ಪದವೀಧರರು ಸ್ವತಂತ್ರ ಬದುಕು ಕಲಿಯಬೇಕು: ನಿರ್ಮಲಾನಂದನಾಥ ಸ್ವಾಮೀಜಿ

KannadaprabhaNewsNetwork |  
Published : May 14, 2025, 12:06 AM IST
ಚಿಕ್ಕಮಗಳೂರಿನ ಎಐಟಿ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ನಡೆದ ಬಿ.ಇ., ಎಂ.ಟೆಕ್., ಎಂಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭವನ್ನು ಡಾ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಉದ್ಘಾಟಿಸಿದರು.  | Kannada Prabha

ಸಾರಾಂಶ

ಪದವೀಧರರು ಸ್ವತಂತ್ರವಾಗಿ ಬದುಕುವುದನ್ನು ಕಲಿಯಬೇಕು. ಪಾಲಕರು ಹಾಗೂ ಸಮಾಜದ ಒಳಿತನ್ನು ಬಯಸುವ ನಿಟ್ಟಿನಲ್ಲಿ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಮಠಾಧೀಶ ಡಾ. ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು.

ಎಐಟಿ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಪದವೀಧರರು ಸ್ವತಂತ್ರವಾಗಿ ಬದುಕುವುದನ್ನು ಕಲಿಯಬೇಕು. ಪಾಲಕರು ಹಾಗೂ ಸಮಾಜದ ಒಳಿತನ್ನು ಬಯಸುವ ನಿಟ್ಟಿನಲ್ಲಿ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಮಠಾಧೀಶ ಡಾ. ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು.

ನಗರದ ಎಐಟಿ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ನಡೆದ ಬಿಇ, ಎಂಟೆಕ್, ಎಂಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಆದಿಚುಂಚನಗಿರಿ ವಿಶ್ವವಿದ್ಯಾಲಯದಿಂದ ಪದವಿ ಪಡೆದು ಹೊಸ ಪ್ರಪಂಚ ಪ್ರವೇಶಿಸುತ್ತಿರುವ ಪದವೀಧರರ ನಿಜವಾದ ಜೀವನ ಈಗ ಆರಂಭವಾಗಲಿದೆ. ವಿದ್ಯಾರ್ಥಿಗಳು ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳುವುದನ್ನು ಕಲಿತುಕೊಳ್ಳಬೇಕು. ನಿಮ್ಮ ಮೇಲೆ ಪೋಷಕರ ಸಾಕಷ್ಟು ನಿರೀಕ್ಷೆಯಿದೆ ಎಂದರು.

ಪದವಿ ಅಭ್ಯಾಸಿಸುವ ವೇಳೆಯಲ್ಲಿ ವಿದ್ಯಾರ್ಥಿಗಳು ಅನೇಕ ತುಂಟಾಟಗಳ ನಡುವೆಯು ಅಂತಿಮವಾಗಿ ಸಮಾಜದ ಮುಖ್ಯವಾಹಿನಿಗೆ ಧಾವಿಸಿದ್ದೀರಿ. ಇದೀಗ ಬದುಕು ಕಟ್ಟಿಕೊಳ್ಳುವ ಸಮಯವಾಗಿದೆ. ಕಳೆದ ಸಮಯ ಹಿಂತಿರುಗಿಬಾರದು. ಹಾಗಾಗಿ ಮುಂದಿನ ಭವಿಷ್ಯ ರೂಪಿಸುವ ಉದ್ಯೋಗದತ್ತ ದಾಪುಗಾಲು ಹಾಕಬೇಕಿದೆ ಎಂದು ತಿಳಿಸಿದರು.

ಶಿಕ್ಷಕರು ಹಾಗೂ ಪಾಲಕರ ಕನಸನ್ನು ಈಡೇರಿಸುವ ಮುಖ್ಯ ಜವಾಬ್ದಾರಿ ವಿದ್ಯಾರ್ಥಿಗಳ ಕೈಯಲ್ಲಿದೆ. ಹಲವಾರು ಕಂಪನಿಗಳಲ್ಲಿ ದೈಹಿಕ ಸಾಮರ್ಥ್ಯ, ಹಾವಭಾವ ನೋಡಿ ಉದ್ಯೋಗ ನೀಡುವುದಿಲ್ಲ, ಪ್ರತಿಭೆ ಎನ್ನುವುದು ಮನದಟ್ಟಾಗಿದ್ದರೆ ಕಂಪನಿಗಳು ತಾನಾಗಿಯೇ ಅವಕಾಶವನ್ನು ಕಲ್ಪಿಸಿಕೊಡಲಿವೆ ಎಂದರು.

ಇದೀಗ ರಾಷ್ಟ್ರವು ಯುದ್ಧದ ಕರಿಮೋಡದಿಂದ ನಿರಾಳವಾಗಿದೆ. ಗಡಿಯಲ್ಲಿ ಸೈನಿಕರ ನಿರಂತರ ಪರಿಶ್ರಮದಿಂದ ದೇಶ ಸುರಕ್ಷತವಾಗಿದೆ. ಅಲ್ಲದೇ ದೇಶಕ್ಕಾಗಿ ಪ್ರಾಣತೆತ್ತ ಯೋಧರು ದೇಶದ ಅಸ್ಮಿತೆಯ ಪ್ರತೀಕವಾಗಿರುವ ಕಾರಣ ದೊಡ್ಡದೊಂದು ನಮನ ಎಲ್ಲರೂ ಸಲ್ಲಿಸಬೇಕು ಎಂದು ಹೇಳಿದರು.

ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಸತತ ನಾಲ್ಕು ವರ್ಷಗಳಿಂದ ಕಾಲೇಜಿನಲ್ಲಿ ತಾಂತ್ರಿಕ ವ್ಯಾಸಂಗವನ್ನು ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಮುಂದಿನ ಭವಿಷ್ಯ ಉಜ್ವಲವಾಗಿರಲಿ. ಉದ್ಯೋಗಕ್ಕೆ ತೆರಳಿದರೂ ಜೀವನ ಭಾಷೆ ಕನ್ನಡವಾಗಿರಬೇಕು. ಆಂಗ್ಲ ಭಾಷೆ ಬದುಕಿನ ಒಂದು ಭಾಗವಾಗಿರಬೇಕು ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ಪದವಿ ಪೂರೈಸಿ ಮುಖ್ಯವಾಹಿನಿಗೆ ಬರುತ್ತಿರುವ ಹಾದಿ ಸುಲಭದ್ದಲ್ಲ. ಕಲ್ಲು-ಮುಳ್ಳಿನಿಂದ ಕೂಡಿರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ವಿಶಿಷ್ಟ ಪ್ರತಿಭೆ ಎಂಬುದು ಜನನದಲ್ಲೇ ಇರಲಿದೆ. ಅನಾವರಣಗೊಳಿಸುವ ಕಾರ್ಯಕ್ಕೆ ಪಾಲಕರು ನೀರೆರೆದು ಪೋಷಿಸಬೇಕು ಎಂದು ಕಿವಿಮಾತು ಹೇಳಿದರು.

ಮೈಸೂರು ವಿಶ್ವವಿದ್ಯಾಲಯ ಕುಲಪತಿ ಎನ್.ಕೆ.ಲೋಕನಾಥ್ ಮಾತನಾಡಿ, ವಿದ್ಯಾಭ್ಯಾಸದ ಕಲಿಕೆಯ ಕ್ಷಣಗಳು ಅತ್ಯುತ್ತಮವಾಗಿದ್ದು ಹಲವಾರು ಅವಕಾಶ ಸಿಗಲಿರುವ ಕಾರಣ ಸೂಕ್ಷ್ಮವಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ಮಂಗಳೂರು ಶಾಖೆಯ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಟಿ.ರಾಜಶೇಖರ್, ಎಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿ.ಟಿ.ಜಯದೇವ, ರಿಜಿಸ್ಟರ್ ಡಾ.ಸಿ.ಕೆ.ಸುಬ್ಬರಾಯ, ಆಡಳಿತ ಮಂಡಳಿ ಸದಸ್ಯ ಕೆ.ಮೋಹನ್, ಹಿರಿಯ ವೈದ್ಯ ಡಾ. ಜೆ.ಪಿ.ಕೃಷ್ಣೇಗೌಡ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಜಿ.ಎಂ. ಸತ್ಯನಾರಾಯಣ್, ವಿವಿಧ ವಿಭಾಗದ ಮುಖ್ಯಸ್ಥರಾದ ಡಾ.ವೀರೇಂದ್ರ, ಡಾ.ಸಂಪತ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ