ಹಾವೇರಿ: ಪ್ರತಿ ವರ್ಷ ಗ್ರಾಮದಲ್ಲಿ ನಡೆಯುವ ಜಾತ್ರಾ ಮಹೋತ್ಸವ ಕಾರ್ಯಗಳಿಗೆ ದೇವರ ಅನುಗ್ರಹ ಮತ್ತು ದಿವ್ಯ ಶಕ್ತಿ ಇರುವ ಹಿನ್ನೆಲೆಯಲ್ಲಿ ಧಾರ್ಮಿಕ, ಸಂಸ್ಕೃತಿ ಕಾರ್ಯಗಳು ವಿಜೃಂಭಣೆಯಿಂದ ನಡೆಯುತ್ತವೆ ಎಂದು ಹುಲಗೂರ ಮೌನೇಶ್ವರ ಸ್ವಾಮೀಜಿ ಹೇಳಿದರು.ತಾಲೂಕಿನ ಬಮ್ಮನಕಟ್ಟಿ ಗ್ರಾಮದಲ್ಲಿ ಶ್ರೀ ವಿಜ್ಞೇಶ್ವರ ಶ್ರೀ ಭಗಳಾಂಭಿಕ ದೇವಿ ಹಾಗೂ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿ ಶಾಖಾ ಮಠದ ಎರಡನೇ ವರ್ಷದ ಜಾತ್ರಾಮಹೋತ್ಸವ ಅಂಗವಾಗಿ ಭಾನುವಾರ ಆಯೋಜಿಸಿದ ಸಾಮೂಹಿಕ ವಿವಾಹ ಮತ್ತು ಉಪನಯನ ಸಂಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಚಿಕ್ಕಲಿಂಗನಾಯಕನಳ್ಳಿ ಚನ್ನವೀರ ಸ್ವಾಮೀಜಿ ಮಾತನಾಡಿ, ಪುಣ್ಯದ ಮನುಷ್ಯ ಜನ್ಮ ತೊಟ್ಟು ಅರಿವನ್ನು ಇಟ್ಟುಕೊಂಡು ಬಂದಿರುವುದು ಮನುಷ್ಯ ಜನ್ಮ ಮಾತ್ರ. ಮುಂದಿನ ಪೀಳಿಗೆಗೆ ಹೆಸರು ಕಾರ್ಯಗಳು ಅಜರಾಮರವಾಗಿ ನೆನಪು ಇರಬೇಕಾದರೆ ನೀವು ಮಾಡುವ ಕೆಲಸ ಮುಖ್ಯವಾಗಿರಬೇಕಾಗುತ್ತದೆ. ಹುಟ್ಟಿದ ಮೇಲೆ ತಂದೆ-ತಾಯಿಗಳಿಗೆ ಒಳ್ಳೆ ಮಕ್ಕಳಾಗಿ ಮತ್ತೊಬ್ಬರಿಗೆ ಅನ್ಯಾಯ, ಮೋಸ ಮಾಡದೇ ಜೀವನ ನಡೆಸಬೇಕು. ಮಠ, ಮಂದಿರಗಳಿಗೆ ಹಣ ನೀಡದಿದ್ದರೂ ಪರವಾಗಿಲ್ಲ, ನೀವು ಮಾಡುವ ಕೆಟ್ಟ ಚಟವನ್ನು ಇಲ್ಲೇ ಬಿಟ್ಟೋಗಬೇಕು ಎಂದರು. ಬೆಳಗ್ಗೆ 8 ಗಂಟೆಗೆ ಚಂಡಿಕಾ ಹೋಮ, ಉಪನಯನ ಸಂಸ್ಕಾರ, ಸಾಮೂಹಿಕ ವಿವಾಹವನ್ನು ರಾಮಾಚಾರಿ ವಿಶ್ವಬ್ರಹ್ಮಣ, ಏಕಾಂತ ಆಚಾರ್ಯ, ಪ್ರಸನ್ನ ಆಚಾರ್ಯ, ರಂಜಿತ್ ಆಚಾರ್ಯ, ಕೃಷ್ಣಾ ಆಚಾರ್ಯ, ವಿರಾಚಾರ್ಯ ವಿಶ್ವಬ್ರಹ್ಮಣ ನಡೆಸಿದರು. ನಂತರ ಗುಗ್ಗಳ ಮಹೋತ್ಸವ, ನಂದಿಕೋಲು, ಪುರವಂತಿಕೆ ಜೊತೆಗೆ ವಿವಿಧ ವಾದ್ಯಗಳ ಮೂಲಕ ಮಹಿಳೆಯರು ಪೂರ್ಣಕುಂಭವನ್ನು ಹೊತ್ತು ಗ್ರಾಮದ ಪ್ರಮುಖ ಬೀದಿಯಲ್ಲಿ ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಯಿತು. ಗ್ರಾಮದ ಸದ್ಭಕ್ತರು ಮತ್ತು ಸುತ್ತಮುತ್ತಲಿನ ಗ್ರಾಮಗಳ ಮಠದ ಭಕ್ತಾದಿಗಳು ಭಾಗವಹಿಸಿದ್ದರು.