
ಕಾರವಾರ:
ನಡುಗಡ್ಡೆಯಲ್ಲಿರುವ ದೇವಿಯ ದರ್ಶನ ಪಡೆಯಲು ಭಕ್ತರಿಗೆ ಅನುಕೂಲವಾಗುವಂತೆ ನಂದನಗದ್ದಾದ ಸಂತೋಷಿಮಾತಾ ದೇವಸ್ಥಾನದ ಬಳಿಯ ಕಾಳಿನದಿಯ ದಡದಿಂದ ದೋಣಿಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ವಿಶಿಷ್ಠವಾದ ದೋಣಿ ಪಯಣ ಮತ್ತು ದೇವಿಯ ದರ್ಶನದ ಅನುಭವ ಪಡೆಯುವುದಕ್ಕಾಗಿಯೇ ಜಿಲ್ಲೆಯಷ್ಟೇ ಅಲ್ಲದೇ, ನೆರೆಯ ಗೋವಾ, ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಿಂದಲೂ ಆಗಮಿಸಿದ್ದ ನೂರಾರು ಭಕ್ತರು ದೋಣಿಗಳ ಮೂಲಕ ತೆರಳಿ ಕಾಳಿಕಾ ಮಾತೆಯ ದರ್ಶನ ಪಡೆದರು.
ಜಾತ್ರೆಯ ಮೊದಲ ದಿನದಂದು ಹೋಮ-ಹವನ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಲಾಯಿತು. ಗುರುವಾರದಂದು ಭಕ್ತರು ದೇವಿಯ ಸನ್ನಿಧಿಯಲ್ಲಿ ದೀಪ ಹಚ್ಚುವ ಮೂಲಕ ಹಾಗೂ ದೇವಿಗೆ ಪ್ರಿಯವಾದ ಲಿಂಬೆ ಹಣ್ಣಿನ ಹಾರ ಅರ್ಪಿಸುವ ಮೂಲಕ ತಮ್ಮ ಇಷ್ಟಾರ್ಥ ಈಡೇರುವಂತೆ ಪ್ರಾರ್ಥಿಸಿದರು.ಜಾತ್ರೆಯ ಹಿನ್ನಲೆ ತಾಲೂಕಾಡಳಿತದಿಂದ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದ್ದು, ದೋಣಿಯಲ್ಲಿ ತೆರಳುವ ಭಕ್ತರಿಗೆ ಕಡ್ಡಾಯವಾಗಿ ಲೈಫ್ ಜಾಕೆಟ್ ಧರಿಸುವಂತೆ ಸೂಚನೆ ನೀಡಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಭಕ್ತರು ದೋಣಿಗಳಲ್ಲಿ ಹೊರಡುವ ಸಂತೋಷಿಮಾತಾ ದೇವಸ್ಥಾನ ಹಾಗೂ ಕಾಳಿಕಾ ಮಾತಾ ದ್ವೀಪದಲ್ಲೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಯಾವುದೇ ಅವಘಡ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಯಿತು.ಹೊಸ ವರ್ಷಾಚರಣೆ ವೇಳೆ ಹಲ್ಲೆ; ದೂರು ಪ್ರತಿದೂರು ದಾಖಲು
ಕಾರವಾರ ತಾಲೂಕಿನ ಕಿನ್ನರ ಗ್ರಾಮದಲ್ಲಿ ಹೊಸ ವರ್ಷಾಚರಣೆಯ ಸಂಭ್ರಮದ ವೇಳೆ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ, ಪರಸ್ಪರ ಹಲ್ಲೆ ನಡೆಸಿಕೊಂಡ ಘಟನೆ ನಡೆದಿದೆ. ಈ ಸಂಬಂಧ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿದೆ.ಮೊದಲನೇ ಪ್ರಕರಣದಲ್ಲಿ ಕಿನ್ನರದ ಗುಣಸುಭಾದ ಸಚಿನ್ ಚಾಂದೋಬಾ ನಾಗೇಕರ (45) ದೂರು ನೀಡಿದ್ದಾರೆ. ಡಿ.31ರ ರಾತ್ರಿ ತಾನು, ತನ್ನ ಸಹೋದರರಾದ ಹರೀಶ, ಸುನೀಲ ಮತ್ತು ಮಗ ಸರ್ವೇಶ ಅವರೊಂದಿಗೆ ಊಟ ಮುಗಿಸಿ ಬೈಕ್ ಮೇಲೆ ಮನೆಗೆ ಮರಳುತ್ತಿದ್ದಾಗ, ಮಾಳಿಪೊತ್ ವಾಡಾ ಹತ್ತಿರ ರಸ್ತೆಯಲ್ಲಿ ಆರೋಪಿಗಳಾದ ಉದ್ದಾಸ ಮೋಹನ ಗೋವೇಕರ, ಸೈರೋಬಾ ಮತ್ತು ಪ್ರಸಾದ ಗೋವೇಕರ "ಓಲ್ಡ್ ಮ್ಯಾನ್ " ಸುಟ್ಟು ಸಂಭ್ರಮಿಸುತ್ತಿದ್ದರು. ಈ ವೇಳೆ ತಮ್ಮ ಬೈಕ್ ಅಡ್ಡಗಟ್ಟಿದ ಉದ್ದಾಸ, ಕುರ್ಚಿಯಿಂದ ಬೈಕ್ ಗೆ ಹೊಡೆದಿದ್ದಲ್ಲದೆ, ಜಗಳ ತೆಗೆದು ತನ್ನನ್ನು ರಸ್ತೆ ಪಕ್ಕದಲ್ಲಿದ್ದ ಬೆಂಕಿಯ ಮೇಲೆ ನೂಕಿದ್ದಾರೆ. ಇದರಿಂದ ಕೈ ಮತ್ತು ಕಾಲಿನ ತೊಡೆಗೆ ಸುಟ್ಟ ಗಾಯಗಳಾಗಿವೆ ಎಂದು ಸಚಿನ್ ಆರೋಪಿಸಿದ್ದಾರೆ. ಅಲ್ಲದೆ ತನ್ನ ಸಹೋದರರಿಗೂ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಇದಕ್ಕೆ ಪ್ರತಿಯಾಗಿ ನಿವೃತ್ತ ಸೈನಿಕರಾಗಿರುವ ಉದ್ದಾಸ ಮೋಹನ ಗೋವೇಕರ (41) ಪ್ರತಿದೂರು ನೀಡಿದ್ದಾರೆ. ತಾವು ಕುಟುಂಬಸ್ಥರೊಂದಿಗೆ ಮನೆಯ ಮುಂದೆ ಶಾಂತಿಯುತವಾಗಿ ಓಲ್ಡ್ ಮ್ಯಾನ್‌ಗೆ ಬೆಂಕಿ ಹಾಕಿ ಹೊಸ ವರ್ಷ ಆಚರಿಸುತ್ತಿದ್ದಾಗ, ಬೈಕ್ ನಲ್ಲಿ ಬಂದ ಸಚಿನ್, ಹರೀಶ ಮತ್ತು ಸುನೀಲ ನಾಗೇಕರ ಅವಾಚ್ಯ ಶಬ್ದಗಳಿಂದ ನಿಂದಿಸಿ ಜಗಳ ತೆಗೆದಿದ್ದಾರೆ. ಅಲ್ಲದೆ ಆರೋಪಿ ಸಚಿನ್ ಬೆಂಕಿಯಲ್ಲಿದ್ದ ಉರಿಯುವ ಕೋಲನ್ನು ತೆಗೆದುಕೊಂಡು ತನ್ನ ಬೆನ್ನಿಗೆ ಬಾರಿಸಿ ಗಾಯಗೊಳಿಸಿದ್ದಾರೆ. ಅಲ್ಲದೆ ತಮ್ಮ ಪತ್ನಿಗೂ ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.ಈ ಎರಡೂ ಘಟನೆಗಳಿಗೆ ಸಂಬಂಧಿಸಿದಂತೆ ಕಾರವಾರ ಗ್ರಾಮೀಣ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.