ಸೋಮವಾರಪೇಟೆಯ ಯುವಕ ನಾಪತ್ತೆ

KannadaprabhaNewsNetwork | Published : May 14, 2025 12:08 AM
Follow Us

ಸಾರಾಂಶ

ಕುಶಾಲನಗರದ ಉದ್ಯಮಿಯೋರ್ವರ ಕಾರಿನಲ್ಲಿ ತೆರಳಿದ್ದ ಸೋಮವಾರಪೇಟೆಯ ಯುವಕ ಸಂಪತ್‌ ಎಂಬವರು ನಾಪತ್ತೆಯಾಗಿರುವ ಕುರಿತು ದೂರು ದಾಖಲಾಗಿದೆ.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಜಿಲ್ಲೆಯ ಕುಶಾಲನಗರದ ಉದ್ಯಮಿಯೋರ್ವರ ಕಾರಿನಲ್ಲಿ ತೆರಳಿದ್ದ ಸೋಮವಾರಪೇಟೆಯ ಯುವಕ ಸಂಪತ್(ಶಂಭು) ಎಂಬುವರು ನಾಪತ್ತೆಯಾಗಿರುವ ಕುರಿತು ಕುಶಾಲನಗರ ಠಾಣೆಯಲ್ಲಿ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಕಾರನ್ನು ಸಕಲೇಶಪುರ ತಾಲೂಕು, ಯಸಳೂರು ಹೋಬಳಿಯ ಮಾಗೇರಿ ಸಮೀಪದ ಕಲ್ಲಹಳ್ಳಿ ಗ್ರಾಮದಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಶನಿವಾರದಂದು ಬೆಳಗ್ಗಿನ ಜಾವ 4.30 ಸಮಯದಲ್ಲಿ ಕಲ್ಲಹಳ್ಳಿ ಗ್ರಾಮಕ್ಕೆ ಎರಡು ಕಾರುಗಳು ಆಗಮಿಸಿದ್ದು, ಕೆಲಕಾಲದ ನಂತರ ಒಂದು ಕಾರನ್ನು ಜನವಸತಿ ಪ್ರದೇಶದಲ್ಲಿಯೇ ಬಿಟ್ಟು, ಮತ್ತೊಂದು ಕಾರು ಸ್ಥಳದಿಂದ ತೆರಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಜನವಸತಿ ಪ್ರದೇಶದಲ್ಲಿ ಪತ್ತೆಯಾಗಿರುವ ಕಾರಿನಲ್ಲಿ ರಕ್ತದ ಕಲೆಗಳು ಕಂಡು ಬಂದಿದ್ದು, ಕಾರನ್ನು ಯಸಳೂರು ಪೊಲೀಸರು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಬೆಳಗ್ಗೆ ಕೆಲಸಕ್ಕೆಂದು ಜನರನ್ನು ಕರೆತರುವ ಕಾರಿನ ಚಾಲಕ, ಅನಾಥವಾಗಿದ್ದ ಈ ಕಾರನ್ನು ಗಮನಿಸಿ, ಬಳಿಗೆ ತೆರಳಿ ನೋಡಿದಾಗ ಕಾರಿನ ಒಳಗೆ ಹಾಗೂ ಹೊರಭಾಗದಲ್ಲಿ ರಕ್ತ ಮೆತ್ತಿಕೊಂಡಿರುವುದು ಕಂಡುಬಂದಿದೆ. ತಕ್ಷಣ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದು, ನಂತರ ಯಸಳೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ.

ಯಸಳೂರು ಪೊಲೀಸ್ ಠಾಣೆಯ ಸಬ್‌ಇನ್ಸ್ಪೆಕ್ಟರ್ ಶ್ರೀನಿವಾಸ್ ಸೇರಿದಂತೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ನಂತರ ಶ್ವಾನದಳ ಹಾಗೂ ಬೆರಳಚ್ಚು ದಳದೊಂದಿಗೆ ಮಹಜರು ನಡೆಸಲಾಗಿದೆ. ಕಾರಿನ ಒಳಭಾಗದಲ್ಲಿ ಭಾರಿ ಪ್ರಮಾಣದ ರಕ್ತ ಕಂಡುಬಂದಿದೆ. ಇದರೊಂದಿಗೆ ಹೊರಭಾಗದ ಡೋರ್, ಬಾನೆಟ್‌ಗಳ ಮೇಲೂ ರಕ್ತದ ಕಲೆಗಳಿವೆ. ಕಾರನ್ನು ಯಸಳೂರು ಪೊಲೀಸ್ ಠಾಣೆಗೆ ಕೊಂಡೊಯ್ಯಲಾಗಿದೆ.

ಹಲವರ ವಿಚಾರಣೆಗೆ:

ಪ್ರಕರಣದ ಕುರಿತು ಸೋಮವಾರಪೇಟೆ, ಕುಶಾಲನಗರ ಹಾಗೂ ಯಸಳೂರು ಪೊಲೀಸರು ತನಿಖೆ ಮುಂದುವರೆಸಿದ್ದು, ಮೂರೂ ಠಾಣೆಗಳಲ್ಲಿ ಘಟನೆಗೆ ಸಂಬಂಧಿಸಿದಂತೆ ಹಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈರ್ವರು ವಿಚಾರಣೆಗೆ ಸಹಕರಿಸದೆ ಊರು ಬಿಟ್ಟಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೇ ಕಾರು ತೆರಳಿರುವ ಕುರಿತು ಕುಶಾಲನಗರ, ಸೋಮವಾರಪೇಟೆ, ಶಾಂತಳ್ಳಿಯಿಂದ ಕಲ್ಲಹಳ್ಳಿ ಸೇರಿದಂತೆ ಹಲವೆಡೆಗಳಲ್ಲಿ ಸಿಸಿ ಕ್ಯಾಮಾರಗಳನ್ನು ಪರಿಶೀಲನೆ ನಡೆಸಿರುವ ಪೊಲೀಸರು, ಸಂಪತ್ ನೊಂದಿಗೆ ವೈರತ್ವ ಇದ್ದ ಹಲವರ ಮೊಬೈಲ್ ಪೋನ್ ಗಳನ್ನು ಕೂಡ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

ಕುಶಾಲನಗರದಲ್ಲಿ ಉದ್ಯಮಿಯಾಗಿರುವ ಜಾನ್ ಎಂಬವರ ಕಾರನ್ನು ಸ್ನೇಹಿತನಾಗಿರುವ ಮೂಲತಃ ಸೋಮವಾರಪೇಟೆ ಕಕ್ಕೆಹೊಳೆ ಜಂಕ್ಷನ್ ಸಮೀಪದ ನಿವಾಸಿ, ಪ್ರಸ್ತುತ ಕುಶಾಲನಗರದಲ್ಲಿದ್ದ ಸಂಪತ್ (ಶಂಭು) ಎಂಬಾತ ಶುಕ್ರವಾರ ಸಂಜೆ ತೆಗೆದುಕೊಂಡು ಬಂದಿದ್ದು, ಶನಿವಾರ ಬೆಳಗ್ಗೆ ಕಾರು ಮಾತ್ರ ಪತ್ತೆಯಾಗಿದೆ. ಕಾರನ್ನು ತೆಗೆದುಕೊಂಡು ಬಂದ ಸಂಪತ್‌ನ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಕಾರಿನ ಒಳಭಾಗದಲ್ಲಿ ರಕ್ತದ ಕಲೆಗಳು ಕಂಡುಬಂದಿರುವ ಹಿನ್ನೆಲೆ, ಹಾಗೂ ಐದು ದಿನಗಳಿಂದ ಸಂಪತ್ ನ ಸುಳಿವು ದೊರಕದಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಚುರುಕುಗೊಂಡ ತನಿಖೆ:

ಈ ನಡುವೆ ಶುಕ್ರವಾರ ಸಂಪತ್‌ನ ಸ್ನೇಹಿತ ಜಾನ್ ಅವರು ಕುಶಾಲನಗರ ಪೊಲೀಸ್ ಠಾಣೆಗೆ ವ್ಯಕ್ತಿ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ಶನಿವಾರ ದಿನ ಕಾರಿನಲ್ಲಿ ತೆರಳಿದ ಸಂಪತ್ ಈವರೆಗೆ ಪತ್ತೆಯಾಗಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಕಳೆದ ಮೇ 9ರ ಸಂಜೆ 7.55ಕ್ಕೆ ಗುಡ್ಡೆಹೊಸೂರಿನಿಂದ ಹಾರಂಗಿ ಮಾರ್ಗವಾಗಿ ಸೋಮವಾರಪೇಟೆಗೆ ಆಗಮಿಸಿರುವ ಸಂಪತ್‌ನ ಮೊಬೈಲ್ ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ರಾತ್ರಿ 9.17ಕ್ಕೆ ಸ್ವಿಚ್‌ಆಫ್ ಆಗಿದೆ. ಇದರೊಂದಿಗೆ ಸಂಪತ್ ಚಲಿಸುತ್ತಿದ್ದ ಕಾರು 10ರ ನಸುಕಿನ ಜಾವ 4.30ಕ್ಕೆ ಸೋಮವಾರಪೇಟೆ ಗಡಿ ಗ್ರಾಮವಾಗಿರುವ, ಸಕಲೇಶಪುರ ತಾಲೂಕಿನ ಮಾಗೇರಿ ಮಾರ್ಗದಲ್ಲಿ ತೆರಳಿದೆ ಎನ್ನಲಾಗಿದೆ. ಈ ಸಂದರ್ಭ ಸಂಪತ್ ತೆಗೆದುಕೊಂಡು ಹೋಗಿರುವ ಕಾರಿನೊಂದಿಗೆ ಇನ್ನೂ ಎರಡು ಕಾರುಗಳು ತೆರಳಿರುವುದು ಸಿ.ಸಿ. ಕ್ಯಾಮೆರಾ ದೃಶ್ಯಾವಳಿಗಳಲ್ಲಿ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. 9ರ ಸಂಜೆ 7.55ಕ್ಕೆ ಗುಡ್ಡೆಹೊಸೂರಿನಿಂದ ಹೊರಟ ಕಾರು, ಮಾರನೇ ದಿನದ ನಸುಕಿನ ಜಾವ 4.30ರ ಸುಮಾರಿಗೆ ಮಾಗೇರಿ ರಸ್ತೆಯಲ್ಲಿ ಸಂಚರಿಸಿದೆ. ಹಲವು ಅನುಮಾನ

9ರಂದು 9.17ಕ್ಕೆ ಸೋಮವಾರಪೇಟೆ ಲೊಕೇಶನ್‌ನಲ್ಲಿ ಸ್ವಿಚ್ ಆಫ್ ಆಗಿರುವ ಮೊಬೈಲ್ ಈವರೆಗೆ ಆನ್ ಆಗಿಲ್ಲ. ಯಸಳೂರಿನ ಕಲ್ಲಹಳ್ಳಿಯಲ್ಲಿ ಕಂಡುಬಂದಿರುವ, ಸಂಪತ್ ತೆಗೆದುಕೊಂಡು ಹೋಗಿದ್ದ ಕಾರಿನೊಳಗೆ ರಕ್ತದ ಕಲೆಗಳಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.ಪ್ರಸ್ತುತ ಕಾಣೆಯಾಗಿರುವ ಸಂಪತ್‌ಗಾಗಿ ಹುಡುಕಾಟ ಆರಂಭವಾಗಿದೆ. ಯಸಳೂರು ಹಾಗೂ ಕುಶಾಲನಗರ ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ. ಸಂಪತ್ ತನ್ನ ಮೊಬೈಲ್‌ನಲ್ಲಿ ಕೊನೆಯದಾಗಿ ಮಾತನಾಡಿರುವ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ರಕ್ತದ ಕಲೆಗಳೊಂದಿಗೆ ಕಲ್ಲಹಳ್ಳಿಯಲ್ಲಿ ಪತ್ತೆಯಾಗಿದ್ದ ಕಾರನ್ನು ಯಸಳೂರು ಪೊಲೀಸ್ ಠಾಣೆಗೆ ಕೊಂಡೊಯ್ಯಲಾಗಿದ್ದು, ಕಾರಿನ ಒಳಗಿದ್ದ ರಕ್ತದ ಮಾದರಿಯನ್ನು ಸಂಗ್ರಹಿಸಿ ಹೆಚ್ಚಿನ ಮಾಹಿತಿಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕಾರಿನೊಳಗೆ ದೊರೆತ ರಕ್ತವು ಮನುಷ್ಯರದ್ದೇ ಎಂಬುದನ್ನು ಮೊದಲು ದೃಢಪಡಿಸಿಕೊಳ್ಳಬೇಕಿದೆ. ಈಗಾಗಲೇ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬರುವುದು ಮೂರು ದಿನಗಳಾಗಬಹುದು ಎಂದು ಯಸಳೂರು ಪೊಲೀಸ್ ಠಾಣೆಯಿಂದ ಮಾಹಿತಿ ಲಭಿಸಿದೆ.ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ನಿರಂಜನ್‌ಕುಮಾರ್ ಅವರು ಘಟನೆಯ ಮಾಹಿತಿ ಪಡೆದಿದ್ದು, ಯಸಳೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀನಿವಾಸ್ ಅವರಿಗೆ ತನಿಖೆಯ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ. ಇತ್ತ ಕುಶಾಲನಗರದಲ್ಲಿ ಸಂಪತ್ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಒಂದಿಬ್ಬರು ಊರು ಬಿಟ್ಟಿರುವ ಬಗ್ಗೆಯೂ ಪೊಲೀಸರು ಖಾತ್ರಿಪಡಿಸಿಕೊಂಡಿದ್ದಾರೆ. ಕೆಲವರು ಪೊಲೀಸ್ ಠಾಣೆಗೆ ಆಗಮಿಸಿ ವಿಚಾರಣೆಗೆ ಸಹಕರಿಸಿದ್ದರೆ, ಇನ್ನು ಕೆಲವರು ಮೊಬೈಲ್‌ಗಳನ್ನು ಬಿಟ್ಟು ಮನೆಗೂ ಬಾರದೇ ನಾಪತ್ತೆಯಾಗಿರುವುದು ಸಂಶಯವನ್ನು ಇನ್ನಷ್ಟು ಹೆಚ್ಚುಗೊಳಿಸಿದೆ. ಆರಂಭದಲ್ಲಿ ಪೊಲೀಸರ ಕರೆಗಳನ್ನು ಸ್ವೀಕರಿಸಿದ ಈರ್ವರು, ನಂತರ ಪೊಲೀಸ್ ಠಾಣೆಗೆ ಆಗಮಿಸದೇ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.ಪೊಲೀಸರ ತನಿಖೆಯ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದ್ದು, ಕುಶಾಲನಗರದಲ್ಲಿದ್ದ ಸಂಪತ್‌ಗೆ ಸೇರಿದ ಕಾರಿನಿಂದ ಕೆಲವೊಂದು ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ ಎನ್ನಲಾಗಿದೆ. ಸೋಮವಾರಪೇಟೆ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಮಹಿಳೆಯೋರ್ವರಿಂದ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಇದರ ನಡುವೆ ಒಂದಿಬ್ಬರು ಊರು ಬಿಟ್ಟಿರುವುದರಿಂದ ಸಂಶಯವೂ ಬಲವಾಗುತ್ತಿದೆ. ಯಸಳೂರು ಸುತ್ತಮುತ್ತಲ 5 ಕಿ.ಮೀ. ವ್ಯಾಪ್ತಿಯಲ್ಲಿ ಘಟನೆಯ ಸಾಕ್ಷ್ಯ ಹುಡುಕಲು ಇಲಾಖೆ ಮುಂದಾಗುತ್ತಿದೆ ಎನ್ನಲಾಗಿದೆ.