ಗೋಕರ್ಣ ದೇವಾಲಯದಲ್ಲಿ ತೀರ್ಥಕೊಡಲು 2 ಕುಟುಂಬ ನಡುವೆ ಗಲಾಟೆ!

KannadaprabhaNewsNetwork | Updated : May 10 2024, 10:52 AM IST

ಸಾರಾಂಶ

ಇಲ್ಲಿನ ಮಹಾಬಲೇಶ್ವರ ಮಂದಿರದ ನಂದಿಮಂಟಪದಲ್ಲಿ ತೀರ್ಥ ನೀಡುವ ಅರ್ಚಕರ ಮನೆತನದ ನಡುವೆ ಪಾಳಿ(ಹಕ್ಕಿನ) ಕುರಿತು ಗುರುವಾರ ದೇವಾಲಯದಲ್ಲೇ ಗಲಾಟೆ ನಡೆದಿದೆ.  

  ಗೋಕರ್ಣ :  ಇಲ್ಲಿನ ಮಹಾಬಲೇಶ್ವರ ಮಂದಿರದ ನಂದಿಮಂಟಪದಲ್ಲಿ ತೀರ್ಥ ನೀಡುವ ಅರ್ಚಕರ ಮನೆತನದ ನಡುವೆ ಪಾಳಿ(ಹಕ್ಕಿನ) ಕುರಿತು ಗುರುವಾರ ದೇವಾಲಯದಲ್ಲೇ ಗಲಾಟೆ ನಡೆದಿದೆ. ನಂತರ ಮಂದಿರದ ಮೇಲುಸ್ತುವಾರಿ ಸಮಿತಿ ಕಾರ್ಯದರ್ಶಿಯಾದ ಕುಮಟಾ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ ಸ್ಥಳಕ್ಕೆ ಆಗಮಿಸಿ ಎರಡು ಕಡೆಯವರೊಂದಿಗೆ ಮಾತುಕತೆ ನಡೆಸಿ ಏಳು ದಿನ (ಮೇ 16ರವರೆಗೆ) ಯಥಾಸ್ಥಿತಿ ಮುಂದುವರಿಸುವಂತೆ ಸೂಚನೆ ನೀಡಿದ್ದಾರೆ.

ನಂದಿಮಂಟಪದಲ್ಲಿ ಅನಾದಿ ಕಾಲದಿಂದಲೂ ತೀರ್ಥ ಕೊಡುವ ಅರ್ಚಕ ಮನತನವಿದೆ. ಇಲ್ಲಿನ ಜಂಭೆ ಮನೆಯವರು ಪ್ರಸ್ತುತ ಈ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಈ ಹಿಂದೆ ಗೋಪಿ ಮನೆತನದವರು ಇಲ್ಲಿ ಕೆಲಸ ಮಾಡಿದ್ದು, ಹಿಂದಿನ ಆಡಳಿತದಲ್ಲಿ ತಮಗೆ ಅವಕಾಶ ನೀಡಿರಲಿಲ್ಲ. ನಮಗೂ ಇಲ್ಲಿ ಹಕ್ಕು ಇದ್ದು, ಈ ಬಗ್ಗೆ ನ್ಯಾಯಾಲಯದ ಆದೇಶವಿದೆ. ಚೈತ್ರ ಮಾಸ ಅಮಾವಾಸ್ಯೆ ಮುಗಿದ ಬಳಿಕ ನಮ್ಮ ಪಾಳಿಯಾಗಿದ್ದು, ಅದರಂತೆ ಇಂದಿನಿಂದ ಇಲ್ಲಿ ತೀರ್ಥ ನೀಡುವ ಕಾರ್ಯ ಮಾಡುತ್ತೇವೆ ಎಂದು ಗೋಪಿ ಮನೆಯವರು ಬೆಳಗ್ಗೆಯಿಂದ ಪಟ್ಟು ಹಿಡಿದರು. ಆದರೆ ಈ ಬಗ್ಗೆ ಯಾವುದೇ ಆಧಾರವಿಲ್ಲ. ಈಗಾಗಲೇ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದು, ಇದು ಮುಗಿದ ನಂತರವೇ ಬರಲಿ ಎಂದು ಮತ್ತೊಂದು ಕುಟುಂಬದವರು ಪಟ್ಟು ಹಿಡಿದರು.

ಹೀಗೆ ತೀವ್ರ ವಾಗ್ವಾದ ನಡೆಯುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿ ತಡೆದಿದ್ದು, ಆನಂತರ ಮಂದಿರದ ಆಡಳಿತ ಮಂಡಳಿಯವರು ಬರುವವರೆಗೂ ನಾವು ಕದಲುವುದಿಲ್ಲ ಎಂದು ಪ್ರತಿಭಟನೆ ನಡೆಸಿದರು. ಕುಮಟಾ ಉಪವಿಭಾಗಾಧಿಕಾರಿ ಸ್ಥಳಕ್ಕೆ ಬರುವಂತೆ ಆಗ್ರಹಿಸಿದ್ದರು.

ಇದಾದ ಬಳಿಕ ಬಂದ ಮಂದಿರದ ಮೇಲುಸ್ತುವಾರಿ ಸಮಿತಿ ಕಾರ್ಯದರ್ಶಿಯವರು ಎರಡು ಕಡೆಯವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು. ಆದರೂ ತಮ್ಮ ಬಳಿ ದಾಖಲೆಗಳಿವೆ, ನಿಮಗೂ ಅರ್ಜಿ ನೀಡಿದ್ದೇವೆ. ನಮಗೆ ಇಂದಿನಿಂದಲೇ ಅವಕಾಶ ನೀಡಿ ಎಂದ ಹಲವು ಗಂಟೆಗಳ ಕಾಲ ಗೋಪಿ ಮನೆಯವರು ಪಟ್ಟು ಹಿಡಿದರು. ಅಂತಿಮವಾಗಿ ಒಂದು ವಾರದಲ್ಲಿ ಎರಡೂ ಕಡೆಯ ದಾಖಲಾತಿ ಪರಿಶೀಲನೆ ನಡೆಸಿ ಸಮಿತಿ ಮುಂದಿಟ್ಟು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇನೆ. ಮೇ 16ರ ವರೆಗೆ ಯಥಾಸ್ಥಿತಿ ಮುಂದುವರಿಸಿ ಎಂದು ಎಸಿ ತಿಳಿಸಿದ್ದಾರೆ. 

Share this article