ಗೋಕರ್ಣದಲ್ಲಿ ಸುರಕ್ಷಿತ ಪ್ರವಾಸೋದ್ಯಮ ನಡೆದು ಜಿಲ್ಲೆಗೆ ಮಾದರಿಯಾಗಲಿ

KannadaprabhaNewsNetwork |  
Published : May 15, 2025, 01:33 AM ISTUpdated : May 15, 2025, 12:57 PM IST
ಮಾಹಿತಿ ಕೇಂದ್ರ ಉದ್ಘಾಟಿಸುತ್ತಿರುವುದು | Kannada Prabha

ಸಾರಾಂಶ

ಪ್ರವಾಸಿಗರ ಸರಿಯಾದ ಮಾಹಿತಿ, ಸ್ಥಳದ ಮಹತ್ವ ನೀಡುವ ಮೂಲಕ ಪುಣ್ಯಕ್ಷೇತ್ರದಲ್ಲಿ ಸುರಕ್ಷಿತ ಪ್ರವಾಸೋದ್ಯಮ ನಡೆದು ಜಿಲ್ಲೆಗೆ ಮಾದರಿಯಾಗುವಂತೆ ಬೆಳೆಯಬೇಕು

ಗೋಕರ್ಣ: ಪ್ರವಾಸಿಗರ ಸರಿಯಾದ ಮಾಹಿತಿ, ಸ್ಥಳದ ಮಹತ್ವ ನೀಡುವ ಮೂಲಕ ಪುಣ್ಯಕ್ಷೇತ್ರದಲ್ಲಿ ಸುರಕ್ಷಿತ ಪ್ರವಾಸೋದ್ಯಮ ನಡೆದು ಜಿಲ್ಲೆಗೆ ಮಾದರಿಯಾಗುವಂತೆ ಬೆಳೆಯಬೇಕು ಎಂಬ ದೃಷ್ಟಿಯಲ್ಲಿ ಇಲ್ಲಿನ ಪೊಲೀಸ್ ಮಾಹಿತಿ ಕೇಂದ್ರ ಆರಂಭಿಸಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಹೇಳಿದರು.

ಅವರು ಬುಧವಾರ ಇಲ್ಲಿನ ಮೇಲಿನಕೇರಿಯಲ್ಲಿ ಪೊಲೀಸ್ ಇಲಾಖೆಯಿಂದ ಪ್ರವಾಸಿಗರಿಗಾಗಿ ಮಾಹಿತಿ ಕೇಂದ್ರ ಉದ್ಘಾಟನೆ ಹಾಗೂ ವಿವಿಧೆಡೆ ಅಳವಡಿಸಿದ ಸಿಸಿ ಕ್ಯಾಮೆರಾ, ಪೊಲೀಸ್ ಚೌಕಿಗಳ ಅನಾವರಣ ಬಳಿಕ ನಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಜೀವರಕ್ಷಕರಿಗೆ, ಬೆಲೆಬಾಳುವ ವಸ್ತುಗಳು ಸಿಕ್ಕವರು ವಾರಸುದಾರರಿಗೆ ವಾಪಸ್ ನೀಡಿದರಿಗೆ ಇಲಾಖೆಯಿಂದ ಸನ್ಮಾನಿಸಿ ಮಾತನಾಡಿದರು.

ಇಲ್ಲಿನ ಪ್ರಾರಂಭವಾದ ಮಾಹಿತಿ ಕೇಂದ್ರದಿಂದ ಇಲ್ಲಿಗೆ ಬರುವ ಜನರಿಗೆ ತುರ್ತು ಸಂದರ್ಭದಲ್ಲಿ ಪೊಲೀಸ್ ಇಲಾಖೆಯಿದೆ ಎಂಬುದನ್ನು ತಿಳಿಸಿ, ಎಲ್ಲಿ ಅಪಾಯದ ಸ್ಥಳವಿದೆ ಹಾಗೂ ಎಲ್ಲೆಲ್ಲಿ ವೀಕ್ಷಣೆ ಮಾಡಬಹುದು ಎಂಬುದನ್ನು ವಿವರಿಸಿ, ಇಲ್ಲಿಗೆ ಬಂದರೆ ನಾವು ಸುರಕ್ಷಿತ ಎಂಬ ಭಾವನೆ ಬರುವ ಜತೆಗೆ ಯಾವುದೇ ಅಪಾಯವಿಲ್ಲದೆ ವೀಕ್ಷಣೆ ಮಾಡಿ ತೆರಳಬಹುದು ಎಂದರು. ಇದೇ ವೇಳೆ ಸುಳ್ಳು ಸುದ್ದಿ ಹಾಗೂ ಪ್ರಚೋದನಾಕಾರಿ ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಡುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದರು.

ಮಾಹಿತಿ ಕೇಂದ್ರವನ್ನು ಗ್ರಾಪಂ ಅಧ್ಯಕ್ಷೆ ಸುಮನಾ ಗೌಡ ಉದ್ಘಾಟಿಸಿದರು. ಪೊಲೀಸ್ ಚೌಕಿಯನ್ನು ಅನುವಂಶೀಯ ಉಪಾಧಿವಂತ ಮಂಡಳ ಅಧ್ಯಕ್ಷ, ಪುಣ್ಯಾಶ್ರಮದ ವೇ. ರಾಜಗೋಪಾಲ ಅಡಿ ಗೂರೂಜಿ ಉದ್ಘಾಟಿಸಿದರು.

ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿವೇದಿತ್‌ ಆಳ್ವ ಮಾತನಾಡಿ, ಗೋಕರ್ಣ ಪಟ್ಟಣ ಪಂಚಾಯಿತಿ ಮಾಡಲು ಸಚಿವ ಬೈರತಿ ಸುರೇಶ ಅವರಿಗೆ ಮನವಿ ಮಾಡಿದ್ದೇವೆ. ಇಲ್ಲಿ ಇಂದಿರಾ ಕ್ಯಾಂಟೀನ್ ಆವಶ್ಯಕವಿದ್ದು, ಇವೆರಡು ಶೀಘ್ರದಲ್ಲೇ ಕಾರ್ಯಗತವಾಗುತ್ತದೆ ಎಂದರು.

ಪ್ರವಾಸೋದ್ಯಮ ಇಲಾಖೆ ಜಿಲ್ಲಾ ನಿರ್ದೇಶಕ ಮಂಜುನಾಥ ಮಾತನಾಡಿ, ಖಾಸಗಿ ಸಹಭಾಗೀತ್ವದಲ್ಲಿ ಪ್ರವಾಸಿ ಹಬ್ಬ ಮಾಡಲು ಸರ್ಕಾರದಿಂದ ಪ್ರಸ್ತಾವನೆ ಬಂದಿದ್ದು, ಆಸಕ್ತರು ಇದರಲ್ಲಿ ತೊಡಗಿಕೊಂಡು ಪ್ರವಾಸೋದ್ಯಮದಲ್ಲಿ ತೊಡಗಿಕೊಳ್ಳಬಹುದು ಎಂದರು.

ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎನ್.ಟಿ. ಪ್ರಮೋದ ರಾವ್, ತಾಪಂ ಮಾಜಿ ಸದಸ್ಯ ಮಹೇಶ ಶೆಟ್ಟಿ, ಜಿಪಂ ಮಾಜಿ ಸದಸ್ಯ ಪ್ರದೀಪ ನಾಯಕ, ತೊರ್ಕೆ ಗ್ರಾಪಂ ಅಧ್ಯಕ್ಷ ಆನಂದು ಕವರಿ ಮಾತನಾಡಿದರು.

ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಈ ಭಾಗದ ಒಟ್ಟು ೨೦ ವಿದ್ಯಾರ್ಥಿಗಳು ಹಾಗೂ ಎಸ್‌ಸಿಎಸ್‌ಟಿ ಸಮುದಾಯದ ನಾಲ್ಕು ವಿದ್ಯಾರ್ಥಿಗಳು, ಪೊಲೀಸ್ ಕುಟುಂಬದ ಮೂವರು ವಿದ್ಯಾರ್ಥಿಗಳಿಗೆ ಸನ್ಮಾನ, ತಮ್ಮ ಜೀವದ ಹಂಗು ತೊರೆದು ಪ್ರವಾಸಿಗರ ಜೀವ ಉಳಿಸಿದ ಜೀವರಕ್ಷಕರು ಹಾಗೂ ತುರ್ತು ಸಮಯದಲ್ಲಿ ಸಹಾಯಕ್ಕೆ ಬರುವ ಆ್ಯಂಬುಲೆನ್ಸ್‌ ಮಾಲೀಕ, ಚಾಲಕರು ಹಾಗೂ ಬೆಲೆಬಾಳುವ ವಸ್ತು ಸಿಕ್ಕಾಗ ವಾರುಸುದಾರರಿಗೆ ವಾಪಸ್ ಮರಳಿಸಿದ ಮಹಾಬಲೇಶ್ವರ ಮಂದಿರದ ಭದ್ರತಾ ಸಿಬ್ಬಂದಿ, ಶಿವರಾತ್ರಿ ಸಮಯದಲ್ಲಿ ದೇವಾಲಯದಲ್ಲಿ ಉತ್ತಮ ಬಂದೋಬಸ್ತ್‌ ಕಲ್ಪಿಸಿದ ಪಿಎಸ್‌ಐ ಖಾದರ್ ಬಾಷಾ ಹಾಗೂ ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಲಾಯಿತು.

ಹೆಚ್ಚುವರಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ನರಸಿಂಹಮೂರ್ತಿ, ಜಗದೀಶ ನಾಯ್ಕ, ಎಸಿಎಫ್ ಕೃಷ್ಣ ಗೌಡ, ವೇ. ಬಾಲಕೃಷ್ಣ ಜಂಭೆ, ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ವಿನಯ ಗಾಂವಕರ, ಮದನ ನಾಯಕ, ಹೊಟೇಲ್ ಗೋದಾವರಿ ಮಾಲೀಕ ರಾಘವೇಂದ್ರ ನಾಯಕ, ಮಹಾಬಲೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಮೋಹನ ನಾಯಕ, ಉದ್ಯಮಿ ಸಿದ್ಧಾರ್ಥ ನಾಯಕ ಉಪಸ್ಥಿತರಿದ್ದರು. ಪತ್ರಕರ್ತ ಸುಭಾಷ ಕಾರೇಬೈಲ ಕಾರ್ಯಕ್ರಮ ನಿರ್ವಹಿಸಿದರು.

ಡಿವೈಎಸ್‌ಪಿ ಮಂಜುನಾಥ ಮಾರ್ಗದರ್ಶನದಲ್ಲಿ ಪಿ.ಐ. ಶ್ರೀಧರ ಎಸ್‌.ಆರ್., ಪಿಎಸ್‌ಐ ಖಾದರ ಬಾಷಾ, ಶಶಿಧರ ಹಾಗೂ ಸಿಬ್ಬಂದಿ ವರ್ಗ ಅಚ್ಚುಕಟ್ಟಿನ ವ್ಯವಸ್ಥೆ ಕಲ್ಪಿಸಿದ್ದರು.

PREV

Recommended Stories

ಮಹರ್ಷಿ ವಾಲ್ಮೀಕಿ ಕವಿಕುಲದ ಸಾರ್ವಭೌಮ: ಸಾಲವಾಡಗಿ
ಅಪಘಾತದಲ್ಲಿ ಪತ್ರಕರ್ತ ಕಾನಗೊಂಡ ಸಾವು