ಕಲಬುರಗಿ: ಹಾಡಹಗಲೆ ಕಾರಿನ ಎಡಭಾಗದ ಹಿಂದಿನ ಬಾಗಿಲು ಗಾಜು ಒಡೆದು ಹಿಂಬದಿ ಸೀಟಿನಲ್ಲಿ ಇಟ್ಟಿದ್ದ 4,60,000 ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಕಳವು ಮಾಡಿಕೊಂಡು ಹೋದ ಘಟನೆ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ನಡೆದಿದೆ. ಜಿಡಿಎ ಲೇಔಟ್‍ನ ಗೋಕುಲನಗರದ ಶಿವುಕುಮಾರ ಹಿರೇಮಠ ಎಂಬುವವರ ಕಾರಿನಲ್ಲಿದ್ದ ಚಿನ್ನಾಭರಣ ದೋಚಿಕೊಂಡು ಹೋಗಲಾಗಿದೆ. ನಗರದ ಸೂಪರ್ ಮಾರ್ಕೆಟ್‍ನಲ್ಲಿ ಗುರು ಹ್ಯಾಂಡ್‍ಲೂಮ್ ಬಟ್ಟೆ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿರುವ ಶಿವುಕುಮಾರ ಹಿರೇಮಠ ಬುಧವಾರ 11 ಗಂಟೆ ಸುಮಾರಿಗೆ ಕಾರಿನ ಹಿಂದಿನ ಸೀಟ್‍ನಲ್ಲಿ 2 ಲಕ್ಷ ರು. ಮೌಲ್ಯದ 50 ಗ್ರಾಂ. ಬಂಗಾರದ ಮಂಗಳ ಸೂತ್ರ, 2 ಲಕ್ಷ ಮೌಲ್ಯದ 50 ಗ್ರಾಂ. ಪ್ಲಾಟಿನಂ, 40 ಸಾವಿರ ಮೌಲ್ಯದ 10 ಗ್ರಾಂ. ಬಂಗಾರದ ಸುತ್ತುಂಗುರ, 20 ಸಾವಿರ ಮೌಲ್ಯದ 5 ಗ್ರಾಂ. ಬಂಗಾರದ ಸುತ್ತುಂಗರವಿದ್ದ ಕಾಫಿ ಬಣ್ಣದ ಹ್ಯಾಂಡ್‍ಬ್ಯಾಗ್‍ನ್ನು ಇಟ್ಟು ಪತ್ನಿ ತೇಜಸ್ವಿನಿ ಜೊತೆ ನಗರದ ಮೋಹನ್ ಲಾಡ್ಜ್ ಎದುರುಗಡೆಯ ಜಿಕೆ ಕಾಂಪ್ಲೆಕ್ಸ್‌ನಲ್ಲಿ ಲ್ಲಿರುವ ಮಣಿಪುರಂ ಗೋಲ್ಡ್ ಲೋನ್ ಅಂಗಡಿಗೆ ಬಂದಿದ್ದಾರೆ. ಆದರೆ, ಅಂಗಡಿ ಬಾಗಿಲು ಮುಚ್ಚಿದ್ದರಿಂದ ಅಂಗಡಿಯವರಿಗೆ ಕರೆ ಮಾಡಿದ್ದಾರೆ. ಆಗ ಅಂಗಡಿಯವರು 12 ಗಂಟೆ ನಂತರ ಬರಲು ಹೇಳಿದ್ದರಿಂದ ಶಿವುಕುಮಾರ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದ ಕಡೆಗೆ ಹೋಗುವ ರಸ್ತೆಯ ಜಿ.ಕೆ.ಕಾಂಪ್ಲೆಕ್ಸ್ ಪಕ್ಕದಲ್ಲಿ ಕಾರು ನಿಲ್ಲಿಸಿ ಚಿನ್ನಾಭರಣವಿದ್ದ ಬ್ಯಾಗನ್ನು ಕಾರಲ್ಲೆ ಬಿಟ್ಟು ಉಪಾಹಾರ ಸೇವಿಸಲು ಹೋಟೆಲ್‍ಗೆ ಹೋಗಿದ್ದಾರೆ. ಉಪಹಾರ ಸೇವಿಸಿ ಮರಳಿ ಬರುವುದರೊಳಗೆ ಕಳ್ಳರು ಕಾರಿನ ಎಡಭಾಗದ ಹಿಂದಿನ ಬಾಗಿಲು ಗಾಜು ಒಡೆದು 2.60 ಲಕ್ಷ ಮೌಲ್ಯದ ಬಂಗಾರದ ಆಭರಣಗಳಿದ್ದ ಬ್ಯಾಗ್ ತೆಗೆದುಕೊಂಡು ಹೋಗಿದ್ದಾರೆ. ಈ ಸಂಬಂಧ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.