ಹಾನಗಲ್ಲ: ಕಾರ್ಮಿಕ ಇಲಾಖೆ ಕಾರ್ಯವೈಖರಿ, ಅವ್ಯವಸ್ಥೆ ಬಗ್ಗೆ ಸೋಮವಾರ ನಡೆದ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು.
ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ತರನ್ನುಂ ಅವರು ತಮ್ಮ ಇಲಾಖೆಯ ಪ್ರಗತಿ ಕುರಿತು ವಿವರಣೆ ನೀಡುವ ಸಂದರ್ಭದಲ್ಲಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಹಾನಗಲ್ಲ ತಾಲೂಕಿನಲ್ಲಿ 49,632 ನೋಂದಾಯಿತ ಕಾರ್ಮಿಕರಿದ್ದರು. ಆದರೆ ಅವರಲ್ಲಿ ಪರಿಶೀಲನೆಗೊಳಪಡಿಸಿದಾಗ ಕೇವಲ 9,194 ಕಾರ್ಮಿಕರು ಮಾತ್ರ ಸರಿಯಾದ ದಾಖಲೆ ಹೊಂದಿದ್ದಾರೆ. ಈ ನಡುವೆ 6,149 ಕಾರ್ಮಿಕರು ವಿಚಾರಣೆಗಾಗಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಹಲವರು ತಾವು ನಿಜವಾದ ಕಾರ್ಮಿಕರು ಎಂದು ಇಲಾಖೆಯ ಪರಿಶೀಲನೆಗೆ ಆಕ್ಷೇಪಣೆ ಸಲ್ಲಿಸುತ್ತಿದ್ದಾರೆ. ನಿಜವಾದ ಕಾರ್ಮಿಕರಿಗೆ ಸೌಲಭ್ಯ ಒದಗಿಸುವ ಯತ್ನ ನಡೆದಿದೆ ಎಂದು ತರನ್ನುಂ ವಿವರಿಸಿದರು.
ಕಾರ್ಮಿಕರ ಇಲಾಖೆ ಕಾರ್ಮಿಕರ ಹಿತ ಕಾಯುತ್ತಿಲ್ಲ. ಎರಡು ವರ್ಷಗಳ ಹಿಂದೆಯೇ ಕಾರ್ಮಿಕರೊಬ್ಬರು ಕೆಲಸದ ಸಂದರ್ಭದಲ್ಲಿ ಕೈ ಕಳೆದುಕೊಂಡಿದ್ದಾರೆ. ಅವರ ಅವಲಂಬಿತರು ಪರಿತಪಿಸುತ್ತಿದ್ದಾರೆ. ಈ ವರೆಗೂ ಅವರಿಗೆ ಕಾರ್ಮಿಕ ಇಲಾಖೆಯಿಂದ ಬರಬೇಕಾದ ಲಕ್ಷಾಂತರ ರು. ಪರಿಹಾರ ಹಾಗೂ ಇತರ ಸೌಲಭ್ಯಗಳು ದೊರೆತಿಲ್ಲ. ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರೆಯಬೇಕು. ಅನರ್ಹರನ್ನು ನಿರ್ದಾಕ್ಷಿಣ್ಯವಾಗಿ ಸೌಲಭ್ಯಗಳಿಂದ ದೂರವಿಡಬೇಕು ಎಂದು ಸದಸ್ಯರು ಒತ್ತಾಯಿಸಿದರು.ಹಾನಗಲ್ಲ ತಾಲೂಕಿನ ಕಾರ್ಮಿಕರಿಗೆ ಸಕಾಲಿಕವಾಗಿ ವಿತರಿಸಬೇಕಾದ ಕಾರ್ಮಿಕ ಕಿಟ್‌ಗಳು ಬ್ಯಾಡಗಿಯ ಗೋದಾಮಿನಲ್ಲಿ ಧೂಳು ತಿನ್ನುತ್ತಿವೆ. ಇದರಿಂದ ಸರ್ಕಾರಕ್ಕೂ ನಷ್ಟ, ಕಾರ್ಮಿಕರಿಗೂ ಪ್ರಯೋಜನವಿಲ್ಲ. ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಸದಸ್ಯರು ದೂರಿದರು.
ನಾನು ಹಾವೇರಿ ಜಿಲ್ಲೆಗೆ ಬಂದು ಕೇವಲ ಎರಡು ತಿಂಗಳುಗಳಾಗಿವೆ. ಇನ್ನು ಒಂದೇ ತಿಂಗಳಿನಲ್ಲಿ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ಕಾರ್ಮಿಕರ ಹಿತ ಕಾಪಾಡುವುದಾಗಿ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ತರನ್ನುಂ ಖಚಿತ ಭರವಸೆ ನೀಡಿದರು.ಹಾವೇರಿ ಜಿಲ್ಲೆಯ ಕಾರ್ಮಿಕರ ಮಕ್ಕಳಿಗೆ ವಿತರಿಸಬೇಕಾದ ಒಂದು ನೂರು ಲ್ಯಾಪ್‌ಟಾಪ್ ಕಳ್ಳತನವಾಗಿ ಹೋಗಿದ್ದವು. ಪೊಲೀಸ್ ಇಲಾಖೆ ಅವುಗಳನ್ನು ಪತ್ತೆ ಹಚ್ಚಿ ಅದರಲ್ಲಿ 80 ಲ್ಯಾಪ್‌ಟಾಪ್ ನಮಗೆ ನೀಡಿದೆ. ಇನ್ನೂ 20 ಲ್ಯಾಪ್‌ಟಾಪ್ ನೀಡಬೇಕಾಗಿದೆ. ಕೂಡಲೇ ಲ್ಯಾಪ್‌ಟಾಪ್ ಹಾಗೂ ಕಾರ್ಮಿಕ ಕಿಟ್‌ಗಳನ್ನು ಕಾರ್ಮಿಕರಿಗೆ ಒಂದು ತಿಂಗಳಿನಲ್ಲಿಯೇ ವಿತರಿಸುವ ಭರವಸೆ ನೀಡಿದರು.
ಶಾಸಕ ಶ್ರೀನಿವಾಸ ಮಾನೆ, ತಹಸೀಲ್ದಾರ್ ಎಸ್. ರೇಣುಕಾ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಕೆಡಿಪಿ ಸದಸ್ಯರಾದ ಅನಿತಾ ಡಿಸೋಜಾ, ರಾಜಕುಮಾರ ಜೋಗಪ್ಪನವರ, ರಾಜೇಶ ಚವ್ಹಾಣ, ಮೆಹಬೂಬಸಾಬ್ ಬಂಕಾಪುರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ ಉಪಸ್ಥಿತರಿದ್ದರು.