆದ್ಯತೆ ನೀಡಿದ್ದೇವೆ ಎಂದರು.ಸಾಧಕರಾದ ಕೃಷಿಕ ಸಿದ್ದನಗೌಡ ಹಿರೇಗೌಡ್ರು, ಚನ್ನಬಸಮ್ಮ ಹಿರೇಗೌಡ್ರು, ಜಾನಪದ ಕಲಾವಿದ ಡಾ. ಜೀವನಸಾಬ್ ಬಿನ್ನಾಳ, ಪಿ.ಬಿ. ಧುತ್ತರಗಿ ಪುತ್ರಿ ಶ್ರೀದೇವಿ ಕೋಮಾರ, ಮಲ್ಲಯ್ಯಸ್ವಾಮಿ ಕೋಮಾರ, ಸಾಹಿತಿ ಬಸವರಾಜ ಬಿನ್ನಾಳ, ಗಾಯಕ ಬಾಷಾ ಹಿರೇಮನಿ ಅವರನ್ನು ಸನ್ಮಾನಿಸಲಾಯಿತು.ಬಾಲಕಿ ಕೃಷಿಕ ಭರತನಾಟ್ಯಗೈದಳು. ಕಲಾವಿದ ಶರಣಪ್ಪ ಬಾಚಲಾಪುರ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಬಸವರಾಜ ರಾಯರಡ್ಡಿ, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್, ಎಡಿಸಿ ಸಾವಿತ್ರಿ ಕಡಿ, ಎಸಿ ಮಹೇಶ ಮಾಲಗಿತ್ತಿ, ಎಸ್ಪಿ ಯಶೋದಾ ವಂಟಗೋಡೆ, ನೌಕರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣನವರ್, ಜೆಡಿಎಸ್ ಜಿಲ್ಲಾಧ್ಯಕ್ಷ ವಿರೇಶ ಮಹಾಂತಯ್ಯನಮಠ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಭುಲಿಂಗೇಗೌಡ, ರಾಜ್ಯ ವಿಕಲಚೇತನ ಸಂಘದ ಅಧ್ಯಕ್ಷ ಬೀರಪ್ಪ ಅಂಡಗಿ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ. ಕಣವಿ, ನ್ಯಾಯವಾದಿ ಆರ್.ವಿ. ಪಾನಘಂಟಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ , ಸಾಹಿತಿ ಮಹಾಂತೇಶ ಮಲ್ಲನಗೌಡ, ಪಂಪಾಪತಿ ರಾಟೆ, ಗವಿಸಿದ್ದಪ್ಪ ಚಿನ್ನೂರು, ರುದ್ರೇಶಪ್ಪ, ಕೆಎಂಎಫ್ ನಿರ್ದೇಶಕ ಯಂಕನಗೌಡ್ರು ಹಿರೇಗೌಡ್ರು, ಮಂಜುಳಾ ಕರಡಿ ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ