ಕನ್ನಡಪ್ರಭ ವಾರ್ತೆ ಹಾಸನ
ಮೇ ೧ರಂದು ಮಲೇಷ್ಯಾದಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದ ಮೊಹಮ್ಮದ್ ಸುಜೈನ್ ಅವರಿಗೆ ಜಿಲ್ಲಾ ಕರಾಟೆ ಸಂಸ್ಥೆ ಮತ್ತು ಹಾಸನದ ಹೋಲಿಮೌಂಟ್ ಶಾಲೆಯ ಮುಖ್ಯಸ್ಥರಿಂದ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.ನಗರದ ಶ್ರೀಗಂಧದಕೋಠಿ ಸ್ಲೇಟರ್ಸ್ ಹಾಲ್ ವೃತ್ತದ ಬಳಿ ಇರುವ ಹೋಲಿಮೌಂಟ್ ಶಾಲೆ ಆವರಣದಲ್ಲಿ ಹಾಸನ ಜಿಲ್ಲಾ ಕರಾಟೆ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಚಿನ್ನದ ಪದಕ ಪಡೆದ ಮೊಹಮ್ಮದ್ ಸುಜೈನ್ ಹಾಗೂ ಜೊತೆಯಲ್ಲಿ ಇನ್ನೋರ್ವ ವಿದ್ಯಾರ್ಥಿಯಾದ ಮೊಹಮ್ಮದ್ ನಿಹಾಲ್, ಬ್ಲಾಕ್ ಬೆಲ್ಟ್ ಫಸ್ಟ್ ಮತ್ತು ಧವನ್ ವೈ ಗೌಡ ಬ್ಲಾಕ್ ಬೆಲ್ಟ್ ವಿದ್ಯಾರ್ಥಿ ಇವರಿಬ್ಬರನ್ನು ಸಹ ಸನ್ಮಾನಿಸಿ ಗೌರವಿಸಿದರು.
ನಂತರ ಸಮಾಜ ಸೇವಕರಾದ ಎಸ್.ಎಸ್. ಪಾಷಾ ಮಾತನಾಡಿ, ತಾವು ಕಲಿತ ಪ್ರತಿಭೆಯನ್ನು ಇಲ್ಲಿನ ವಿದ್ಯಾರ್ಥಿಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರಾಟೆ ಕ್ರೀಡೆಯಲ್ಲಿ ಪ್ರದರ್ಶಿಸಿ ಚಿನ್ನದ ಪದಕ ಪಡೆಯುವುದರ ಮೂಲಕ ಈ ಜಿಲ್ಲೆ, ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ. ಪ್ರತಿ ವಿದ್ಯಾರ್ಥಿಗಳಲ್ಲೂ ಅವರದೇ ಆದ ಪ್ರತಿಭೆ ಇರುತ್ತದೆ. ಶಿಕ್ಷಕರ ಪರಿಶ್ರಮದಿಂದ ಈ ಶಾಲೆಯಲ್ಲಿ ಮೌಲ್ಯಾಧರಿತ ಶಿಕ್ಷಣದ ಜೊತೆ ವ್ಯಕ್ತಿತ್ವದ ವಿಕಾಸನಕ್ಕೂ ಸಹ ಪ್ರಯತ್ನ ಪಡುತ್ತಿರುವುದು ಸಂತೋಷದ ವಿಚಾರ ಎಂದರು. ಕರಾಟೆ ಪಟು ಹಾಗೂ ತರಬೇತುದಾರ ಆರೀಫ್ ಅವರು ಕರಾಟೆ ಕ್ರೀಡೆಯಲ್ಲಿ ಸಾಕಷ್ಟು ಸಾಧನೆ ಮಾಡಿದ್ದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯನ್ನು ಏರ್ಪಡಿಸಿ ಈ ಕ್ಷೇತ್ರದಲ್ಲಿ ಸಾಧನೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.ಈ ಶಾಲೆಯಲ್ಲಿ ಔಪಚಾರಿಕ ಮತ್ತು ಅನೌಪಚಾರಿಕ ಎರಡು ಶಿಕ್ಷಣವನ್ನು ಈ ಶಾಲೆಯಲ್ಲಿ ಕೊಡಲಾಗುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ಕರಾಟೆ ಕ್ರೀಡೆಯಲ್ಲಿ ಸಾಧನೆ ಮಾಡಿದಲ್ಲದೇ ಶಿಕ್ಷಣದಲ್ಲೂ ಕೂಡ ಹೆಚ್ಚಿನ ಅಂಕ ಪಡೆದಿರುವುದಾಗಿ ಹೇಳಿದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯಿಂದ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇಂತಹ ಕ್ರೀಡಾಪಟುವಿಗೆ ನಮ್ಮ ಸಂಸ್ಥೆಯಿಂದ ಹೆಚ್ಚಿನ ತರಬೇತಿ ನೀಡಲಾಗುತ್ತದೆ ಎಂದು ಕಿವಿಮಾತು ಹೇಳಿದರು. ಜಗತ್ತಿನ ಶ್ರೇಷ್ಠ ಸಂಪತ್ತು ಎಂದರೇ ವ್ಯಕ್ತಿಯ ಪ್ರತಿಭೆ. ಅದನ್ನು ಹೊರ ತೆಗೆಯುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕೆ.ಆರ್. ಪುರಂ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ರಾಘವೇಂದ್ರ, ವಕೀಲ ಪುನೀತ್, ಆಶ್ರಯ ಸಮಿತಿ ಸದಸ್ಯ ಮನು, ಸಮಾಜಸೇವಕ ಸರ್ದಾರ್ ಪಾಷಾ, ಮೊಹಮ್ಮದ್ ಸಾದಿಕ್, ಮುಜಬೀರ್ ಹಾಗೂ ಜಿಲ್ಲಾ ಕರಾಟೆ ಸಂಸ್ಥೆಯ ಆರೀಫ್ ಇತರರು ಉಪಸ್ಥಿತರಿದ್ದರು.