ಸ್ವರ್ಣ ಕಪ್‌: ಮಂಡ್ಯ ಲಯನ್ಸ್‌ ಚಾಂಪಿಯನ್‌

KannadaprabhaNewsNetwork |  
Published : Dec 16, 2025, 02:00 AM IST
ಕಾರ್ಯಕ್ರಮದಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಲಾಯಿತು. | Kannada Prabha

ಸಾರಾಂಶ

ಫೈನಲ್‌ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡವನ್ನು ಮಂಡ್ಯ ಲಯನ್ಸ್‌ ತಂಡವು ಸೋಲಿಸುವ ಮೂಲಕ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಐಎಂಎ ಕರ್ನಾಟಕ ರಾಜ್ಯ ಶಾಖೆ (ಐಎಂಎ ಕೆಎಸ್‌ಬಿ) ಆಶ್ರಯದಲ್ಲಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಹುಬ್ಬಳ್ಳಿ ಶಾಖೆಯಿಂದ ಮೂರು ದಿನಗಳ ಮೆಗಾ ಕ್ರಿಕೆಟ್‌ ಕ್ರೀಡಾಕೂಟವು ನಗರದ ವಿವಿಧ ಕ್ರೀಡಾಂಗಣದಲ್ಲಿ ಆಯೋಜಿಸಲಾಯಿತು.

ಹುಬ್ಬಳ್ಳಿ:

ಶುಕ್ರವಾರದಿಂದ ನಡೆದ "ಸ್ವರ್ಣ ಕಪ್‌-ಐಎಂಎ ಡಾಕ್ಟರ್ಸ್ ಲೀಗ್ 2025 " ರಾಜ್ಯಮಟ್ಟದ ಕ್ರಿಕೆಟ್‌ ಪಂದ್ಯವು ಭಾನುವಾರ ಸಮಾರೋಪಗೊಂಡಿತು.

ಫೈನಲ್‌ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡವನ್ನು ಮಂಡ್ಯ ಲಯನ್ಸ್‌ ತಂಡವು ಸೋಲಿಸುವ ಮೂಲಕ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಐಎಂಎ ಕರ್ನಾಟಕ ರಾಜ್ಯ ಶಾಖೆ (ಐಎಂಎ ಕೆಎಸ್‌ಬಿ) ಆಶ್ರಯದಲ್ಲಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಹುಬ್ಬಳ್ಳಿ ಶಾಖೆಯಿಂದ ಮೂರು ದಿನಗಳ ಮೆಗಾ ಕ್ರಿಕೆಟ್‌ ಕ್ರೀಡಾಕೂಟವು ನಗರದ ವಿವಿಧ ಕ್ರೀಡಾಂಗಣದಲ್ಲಿ ಆಯೋಜಿಸಲಾಯಿತು. ಮುಕ್ತ ವಿಭಾಗ (32 ತಂಡ), ಲೆಜೆಂಡ್ಸ್‌ ವಿಭಾಗ (4 ತಂಡ, 45 ವರ್ಷಕ್ಕಿಂತ ಮೇಲ್ಪಟ್ಟವರು) ಮತ್ತು ಮಹಿಳಾ ವಿಭಾಗ (6 ತಂಡ) ಎಂಬ ಮೂರು ವಿಭಾಗಗಳಲ್ಲಿ 42 ತಂಡಗಳಿಂದ 600 ವೈದ್ಯರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಹುಬ್ಬಳ್ಳಿ-ಧಾರವಾಡದ 10 ಕ್ರಿಕೆಟ್ ಮೈದಾನಗಳಲ್ಲಿ ಲೀಗ್-ಕಮ್-ನಾಕೌಟ್ ಸ್ವರೂಪದಲ್ಲಿ ಪಂದ್ಯ ನಡೆಸಲಾಯಿತು.

ಇಲ್ಲಿನ ಬಿವಿಬಿ ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ನಡೆದ ಪುರುಷರ ಓಪನ್ ವಿಭಾಗದ ಫೈನಲ್‌ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ (12 ಓವರ್‌ಗಳಲ್ಲಿ 68/7) ನಿಗದಿಪಡಿಸಿದ 69 ರನ್‌ಗಳ ಗುರಿ ಬೆನ್ನಟ್ಟಿದ ಮಂಡ್ಯ ಲಯನ್ಸ್ 8.5 ಓವರ್‌ಗಳಲ್ಲಿ 71/4 ಗಳಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು.

ಲೆಜೆಂಡ್ಸ್ ವಿಭಾಗದ ಫೈನಲ್ ಪಂದ್ಯವು ಎಸ್‌ಡಿಎಂ ಡೆಂಟಲ್ ಕಾಲೇಜು ಮೈದಾನದಲ್ಲಿ ನಡೆಯಿತು. ಹಾಸನ ಲೆಜೆಂಡ್ಸ್ ತಂಡವು ಮೈಸೂರು ಲೆಜೆಂಡ್ಸ್ ತಂಡವನ್ನು 16 ರನ್‌ಗಳಿಂದ ಸೋಲಿಸುವ ಮೂಲಕ ಟ್ರೋಫಿ ಗೆದ್ದುಕೊಂಡಿತು. ಹಾಸನ ಲೆಜೆಂಡ್ಸ್ 10 ಓವರ್‌ಗಳಲ್ಲಿ 80/7 ಗಳಿಸಿತು. ಮೈಸೂರು ಲೆಜೆಂಡ್ಸ್ ಅನ್ನು 64/2 ಕ್ಕೆ ಸೀಮಿತಗೊಳಿಸಿತು. ಮಹಿಳಾ ವಿಭಾಗದ ಫೈನಲ್ ಪಂದ್ಯವು ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ(ಕೆಎಂಸಿಆರ್‌ಐ) ಮೈದಾನದಲ್ಲಿ ನಡೆಯಿತು. ಮೈಸೂರು ಕ್ವೀನ್ಸ್ ತಂಡವು ಕುಡ್ಲ ಕ್ರುಸೇಡರ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಬಹುಮಾನ ವಿತರಣೆ:

ಇಲ್ಲಿನ ಬಿವಿಬಿ ಎಂಜಿನಿಯರಿಂಗ್‌ ಕಾಲೇಜು ಮೈದಾನದಲ್ಲಿ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವೈದ್ಯರು ತಮ್ಮ ದೈನಂದಿನ ಕೆಲಸಗಳ ಮಧ್ಯೆಯೂ ಕ್ರೀಡಾಚಟುವಟಿಕೆಗೆ ಆದ್ಯತೆ ನೀಡಿರುವುದು ಸಂತಸದ ಸಂಗತಿ ಎಂದರು.

ಸ್ವರ್ಣ ಗ್ರುಪ್‌ ಆಫ್‌ ಕಂಪನೀಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್‌.ವಿ. ಪ್ರಸಾದ ಮಾತನಾಡಿ, ವೈದ್ಯರು ಕೇವಲ ಚಿಕಿತ್ಸಾಲಯ ಮತ್ತು ಆಸ್ಪತ್ರೆಗಳಿಗೆ ಮಾತ್ರ ಸೀಮಿತರು ಎಂಬ ದೀರ್ಘಕಾಲದ ಕಲ್ಪನೆ ಸಂಪೂರ್ಣವಾಗಿ ತಪ್ಪು ಎಂದು ಸಾಬೀತಾಗಿದೆ. ವೈದ್ಯರು ವೈದ್ಯಕೀಯ ಅಭ್ಯಾಸದಲ್ಲಿ ಮಾತ್ರವಲ್ಲದೆ ಕ್ರೀಡೆಗಳಲ್ಲಿಯೂ ಉತ್ತಮ ಸಾಧನೆ ಮಾಡಬಹುದು ಎಂಬುದನ್ನು ಈ ಕ್ರೀಡಾಕೂಟದಲ್ಲಿ ಸಾಬೀತುಪಡಿಸಿದ್ದಾರೆ. ಪ್ರತಿವರ್ಷವೂ ಇಂತಹ ಕ್ರೀಡಾಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗುವಂತೆ ಕರೆ ನೀಡಿದರು.

ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ, ಪಂದ್ಯಾವಳಿಯ ಮುಖ್ಯ ಪ್ರಾಯೋಜಕ ಡಾ. ಸೋಮಶೇಖರ್ ಎಂ.ವಿ, ಜಯರಾಮ್ ಶೆಟ್ಟಿ, ಡಾ. ಸುನಿಲಕುಮಾರ್ ಬಿರಾದಾರ, ಡಾ. ಬಸವರಾಜ ಸಜ್ಜನ್, ಡಾ. ಸಚಿನ್ ರೇವಣಕರ್, ಡಾ. ಯೋಗೇಂದ್ರ ಕಬಾಡೆ, ಸುಧೀಂದ್ರ, ಡಾ. ಮಹೇಶ್ ಕುರುಗೋಡ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!