ನಾಡಿನ ಮೇಲೆ ವನದೇವತೆ ಸಿಗಂದೂರುದೇವಿ ದಯೆ: ಶ್ರೀಗಳು

KannadaprabhaNewsNetwork |  
Published : Jan 15, 2024, 01:45 AM IST
14ಬ್ಯಾಕೋಡು 02: ಸೀಗೆ ಕಣಿವೆಯಲ್ಲಿ  ಶ್ರೀ ಸಚ್ಚಿದಾನಂದ ಸ್ವಾಮೀಜಿ. ಪೀಠಾಧಿಪತಿಗಳು ಬ್ರಹ್ಮಶ್ರೀ ನಾರಾಯಣ ಗುರುಮಠ ಶಿವಗಿರಿ, ಕೇರಳ ಇವರು ಧರ್ಮಜೋತಿಗೆ ಚಾಲನೆ ನೀಡಿದರು. | Kannada Prabha

ಸಾರಾಂಶ

ಮಲೆನಾಡಿನ ವನದೇವತೆ ಸಿಗಂದೂರು ಚೌಡಮ್ಮದೇವಿ ನಾಡಿನ ಜನರನ್ನು ಪೊರೆಯುವ ಆರಾಧ್ಯ ದೇವಿಯಾಗಿದ್ದಾಳೆ. ಧರ್ಮ ರಕ್ಷಣೆಯೊಂದಿಗೆ ನಾಡಿನ ಶ್ರೇಯಸ್ಸಿಗೆ ದೇವಿ ಆಶೀರ್ವಾದ ಇರುತ್ತದೆ ಎಂದು ಕೇರಳದ ಶಿವಗಿರಿಯ ನಾರಾಯಣ ಗುರು ಪೀಠದ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಸ್ವಾಮೀಜಿ ಸಿಗಂದೂರು ಜಾತ್ರೆ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬ್ಯಾಕೋಡು

ಮಲೆನಾಡಿನ ವನದೇವತೆ ಸಿಗಂದೂರು ಚೌಡಮ್ಮದೇವಿ ನಾಡಿನ ಜನರನ್ನು ಪೊರೆಯುವ ಆರಾಧ್ಯ ದೇವಿ. ಧರ್ಮ ರಕ್ಷಣೆಯೊಂದಿಗೆ ನಾಡಿನ ಶ್ರೇಯಸ್ಸಿಗೆ ದೇವಿಯ ಆಶೀರ್ವಾದ ಇರುತ್ತದೆ ಎಂದು ಕೇರಳದ ಶಿವಗಿರಿಯ ನಾರಾಯಣ ಗುರು ಪೀಠದ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಸ್ವಾಮೀಜಿ ನುಡಿದರು.

ಸೀಗೆಕಣಿವೆಯಲ್ಲಿ ಭಾನುವಾರ ಸಿಗಂದೂರು ಜಾತ್ರೆಗೆ ಧರ್ಮಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದ ಅವರು, ಹಿಂದುಳಿದ ವರ್ಗಗಳಿಗೆ ಸ್ವಾಭಿಮಾನ ನೀಡಿದ್ದ ಸಂತ ನಾರಾಯಣಗುರುಗಳು ಜಗತ್ತಿಗೆ ಮಾದರಿಯಾದರು. ಬುದ್ದ, ಬಸವ, ಗಾಂಧಿ ಮತ್ತು ನಾರಾಯಣ ಗುರುಗಳ ತತ್ವಗಳು ಇಂದಿಗೂ ಮನುಕುಲಕ್ಕೆ ದಾರಿದೀಪವಾಗಿವೆ. ಅನುವಂಶಿಕ ಧರ್ಮದರ್ಶಿ ರಾಮಪ್ಪ ಅವರ ಧರ್ಮಕಾರ್ಯಗಳು ಹೀಗೇ ಮುಂದುವರಿಯಲಿ. ಅವರಿಗೆ ನಾಡಿನ ಸದ್ಭಕ್ತರ ಬೆಂಬಲ ಇದೆ ಎಂದು ಹೇಳಿದರು.

ಕೇರಳ ವರ್ಕಲ್ ಮಠದ ಸತ್ಯಾನಂದ ಸ್ವಾಮೀಜಿ ಮಾತನಾಡಿ, ಉತ್ತರಾಯಣ ಪುಣ್ಯಕಾಲದಲ್ಲಿ ದೇವಿಯ ಜಾತ್ರೆ ನಡೆಯುತ್ತಿದ್ದು, ಎಲ್ಲರಿಗೂ ಸನ್ಮಂಗಳ ಉಂಟುಮಾಡಲಿ ಎಂದು ಹೇಳಿದರು.

ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದ ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಧ್ಯಕ್ಷ ತಿಮ್ಮೇಗೌಡ ಮಾತನಾಡಿ, ಸಮಾಜದ ಆಡಳಿತ ಮಂಡಳಿಯಿರುವ ಈ ದೇವಾಲಯ ಅಭಿವೃದ್ಧಿ ಮತ್ತು ರಕ್ಷಣೆಯ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.

ಶಿಕ್ಷಣ ಸಚಿವ ಮಧುಬಂಗಾರಪ್ಪ ಮಾತನಾಡಿ, ಶ್ರೀಕ್ಷೇತ್ರದ ಮಹಿಮೆ ಅಪಾರವಾಗಿದೆ. ಸಿಗಂದೂರು ಆಡಳಿತದಲ್ಲಿ ನಮ್ಮ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.

ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಸಿಗಂದೂರು ಸರ್ವಧರ್ಮದ, ಸರ್ವಜಾತಿಯ ಭಕ್ತರ ಕೇಂದ್ರವಾಗಿದೆ. ಈ ಕ್ಷೇತ್ರ ದೇಶದ ಭಕ್ತಿಭಾವದ ಕೇಂದ್ರವಾಗಿದೆ ಎಂದು ಹೇಳಿದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಮಳಲಿ ಮಠದ ಡಾ.ನಾಗಭೂಷಣ್ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗುರುವಿನಲ್ಲಿ ಶ್ರದ್ಧೆ, ದೇವರಲ್ಲಿ ಭಕ್ತಿ ಇದ್ದರೆ ಸಾಧನೆ ಮಾಡಬಹುದು. ರಾಮಪ್ಪನವರ ಶ್ರಮ, ತಾಳ್ಮೆ ಸಿಗಂದೂರು ಕ್ಷೇತ್ರ ಇಷ್ಟು ದೊಡ್ಡದಾಗಿ ಬೆಳೆಯಲು ಕಾರಣವಾಗಿದೆ ಎಂದು ಹೇಳಿದರು.

ಧರ್ಮದರ್ಶಿ ಡಾ. ಎಸ್.ರಾಮಪ್ಪ ಅವರು ಮಾತನಾಡಿ, ಭಕ್ತರ ಪ್ರೀತಿ, ಸರ್ಕಾರದ ಸಹಕಾರ ಹಾಗೂ ಧರ್ಮದ ರಕ್ಷಣೆಯಿಂದಾಗಿ ಎಲ್ಲವೂ ಮುಂದುವರಿಯುತ್ತದೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ್ ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್, ಪ್ರಮುಖರಾದ ಮಲ್ಲಿಕಾರ್ಜುನ ಹಕ್ರೆ, ಸೂರಜ್ ನಾಯ್ಕ್, ಸೈದಪ್ಪ ಗುತ್ತೇದಾರ್, ತುಮರಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಶ್ರೀದೇವಿ ರಾಮಚಂದ್ರ, ದೇವಾಲಯದ ಪ್ರಧಾನ ಕಾರ್ಯದರ್ಶಿ ಹೆಚ್.ಆರ್.ರವಿಕುಮಾರ್ ಸೇರಿದಂತೆ ಹಲವ ಗಣ್ಯರು ಹಾಜರಿದ್ದರು.

ವಿವಿಧ ಜಾನಪದ ಕಲಾ ತಂಡಗಳ ಆಕರ್ಷಕ ನೃತ್ಯದಿಂದ ಜಾತ್ರೆಗೆ ಸಾಂಸ್ಕೃತಿಕ ಮೆರಗು ಬಂದಿತ್ತು. ದೇವಿಯ ಮೂಲಸ್ಥಾನದಿಂದ ಜ್ಯೋತಿ ಮೆರವಣಿಗೆ ಮೂಲಕ ಸಿಗಂದೂರು ದೇವಾಲಯಕ್ಕೆ ಕರೆತರಲಾಯಿತು. ವಿವಿಧ ಪೂಜಾ ವಿಧಿವಿಧಾನಗಳು ನಡೆದವು. ಸಂಜೆ ದೇಗುಲದಲ್ಲಿ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿತ್ತು.

- - - ಕೋಟ್ಸ್‌ ರಾಮಪ್ಪಾಜಿ ಅವರ ಶ್ರಮದಿಂದ ಸಿಗಂದೂರು ಚೌಡೇಶ್ವರಿ ದೇವಾಲಯ ಇಂದು ರಾಜ್ಯದಲ್ಲಿ ಪ್ರಸಿದ್ಧಿಯಾಗಿದೆ. ತಾಯಿ ಆಶೀರ್ವಾದ ಪಡೆಯಲು ಬರುವ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಸರ್ಕಾರ ಮುಂದಿನ ದಿನಗಳಲ್ಲಿ ದೇವಾಲಯಕ್ಕೆ ಬೇಕಿರುವ ಅಗತ್ಯ ಸೌಲಭ್ಯ ಕೊಡಲಿದೆ. ಈ ಜಾತ್ರೆ ಸಂದರ್ಭ ನಾಡಿನ ಸಮಸ್ತ ಜನತೆಗೆ ಶುಭವಾಗಲಿ ಎಂದು ಹಾರೈಸುವೆ.

- ಮಧು ಬಂಗಾರಪ್ಪ, ಶಿಕ್ಷಣ ಸಚಿವ

- - - ಬಾಕ್ಸ್

ಸಿಗಂದೂರಿನಲ್ಲಿ ಸಂಕ್ರಮಣ ಜಾತ್ರೆ ಸಂಪನ್ನ

ಮಕರ ಸಂಕ್ರಮಣ ಪ್ರಯುಕ್ತ ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ ಜಾತ್ರಾ ಮಹೋತ್ಸವ ವಿವಿಧ ದಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಮೊದಲ ದಿನದ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು.

ಮೂಲಸ್ಥಾನದಲ್ಲಿ ಮುಂಜಾನೆ 5 ಗಂಟೆಯಿಂದ ನಿರಂತರವಾಗಿ ಪುಣ್ಯಾಹ ಶುದ್ಧಿ, ನವಚಂಡಿಕಾ ಹೋಮ, ಮಹಾಭಿಷೇಕ, ಹೂವಿನ ಮತ್ತು ಆಭರಣ ಅಲಂಕಾರ, ಮಹಾಪೂಜೆ ಬಳಿಕ ಕೇರಳದ ಶಿವಗಿರಿಯ ಶ್ರೀ ನಾರಾಯಣ ಗುರು ಮಠದ ಬ್ರಹ್ಮಶ್ರೀ ಸಚ್ಚಿದಾನಂದ ಶ್ರೀ ಧರ್ಮಜ್ಯೋತಿಗೆ ಚಾಲನೆ ನೀಡಿದರು.

ಬಳಿಕ ಪಲ್ಲಕ್ಕಿ ಉತ್ಸವದೊಂದಿಗೆ ಧರ್ಮಜ್ಯೋತಿಯು ಡೊಳ್ಳು ಕುಣಿತ, ಭಜನೆ, ಕೋಲಾಟ, ಮತ್ತು ಸ್ಥಳೀಯ ಸರ್ವಧರ್ಮ ಮಹಿಳೆಯರಿಂದ ಪೂರ್ಣಕುಂಭ ಸ್ವಾಗತದೊಂದಿಗೆ ದೇವಸ್ಥಾನ ಪ್ರವೇಶಿಸಿ, ಮಹಾಮಂಗಳಾರತಿ, ಮಹಾಪೂಜೆ ನಡೆಯಿತು. ಎಲ್ಲ ಧಾರ್ಮಿಕ ವಿಧಿ-ವಿಧಾನಗಳಲ್ಲಿ ಡಾ.ರಾಮಪ್ಪ ಕುಟುಂಬದವರು ಭಾಗಿಯಾದರು.

ಜಾತ್ರೆ ಹಿನ್ನೆಲೆ ಸಾಗರ -ಹೊಳೆಬಾಗಿಲು ಮತ್ತು ಶಿವಮೊಗ್ಗ- ಹೊಸನಗರ ಮಾರ್ಗವಾಗಿ ಭಕ್ತರು ತಂಡೋಪ ತಂಡವಾಗಿ ಕ್ಷೇತ್ರಕ್ಕೆ ಆಗಮಿಸಿದ್ದರು. ಧರ್ಮಜ್ಯೋತಿ ಸ್ವಾಗತಿಸಲು ಕರೂರು ಹೋಬಳಿಯ 5000ಕ್ಕೂ ಅಧಿಕ ಮಹಿಳೆಯರು ಬೆಳಗ್ಗೆ 7 ಗಂಟೆಗೆ ಸರಿಯಾಗಿ ಕುಂಭ, ಕಲಶ ಸಮೇತವಾಗಿ ದೇವಿ ಮೂಲಸ್ಥಾನವಾದ ಸೀಗೆಕಣಿವೆಗೆ ಆಗಮಿಸಿದ್ದರು.

ತಳಿರು ತೋರಣಗಳಿಂದ ಮೂಲಸ್ಥಾನವನ್ನು ವಿಜೃಂಭಣೆಯಿಂದ ಆಚರಿಸಲಾಗಿತ್ತು. ಧಾರ್ಮಿಕ ವಿಧಿವಿಧಾನಗಳ ನೇತೃತ್ವ ರಘುಪತಿ ಶಾಂತಿ ಭಟ್ ವಹಿಸಿದ್ದರು. ಜಾತ್ರಾ ಮಹೋತ್ಸವ ಅಂಗವಾಗಿ ಲಾಂಛನದಲ್ಲಿ ಯಾವುದೇ ವಾಹನ ಹಾಕದ ಸಲುವಾಗಿ ಕಲೆಕ್ಷನ್ ಮಾಡಲಾಗಿತ್ತು. ಉತ್ತಮ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು.

- - -

-14ಬ್ಯಾಕೋಡು01: ಸಿಗಂದೂರು ಜಾತ್ರೋತ್ಸವಕ್ಕೆ ಬೆಂಗಳೂರಿನ ಆರ್ಯ ಈಡಿಗ ಸಂಘದ ಅಧ್ಯಕ್ಷ ಡಾ. ಎಂ.ತಿಮ್ಮೇಗೌಡ ಚಾಲನೆ ನೀಡಿದರು.-14ಬ್ಯಾಕೋಡು02: ಸೀಗೆಕಣಿವೆಯಲ್ಲಿ ಧರ್ಮಜೋತಿಗೆ ಕೇರಳದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಚಾಲನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕ್ಷೇತ್ರ ಘೋಷಿಸಿದ ನಿಖಿಲ್
ಬೆಂಬಲ ಬೆಲೆಯಡಿ ರಾಗಿ ಖರೀದಿಗೆ ಚುರುಕು