ಮಂಗಳೂರು: ಕಾಸರಗೋಡು ಬೇಕಲದ ಗೋಕುಲಂ ಗೋಶಾಲೆಯಲ್ಲಿ ಪರಂಪರಾ ವಿದ್ಯಾಪೀಠದ ಆಶ್ರಯದಲ್ಲಿ ನಡೆಯುತ್ತಿರುವ ಮೂರನೇ ಆವೃತ್ತಿಯ ‘ವೈಶಾಖ ನಟನಂ’ ರಾಷ್ಟ್ರೀಯ ನೃತ್ಯೋತ್ಸವದಲ್ಲಿ ಪ್ರಸಿದ್ಧ ಕೂಚಿಪುಡಿ ನೃತ್ಯಗಾರ್ತಿ ದೀಪಾ ಶಶೀಂದ್ರನ್ ಮತ್ತು ತಂಡದವರು ಪ್ರಸ್ತುತಪಡಿಸಿದ ‘ಸಂಪೂರ್ಣ ರಾಮಾಯಣ’ ನೃತ್ಯ ರೂಪಕ ಕಲಾಭಿಮಾನಿಗಳ ಮನಸೂರೆಗೊಂಡಿತು. ಖ್ಯಾತ ಕೂಚಿಪುಡಿ ನೃತ್ಯಗಾರ್ತಿ ಹಾಗೂ ಕೇರಳ ರಾಜ್ಯದ ಕಲಾತಿಲಕಂ ಡಾ. ಪದ್ಮಿನಿ ಕೃಷ್ಣನ್ ಅವರ ಕೂಚಿಪುಡಿ ಪ್ರದರ್ಶನವು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.ವೈಶಾಖ ನಟನಂ ಉತ್ಸವದ ಮೂರನೇ ದಿನದಂದು ಚೆನ್ನೈನ ಪದ್ಮಶ್ರೀ ಮೀನಾಕ್ಷಿ ಚಿತ್ತರಂಜನ್ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ. ತದನಂತರ ಮುಂಬೈನ ಖ್ಯಾತ ನೃತ್ಯಗಾರ್ತಿ ಲತಾ ಸುರೇಂದ್ರನ್ ಮತ್ತು ತಂಡದವರಿಂದ ನೃತ್ಯ ರೂಪಕ ಪ್ರದರ್ಶಿತವಾಗಲಿದೆ.
ಮೇ 4 ರಂದು ಈಶಾನ್ಯ ಕಥಕ್ ನೃತ್ಯ: ಬೆಂಗಳೂರಿನ ಯುವ ಸಾಫ್ಟ್‌ವೇರ್ ಎಂಜಿನಿಯರ್ ಈಶಾನ್ಯ ಅವರಿಂದ ಕಥಕ್ ನೃತ್ಯ ಮೇ 4 ರಂದು ಸಂಜೆ 3.40ಕ್ಕೆ ಧೇನು ಮಂಟಪಮ್‌ನಲ್ಲಿ ನಡೆಯಲಿದೆ.
ಬೆಂಗಳೂರಿನ ಡಾ. ಸೀತಾರಾಮ ಪ್ರಸಾದ್ ಮತ್ತು ಡಾ. ಅಮೃತ ಪುರಾಣಿಕ್ ಅವರ ಪುತ್ರಿ ವಿದುಷಿ ಈಶಾನ್ಯ ಭಟ್ ಅವರು ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಪ್ರವೃತ್ತಿಯಲ್ಲಿ ಕಥಕ್ ನೃತ್ಯಗಾತಿ. ಕಳೆದ 15 ವರ್ಷಗಳಿಂದ ಗುರು ಸ್ಮಿತಾ ಶ್ರೀನಿವಾಸನ್ ಬಳಿ ಕಥಕ್ ಅಭ್ಯಾಸ ಮಾಡುತ್ತಿದ್ದಾರೆ. ಪ್ರಸ್ತುತ ನಾದಂ ಸಂಸ್ಥೆಯಲ್ಲಿ ಗುರು ನಂದಿನಿ ಮೆಹತಾ ಮತ್ತು ಮುರಳಿ ಮೋಹನ್ ಅವರಿಂದ ಉನ್ನತ ತರಬೇತಿ ಪಡೆಯುತ್ತಿದ್ದಾರೆ. ಕಥಕ್‌ನ ಅಲಂಕಾರ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.ರಾಜ್ಯದ ಹಲವು ಪ್ರಮುಖ ವೇದಿಕೆಗಳಲ್ಲಿ ತಮ್ಮ ನೃತ್ಯ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ.