ಯುವಕನ ಸಜೀವ ದಹನ ಪ್ರಕರಣ ಸೂಕ್ತ ತನಿಖೆಗೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

KannadaprabhaNewsNetwork |  
Published : May 30, 2025, 12:13 AM IST
29ಕೆಎಂಎನ್ ಡಿ20 | Kannada Prabha

ಸಾರಾಂಶ

ಯುವಕನನು ಹುಲ್ಲಿನ ಮೆದೆಗೆ ಜೀವಂತವಾಗಿ ಸುಟ್ಟು ಹಾಕಿರುವ ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ನ್ಯಾಯ ಒದಗಿಸಬೇಕು ಹಾಗೂ ಸರ್ಕಾರ ಮಧ್ಯೆ ಪ್ರವೇಶಿಸಿ ಜಯಕುಮಾರ್ ರವರ ಕುಟುಂಬಕ್ಕೆ 25 ಲಕ್ಷ ರು. ಪರಿಹಾರ ಹಾಗೂ ಅವರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು.

ಕನ್ನಡಪ್ರಭ ವಾರ್ತೆ ಕೆ.ಎಂ ದೊಡ್ಡಿ

ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ದಲಿತ ಯುವಕ ಜಯಕುಮಾರ್ ಸಜೀವ ದಹನ ಪ್ರಕರಣ ಕುರಿತು ಸೂಕ್ತ ತನಿಖೆಗೆ ಆಗ್ರಹಿಸಿ, ಪೊಲೀಸರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ ಬಾಲಕಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಸಮನ್ವಯ ಸಮಿತಿ ಮುಖಂಡರು, ಕಾರ್ಯಕರ್ತರು ತಮಟೆ ಚಳವಳಿ ನಡೆಸಿದರು.

ಮದ್ದೂರು- ಮಳವಳ್ಳಿಯ ಮುಖ್ಯ ರಸ್ತೆಯ ಸರ್.ಎಂ.ವಿಶ್ವೇಶ್ವರಯ್ಯ ವೃತ್ತದಲ್ಲಿ ಸೇರಿದ ಸಮಿತಿ ಪದಾಧಿಕಾರಿಗಳು ಹಾಗೂ ಹೋರಾಟಗಾರರು ರಸ್ತೆತಡೆ ನಡೆಸಿ ಮಾನವ ಸರಪಳಿ ರಚಿಸಿ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ವೇಳೆ ಸಮಿತಿ ಅಧ್ಯಕ್ಷ ಪ್ರೊ.ಬಿ.ಬೋರೇಗೌಡ ಮಾತನಾಡಿ, ಕತ್ತರಘಟ್ಟ ಗ್ರಾಮದ ದಲಿತ ಯುವಕ ಜಯಕುಮಾರ್ ನನ್ನು ಹುಲ್ಲಿನ ಮೆದೆಯೊಂದಿಗೆ ಜೀವಂತವಾಗಿ ಸುಟ್ಟು ದಹನ ಮಾಡಿ ಹತ್ಯೆ ಮಾಡಲಾಗಿದೆ. ಇದು ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಘಟನೆಯಾಗಿದೆ ಎಂದು ಆರೋಪಿಸಿದರು.

ಯುವಕನನು ಹುಲ್ಲಿನ ಮೆದೆಗೆ ಜೀವಂತವಾಗಿ ಸುಟ್ಟು ಹಾಕಿರುವ ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ನ್ಯಾಯ ಒದಗಿಸಬೇಕು ಹಾಗೂ ಸರ್ಕಾರ ಮಧ್ಯೆ ಪ್ರವೇಶಿಸಿ ಜಯಕುಮಾರ್ ರವರ ಕುಟುಂಬಕ್ಕೆ 25 ಲಕ್ಷ ರು. ಪರಿಹಾರ ಹಾಗೂ ಅವರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಅಗ್ರಹಿಸಿದರು.

ಮದ್ದೂರು ತಾಲೂಕಿನ ಗೋರವನಹಳ್ಳಿಯ ವಾಣಿ- ಮಹೇಶ್ ದಂಪತಿಯ 3 ವರ್ಷದ ಹೃತೀಕ್ಷಾ ಮಗುವಿಗೆ ನಾಯಿ ಕಚ್ಚಿದ ಚಿಕಿತ್ಸೆಗಾಗಿ ಮಂಡ್ಯಕ್ಕೆ ತೆರಳುತ್ತಿದ್ದಾಗ ಸಂಚಾರಿ ಪೊಲೀಸರು ತಪಾಸಣೆ ನಡೆಸುವ ವೇಳೆ ಸಾವಿಗೀಡಾಗಿದ್ದು, ಇದು ಪೊಲೀಸರ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ದೂರಿದರು.

ಸರ್ಕಾರ ಹಾಗೂ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ಪುಟ್ಟ ಮಗುವಿನ ಕುಟುಂಬಕ್ಕೆ ನ್ಯಾಯ ಒದಗಿಸಿ ಸೂಕ್ತ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದರು.

ಮದ್ದೂರು ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಚಿಕ್ಕತಿಮ್ಮೇಗೌಡ ಮಾತನಾಡಿ, ದಲಿತ ಯುವಕನ ಸಜೀವ ಹತ್ಯೆ ಘಟನೆ ನಿಜಕ್ಕೂ ಅಘಾತ ತರಿಸಿದೆ. ಜಯಕುಮಾರ್ ಆತ್ಮಹತ್ಯೆ ಮಾಡಿಕೊಳ್ಳುವ ಸ್ವಭಾವದವರಲ್ಲ. ಕೂಡಲೇ ಹತ್ಯೆ ಆರೋಪಿಯನ್ನು ಬಂಧಿಸಿ ಆತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಕೆ.ಕಬ್ಬಾಳಯ್ಯ, ಅಣ್ಣೂರು ಮಹೇಂದ್ರ, ಕ್ಯಾತಘಟ್ಟ ರವಿಕುಮಾರ್, ತೊರೆಚಾಕನಹಳ್ಳಿ ಶಂಕರೆಗೌಡ, ಚಿಕ್ಕರಸಿನಕರೆ ಮೂರ್ತಿ, ಕರಡಕೆರೆ ಯೋಗೇಶ್, ಭರತೇಶ್, ಬಿದರಹಳ್ಳಿ ಹನುಮೇಶ್, ಮಹಿಳಾ ಮುಖಂಡರಾದ ಡಿ.ಕೆ.ಲತಾ, ಶೋಭಾ, ದೇವಿರಮ್ಮ, ಬಸವರಾಜು, ಅಪ್ಪು ಸೇರಿದಂತೆ ಹಲವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ