ಕಳೆದ ಹಲವು ದಿನಗಳಿಂದ ಸುರಿಯುತಿರುವ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.
ಗೋಕರ್ಣ: ಒಂದೆಡೆ ಅಭಿವೃದ್ದಿಯ ಕುರಿತು ಸಭೆಗಳ ಸಾಲು, ಇನ್ನೊಂದೆಡೆ ಗಣ್ಯಾತಿಗಣ್ಯರು ಬಂದಾಗ ಆಗಮಿಸುವ ಅಧಿಕಾರಿಗಳ ದಂಡು, ಗಣ್ಯಯರ ಚಾಕರಿ ಮಾಡಿ ಮೆಚ್ಚುಗೆ ಪಡೆಯುವ ಪೈಪೋಟಿಯ ನಡುವೆ ನಿರ್ಲಕ್ಷಕ್ಕೆ ಒಳಗಾದ ಪ್ರವಾಸಿ ತಾಣ ಗೋಕರ್ಣ ಮುಂಗಾರು ಪೂರ್ವದ ಮಳೆಗೆ ಅಯೋಮಯವಾಗಿದೆ.
ಕಳೆದ ಹಲವು ದಿನಗಳಿಂದ ಸುರಿಯುತಿರುವ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಚರಂಡಿ ನೀರು ರಸ್ತೆಗೆ ಬಂದು ಸಂಚಾರಕ್ಕೆ ತೊಡಕಾಗುತ್ತಿದೆ. ಈ ಬಗ್ಗೆ ಸ್ಥಳೀಯ ಆಡಳಿತಕ್ಕೆ ತಿಳಿದ್ದರೂ ಸಹ ಮಳೆಗಾಲದ ಪೂರ್ವದಲ್ಲಿ ಸ್ವಚ್ಚಗೊಳಿಸದ ಪರಿಣಾಮ ಈ ವರ್ಷವು ಅವಸ್ಥೆ ಮುಂದುವರಿದಿದ್ದು, ಬುಧವಾರ , ಗುರವಾರದ ಮಳೆಯ ಆರ್ಭಟಕ್ಕೆ ರಥಬೀದಿ ನದಿಯಾಗಿ ಮಾರ್ಪಪಟ್ಟಿದ್ದು, ಮಳೆಯ ನೀರಿನ ಜೊತೆ ಚರಂಡಿ ಹೊಲಸು ನೀರು ಸೇರಿದ್ದು, ಇದನ್ನ ತುಳಿದು ಭಕ್ತರು ದೇವರ ದರ್ಶನಕ್ಕೆ ತೆರಳುತ್ತಿದ್ದಾರೆ. ಇನ್ನೂ ಗಂಜೀಗದ್ದೆಭಾಗದಲ್ಲಿ ಅರೆಬರೆಯಾಗಿ ಚರಂಡಿ ಹೂಳು ತೆಗೆದ ಪರಿಣಾಮ ರಸ್ತೆಯಲ್ಲಿ ಹೊಲಸು ತುಂಬಿದ್ದು ಸಂಚಾರಕ್ಕೆ ತೊಡಕಾಗಿದೆ. ಮೇಲಿನಕೇರಿಯಲ್ಲಿ ಗ್ರಾಮ ಪಂಚಾಯತಕ್ಕೆ ತೆರಳುವ ಮಾರ್ಗದಲ್ಲಿ ಕಳೆದ ಎರಡು ವರ್ಷದಿಂದ ಚರಂಡಿ ಕಟ್ಟೆ ಒಡೆದಿದ್ದು, ಇದನ್ನ ಸರಿಪಡಿಸದೆ ಬಿಟ್ಟ ಪರಿಣಾಮ ಬೃಹತ್ ಪ್ರಮಾಣದ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಮೀನು ಮಾರುಕಟ್ಟೆಯಲ್ಲಿ ದೋಣಿ ಹಾಕುವ ಪರಿಸ್ಥಿತಿ ನಿರ್ಮಾಣವಾದರೆ, ಮುಖ್ಯ ಕಡಲತೀರದ ಸಂಗಮ ನಾಲಾದ ಕೂಡು ರಸ್ತೆ ಕೆರೆಯಾಗುತ್ತಿದೆ.ಇದರಂತೆ ಬಿಜ್ಜೂರು ತಾರಮಕ್ಕಿಯಂತಹ ಪುಟ್ಟ ಗ್ರಾಮದ ರಸ್ತೆಗಳು ನೀರು ತುಂಬುತ್ತಿದ್ದು, ಸ್ಥಳೀಯ ಆಡಳತ ನಿರ್ಲಕ್ಷಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.ಭದ್ರಕಾಳಿ ಕಾಲೇಜಿನ ಹತ್ತಿರ ರಸ್ತೆಯಲ್ಲಿ ರಾಡಿ ಮಣ್ಣು ತುಂಬಿದ್ದು, ಈಗಾಗಲೇ ವಾಹನ ಸವಾರರು ಬಿದ್ದು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಚೌಡಗೇರಿಯಿಂದ ಗಂಗಾವಳಿಗೆ ತೆರಳುವ ಮಾರ್ಗದ ಕೆ.ಇ.ಬಿ. ಗ್ರೀಡ್ ಬಳಿಯ ರಸ್ತೆ ಕೆಸರು ಗದ್ದೆಯಾಗಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಾಗಬೇಕಿದೆ. ಖಾಸಗಿ ಜಾಗದವರು ಮಣ್ಣು ತೆಗೆಯುತ್ತಿರುವುದರಿಂದ ಆವಾತಂರ ಸೃಷ್ಟಿಯಾಗಿದೆ. ಇವೆರಡು ರಾಜ್ಯ ಹೆದ್ದಾರಿಯಾಗಿದ್ದು, ಕಳೆದ ಹಲವು ವರ್ಷಗಳಿಂದ ಈ ರೀತಿಯಾಗುತ್ತಿದ್ದರು ಲೋಕೋಪಯೋಗಿ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಇಲಾಖೆಗೆ ತಿಳಿಸದರೂ ಆಗದ ಕೆಲಸ, ಗ್ರಾಮ ಪಂಚಾಯತದವರ ದೂರವಾಣಿ ದೂರ: ಲೋಕೋಪಯೋಗಿ ಇಲಾಖೆಗೆ ಸಬಂಧಿಸಿದ ರಸ್ತೆಯ ಅವಸ್ಥೆಯ ಬಗ್ಗೆ ಖುದ್ದು ಪತ್ರಿಕೆ ಪೋಟೋ ಸಹಿತವಾಗಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಗ್ರಾಮ ಪಂಚಾಯತ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಸಿದರೆ ಕರೆ ಸ್ವೀಕರಿಸದೆ ದೂರ ಉಳಿಯುತ್ತಿದ್ದಾರೆ. ಜನಪ್ರತಿನಿಧಿಗಳನ್ನ ವಿಚಾರಿಸಿದರೆ ಹೇಳಿದ್ದೇವೆ ಎಂಬ ಉತ್ತರ ಬರುತ್ತದೆ. ಒಟ್ಟಾರೆ ಮಂತ್ರಿ , ಮಹೋದಯರು, ಉನ್ನತ ಅಧಿಕಾರಿಗಳು ಬಂದಾಗ ಮೊದಲೆ ಬಂದು ನಿಂತು ಸಲಾಂ ಹೊಡೆಯುವವರು, ಜನಸಾಮಾನ್ಯರ ಸಮಸ್ಯೆಗೆ ಒಲ್ಲೆ ಎನ್ನುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.