ಕನ್ನಡಪ್ರಭ ವಾರ್ತೆ ಗೋಕಾಕ
ಜಿಲ್ಲೆಯ ಇತಿಹಾಸದಲ್ಲಿಯೇ ಪಿಎಲ್‌ಡಿ ಬ್ಯಾಂಕ ತನ್ನ ಷೇರುದಾರರಿಗೆ ಲಾಭಾಂಶ ನೀಡುವ ಮೂಲಕ ರೈತರಿಗೆ ಗೋಕಾಕ ಪಿಎಲ್ ಡಿ ಬ್ಯಾಂಕ ದೀಪಾವಳಿ ಹಬ್ಬದ ಕೊಡುಗೆ ನೀಡಿದೆ ಎಂದು ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ವ್ಯಕ್ತಪಡಿಸಿದರು.ಮಂಗಳವಾರ ಇಲ್ಲಿಯ ಎಪಿಎಂಸಿ ರಸ್ತೆಯಲ್ಲಿರುವ ದಿ.ಗೋಕಾಕ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿ.ಎಲ್.ಡಿ) ನಿಂದ ಪ್ರಸ್ತುತ ಸಾಲಿನ ಲಾಭಾಂಶದಲ್ಲಿ ರೈತ ಷೇರುದಾರರಿಗೆ ಶೇ.10ಷ್ಟು ಡೆವಿಡೆಂಡ್ ವಿತರಿಸಿ ಮಾತನಾಡಿದ ಅವರು, ತನ್ನ ಲಾಭಾಂಶದಲ್ಲಿ ರೈತರಿಗೂ ಸಹ ಪಾಲು ನೀಡುವ ಮೂಲಕ ರೈತಸ್ನೇಹಿಯಾಗಿ ಪಿ.ಎಲ್.ಡಿ ಬ್ಯಾಂಕ್ ಕಾರ್ಯನಿರ್ವಹಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
1961ರಲ್ಲಿ ದಿ.ಎ.ಆರ್. ಪಂಚಗಾಂವಿಯವರ ದೂರದೃಷ್ಟಿಯಿಂದ ರೈತರ ಹಿತಕ್ಕಾಗಿ ಆರಂಭವಾಗಿರುವ ಪಿಎಲ್ ಡಿ ಬ್ಯಾಂಕ್ 57 ವರ್ಷ ಪೂರೈಸಿದೆ. ಸಮಸ್ತ ರೈತರ ಸಂಜೀವಿನಿಯಾಗಿ ಕೆಲಸ ಮಾಡುತ್ತಿದ್ದು, ರೈತರ ಸಹಕಾರದಿಂದ ಬ್ಯಾಂಕ ಉತ್ತಮ ಸಾಧನೆ ಮಾಡುತ್ತಿದೆ. ರಾಜ್ಯದಲ್ಲಿಯೇ ಬ್ಯಾಂಕ್ ದ್ವಿತೀಯ ಸ್ಥಾನ ಪಡೆದಿರುವುದು ಸಹಕಾರಿ ರಂಗದ ಅಭಿವೃದ್ಧಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.ಪರಸ್ಪರ ಸಹಕಾರ ಹಾಗೂ ಒಗ್ಗಟ್ಟಿನಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ರೈತರು ಸಹ ಬ್ಯಾಂಕಿನಿಂದ ಪಡೆದುಕೊಂಡ ಸಾಲವನ್ನು ನಿಗದಿತ ಅವಧಿಯೊಳಗೆ ಪಾವತಿ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಆಡಳಿತ ಮಂಡಳಿಯ ಸದಸ್ಯರು ಮತ್ತು ಸಿಬ್ಬಂದಿ ಸೇರಿ ಪರಸ್ಪರ ಸಹಕಾರ ಮನೋಭಾವದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ವೇದಿಕೆಯಲ್ಲಿ ಬ್ಯಾಂಕಿನ ಅಧ್ಯಕ್ಷ ಅಪ್ಪಯ್ಯಪ್ಪ ಬಡನಿಂಗಗೋಳ, ಉಪಾಧ್ಯಕ್ಷ ರಾಜು ಬೈರುಗೋಳ, ಮುಖಂಡ ರಾಜೇಂದ್ರ ಸಣ್ಣಕ್ಕಿ, ನಿರ್ದೇಶಕರಾದ ಶಿವಮೂರ್ತಿ ಹುಕ್ಕೇರಿ, ಬಸವಂತಪ್ಪ ಹೊಸೂರ, ಹಣಮಂತ ಅಮ್ಮಿನಭಾವಿ, ಲಗಮನ್ನ ಬೀರನಗಡ್ಡಿ, ಬಸವರಾಜ ಬಡಗನ್ನವರ, ಪ್ರಕಾಶ ತೋಳಿನವರ, ಧರೆಪ್ಪ ಮುಧೋಳ, ಫಕೀರಪ್ಪ ಪೂಜೇರಿ, ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಸಂಗಮೇಶ, ಗೋಕಾಕ ಶಾಖೆಯ ವ್ಯವಸ್ಥಾಪಕ ಸಂದೀಪ ಪತ್ರಾವಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಪಿಎಲ್ಡಿ ಬ್ಯಾಂಕ್ ಪ್ರಸಕ್ತ ಸಾಲಿಗೆ ₹36.90 ಲಕ್ಷ ಲಾಭ ಗಳಿಸಿದೆ. ಇದರಲ್ಲಿ ಶೇ.10ರಷ್ಟು ಲಾಭಾಂಶವನ್ನು ಸದಸ್ಯರಿಗೆ ವಿತರಿಸಿದೆ. ಸುಮಾರು ₹20 ಲಕ್ಷ ವಿತರಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ರೈತರಿಗೆ ₹10 ಕೋಟಿ ಸಾಲ ನೀಡುವ ಗುರಿ ಹೊಂದಲಾಗಿದ್ದು, ಈಗಾಗಲೇ ₹8 ಕೋಟಿ ವಿತರಣೆ ಮಾಡಲಾಗಿದೆ. ಪ್ರತಿ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಲಾಭ ಗಳಿಸಬೇಕು. ಈ ಮೂಲಕ ರೈತರೂ ಆರ್ಥಿಕವಾಗಿ ಮುಂದೆ ಬರಲು ಅನುಕೂಲವಾಗುತ್ತದೆ.-ಬಾಲಚಂದ್ರ ಜಾರಕಿಹೊಳಿ ಶಾಸಕ ಅರಬಾವಿ ಕ್ಷೇತ್ರ