ಗೋಕರ್ಣ: ಗುರುಗಳು ನಮ್ಮನ್ನು ಉದ್ಧರಿಸಲು ಲೋಕದಲ್ಲಿ ಪ್ರಕಟಗೊಳ್ಳುತ್ತಾರೆ. ಗುರು ದೇವರು ನೀಡುವ ಆಶೀರ್ವಾದ. ಪಾಪದ ಕುಂಡದಲ್ಲಿರುವ ನಮ್ಮನ್ನು ಅನುಗ್ರಹಿಸಲು ಗುರು ಅವತಾರವೆತ್ತಿ ಬರುತ್ತಾರೆ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು 35ನೇ ದಿನವಾದ ಶನಿವಾರ ಆತ್ಮವಿದ್ಯಾ ಆಖ್ಯಾಯಿಕಾ ಪ್ರವಚನದ ಎಂಪಿ3 ಅವತರಣಿಕೆ ಅನಾವರಣಗೊಳಿಸಿ ಆಶೀರ್ವಚನ ನೀಡಿದರು. ಗುರು ಇಲ್ಲದಿದ್ದರೆ ನಮ್ಮ ಬದುಕು ಅರ್ಥಹೀನ ಎಂದು ಬಣ್ಣಿಸಿದರು.ರಾಮಾಯಣದಲ್ಲಿ ದಶರಥನ ಧ್ವನಿ ಬಗ್ಗೆ ದುಂದುಬಿಯ ನಾದಕ್ಕೆ ಸದೃಶವಾದ ನಾದ; ಗಂಭೀರ, ಮಾತುಗಳು ಮತ್ತೆ ಮತ್ತೆ ಅನುರಣಿಸುವಂಥದ್ದು; ಗುಡುಗಿನ ಧ್ವನಿ, ರಾಜಲಕ್ಷಣದ ಧ್ವನಿ, ಕೇಳಿದ ತಕ್ಷಣವೇ ಆಪ್ಯಾಯಮಾನವಾಗುವ, ಉಪಮೆ ಇಲ್ಲದ ಧ್ವನಿ ಎಂಬ ಉಲ್ಲೇಖ ವಾಲ್ಮೀಕಿ ರಾಮಾಯಣದಲ್ಲಿದೆ. ದೊಡ್ಡ ಗುರುಗಳ ಧ್ವನಿಯೂ ಅಂಥದ್ದೇ ಆಪ್ಯಾಯಮಾನ ಧ್ವನಿ ಎಂದು ಬಣ್ಣಿಸಿದರು.ಅಶೋಕೆಗೆ ಬರಲು ದೊಡ್ಡಗುರುಗಳು ಆಶಿಸಿದ್ದರು. ಆದರೆ ಸಾಧ್ಯವಾಗಿರಲಿಲ್ಲ. ಇಂದು ಅವರ ಪ್ರವಚನದ ಧ್ವನಿಯನ್ನು ಎಲ್ಲರೂ ಕೇಳುವುದು ಸಾಧ್ಯವಾಯಿತು. ಅವರ ಶುಭಾಗಮನದ ಪ್ರತೀಕ ಇದಾಗಿದೆ. ದೊಡ್ಡಗುರುಗಳ ಭಾವಪ್ರಕಾಶ, ಅಂತರಂಗ ಆ ಕೃತಿಯ ರೂಪದಲ್ಲಿ ಪ್ರಕಟಗೊಂಡಿದೆ. ಇಂಥ ಅಪೂರ್ವ ಕೃತಿ ಅನಾವರಣಗೊಂಡಿರುವುದು ಅರ್ಥಪೂರ್ಣ ಎಂದು ಬಣ್ಣಿಸಿದರು.ದೊಡ್ಡಗುರುಗಳ ವಿದ್ಯೆ, ಶಾಸ್ತ್ರಜ್ಞಾನ, ವ್ಯವಹಾರ ಜ್ಞಾನ ಅತ್ಯಪೂರ್ವ. ನಮ್ಮ ಆತ್ಮ, ಹೃದಯದಲ್ಲಿ ಗುರುವಾಣಿ ತುಂಬಿರಲಿ ಎಂದು ಹಾರೈಸಿದರು.ಇಂದು ಮೂಲದತ್ತ ಶಿಷ್ಯಗಂಗೆ ಮಂಗಳೂರಿನಿಂದ ಹರಿದು ಬಂದಿದೆ. ಬೃಹತ್ ಸಂಖ್ಯೆಯಲ್ಲಿ ಶಿಷ್ಯಭಕ್ತರು ಆಗಮಿಸಿದ್ದಾರೆ. ಈ ಭಕ್ತಿಗೆ ಉಭಯ ಗುರುಗಳ ಆಶೀರ್ವಾದ ಲಭಿಸಿದೆ. ಗುರುವಿನೆಡೆಗೆ ಸದಾ ಹರಿಯುವ ಈ ಶಿಷ್ಯವರ್ಗ ಸಂತೋಷ ತರುವಂಥದ್ದು. ಈ ಚಾತುರ್ಮಾಸ್ಯದ ಶುಭ ಸಂದರ್ಭದಲ್ಲಿ ಎಲ್ಲ ಶಿಷ್ಯರಿಗೆ ಪುಣ್ಯಸಂಚಯನವಾಗಲಿ ಎಂದರು.ಕಾಲ ಪ್ರವಚನ ಸರಣಿ ಮುಂದುವರಿಸಿದ ಶ್ರೀಗಳು, ಆಯುರ್ವೇದಕ್ಕೆ ಜ್ಯೋತಿಷ್ಯ ಕಡ್ಡಾಯವಾಗಬೇಕು. ಆಯುರ್ವೇದದಲ್ಲಿ ಜ್ಯೋತಿಷ್ಯಕ್ಕೆ ದೊಡ್ಡ ಸ್ಥಾನವಿದೆ. ಜಾತಕದಿಂದ ಆರೋಗ್ಯ, ರೋಗ, ಯಾವ ಅಂಗದಲ್ಲಿ ರೋಗವಿದೆ, ಯಾವ ಧಾತು ರೋಗಕ್ಕೆ ಕಾರಣವಾಗಿದೆ ಎನ್ನುವುದನ್ನು ತಿಳಿಯಬಹುದು. ಕಾಯಿಲೆಕಾರಕ ಗ್ರಹದ ದಶಾಭುಕ್ತಿಯಲ್ಲಿ ಆ ರೋಗ ಬರಬಹುದು. ಜ್ಯೋತಿಷ್ಯದ ಮೂಲಕ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಅವಕಾಶವಿದೆ ಎಂದರು.