- ಜಗಳೂರು ತಾಲೂಕಿನಲ್ಲಿ ಧಾರಾಕಾರ ಮಳೆ, ಶಾಲೆ ಕಾಂಪೌಂಡ್ ಕುಸಿತ - ದಾವಣಗೆರೆ ಸೇಂಟ್ ಮೇರಿಸ್ ಕಾಲೇಜಿನ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ
- - -
ಕನ್ನಡಪ್ರಭ ವಾರ್ತೆ ದಾವಣಗೆರೆ ಭಾರಿ ಗುಡುಗು, ಸಿಡಿಲು, ಮಿಂಚಿನ ಆರ್ಭಟದೊಂದಿಗೆ ದಾವಣಗೆರೆ, ಹರಿಹರ, ಜಗಳೂರು ತಾಲೂಕಿನಲ್ಲಿ ಮಂಗಳವಾರ ಸಂಜೆಯಿಂದ ಮಳೆ ಸುರಿಯುತ್ತಿದೆ. ಬರಪೀಡಿತ ಜಗಳೂರು ತಾಲೂಕಿನ ನೆಲ ತಣಿಯುವಂತೆ ಜೋರು ಮಳೆ ಆಗಿರುವುದು ರೈತರ ಖುಷಿಗೆ ಕಾರಣವಾಗಿದೆ.ಜಗಳೂರು ತಾಲೂಕಿನಲ್ಲಿ ಬೆಳಗ್ಗೆಯಿಂದಲೇ ಉತ್ತಮ ಮಳೆಯಾಗಿದೆ. ಮಳೆ ಹೊಡೆತಕ್ಕೆ ಶಾಲಾ ಕಾಪಾಂಡ್ ಕುಸಿದುಬಿದ್ದರೆ, ತಾಲೂಕಿನ ವಿವಿಧೆಡೆ ಚೆಕ್ ಡ್ಯಾಂಗಳಿಗೆ ನೀರು ಹರಿದುಬಂದಿದೆ. ಎಲೆಬಳ್ಳಿ ತೋಟಗಳಿಗೆ ಭಾಗಶಃ ಹಾನಿಯಾಗಿದೆ. ಒಟ್ಟಾರೆ ಮಳೆಯಾಶ್ರಿತ ತಾಲೂಕಿನಲ್ಲಿ ಕೃಷಿ ಚಟುವಟಿಕೆ ಚುರುಕುಗೊಳ್ಳುವಂತಾಗಿದೆ.
ಸಂಜೆ 4 ಗಂಟೆಯಿಂದಲೇ ದಟ್ಟಮೋಡಗಳು ಆವರಿಸಿ, ತಂಪು ಗಾಳಿ ಬೀಸತೊಡಗಿತ್ತು. ಅನಂತರ 5 ಗಂಟೆಯಿಂದ ಸಿಡಿಲು, ಗುಡುಗಿನ ಆರ್ಭಟದೊಂದಿಗೆ ಶುರುವಾದ ಮಳೆ ರಭಸವಾಗಿ ಸುರಿಯತೊಡಗಿತು. ಸಂಜೆ ಕೆಲಸ ಮುಗಿಸಿ, ಮನೆಗೆ ಹೋಗುವ ಸಮಯಕ್ಕೆ ಸರಿಯಾಗಿ ಮಳೆ ಆಗಿದ್ದರಿಂದ ಜನರು ಪರದಾಡಬೇಕಾಯಿತು. ವ್ಯಾಪಾರ ವಹಿವಾಟು, ಮಾರುಕಟ್ಟೆ ಪ್ರದೇಶದಲ್ಲಿ ಜೋರು ಮಳೆಯಿಂದಾಗಿ ಜನಸಂಚಾರ, ವಾಹನ ಸಂಚಾರವೇ ಸ್ತಬ್ಧವಾಯಿತು.
ಒಟ್ಟಾರೆ ಕಳೆದ ಕೆಲ ದಿನಗಳಿಂದ ನೀರಿಲ್ಲದೇ ಒಣಗಿದ್ದ ಭೂರಮೆಗೆ ತಣಿಸುವಂತೆ ಮಳೆಯಾಗುತ್ತಿದೆ. ಸೋಮವಾರ ಸಂಜೆ ಸಹ ಜೋರು ಮಳೆಯಾಗಿ ನಂತರ ನಿಂತಿತ್ತು. ಮಂಗಳವಾರ ರಾತ್ರಿಯೂ ದಟ್ಟ ಮೋಡಗಳು ಕಂಡುಬಂದವು. ಹೊನ್ನಾಳಿ, ಚನ್ನಗಿರಿ ತಾಲೂಕಿನಲ್ಲೂ ಸಣ್ಣ ಪ್ರಮಾಣದಲ್ಲಿ ಮಳೆಯಾಗಿದೆ. ದಾವಣಗೆರೆ, ಜಗಳೂರು, ಹರಿಹರದ ಕೆಲ ಭಾಗದಲ್ಲಿ ಜೋರು ಮಳೆಯಾಗಿದೆ. ಹರಿಹರದಲ್ಲಿ ಮಂಗಳವಾರ ರಾತ್ರಿ 7 ರಿಂದ ಪ್ರಾರಂಭವಾಗಿ ರಾತ್ರಿ 8 ರವರೆಗೆ ಮಳೆಯಾಯಿತು.
-13ಕೆಡಿವಿಜಿ18, 19: