ಹುಬ್ಬಳ್ಳಿ:
ಬಂಧಿತರೆಲ್ಲರೂ ಹೊರರಾಜ್ಯದವರೇ ಆಗಿದ್ದಾರೆ. ಮುಂಬೈ ಥಾಣೆಯ ಅಂಕುಶ ಕದಂ, ವಿಲಾಸ ಮೋಹಿತೆ, ಮುಂಬೈ ಕಲ್ಯಾಣದ ಚಂದ್ರಶೇಖರ ಅಲಿಯಾಸ್ ರಾಕೇಶ ಜಾಧವ, ಗುಜರಾತ್‌ನ ವಡೋದರದ ಜಿನ್ನೇಶಕುಮಾರ ಬಂಧಿತರು. ಈ ಎಲ್ಲರನ್ನು ಉತ್ತರ ಪ್ರದೇಶದ ಗೋರಕಪುರದಲ್ಲಿ ಬಂಧಿಸಲಾಗಿದೆ. ಇನ್ನು ಇಬ್ಬರು ಆರೋಪಿಗಳ ಕಣ್ಮರೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.
ಘಟನೆ ಏನು?:ಕೇರಳ ರಾಜ್ಯದ ಚಿನ್ನಾಭರಣ ವ್ಯಾಪಾರಿ ಸುದೀನ್ ಎಂ.ಆರ್. ಹಾಗೂ ಆತನ ಬಳಿ ಕೆಲಸಕ್ಕಿದ್ದ ವಿವೇಕ ಈ ಇಬ್ಬರನ್ನು ಇಲ್ಲಿನ ನೀಲಿಜಿನ್ ರಸ್ತೆ ಬಳಿ ತಡೆದಿದ್ದ ಐವರ ತಂಡ, ಇವರಿಗೆ ತಾವು ಇಡಿ ಅಧಿಕಾರಿಗಳು ಎಂದು ಗುರುತಿನ ಚೀಟಿ ತೋರಿಸಿದ್ದರು. ಜತೆಗೆ ವಿಚಾರಣೆಗೆ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ಬಳಿಕ ಕಿತ್ತೂರು ಸಮೀಪದಲ್ಲಿ ಕೆಲಸಗಾರ ವಿವೇಕನನ್ನು ಇಳಿಸಿದ್ದರು. ಸುದೀನ್ ಅವರನ್ನು ಬೆದರಿಸಿ, ಅವರ ಮೊಬೈಲ್ ಫೋನ್ ಪಡೆದು ಸಿಮ್ ತೆಗೆದಿದ್ದಾರೆ. ನಂತರ ಅವರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣವಿದ್ದ ಬ್ಯಾಗ್ ಕಿತ್ತುಕೊಂಡಿದ್ದಾರೆ. ಸುದೀನ ಅವರನ್ನು ಎಂ.ಕೆ. ಹುಬ್ಬಳ್ಳಿ ರಸ್ತೆಗೆ ಕರೆದೊಯ್ದು ಮಾರ್ಗ ಮಧ್ಯೆ ಬಿಟ್ಟು ನಗದು ಹಾಗೂ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದರು. ಸುದೀನ ಬಳಿ ₹3.2 ಕೋಟಿ ಮೌಲ್ಯದ 2 ಕೆಜಿ 942 ಗ್ರಾಂ ಚಿನ್ನಾಭರಣ ಹಾಗೂ ₹ 2 ಲಕ್ಷ ನಗದು ಇತ್ತು. ಎರಡನ್ನು ಕಿತ್ತುಕೊಂಡು ಈ ತಂಡ ಪರಾರಿಯಾಗಿತ್ತು.
ಇದೀಗ ಬಂಧಿತರಿಂದ ₹6,65,284 ಬೆಲೆ ಬಾಳುವ 56.26 ಗ್ರಾಂ ಚಿನ್ನದ ಒಡವೆ, ₹60,000 ನಗದು ಹಾಗೂ 7 ಮೊಬೈಲ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದ ಚಿನ್ನಾಭರಣ ಎಲ್ಲಿ ಇಟ್ಟಿದ್ದಾರೆ ಎಂಬುದು ವಿಚಾರಣೆಯಿಂದ ತಿಳಿದು ಬರಬೇಕಿದೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಪ್ರಕರಣದ ತನಿಖೆಯನ್ನು ಸಿಸಿಬಿ ವಿಭಾಗಕ್ಕೆ ಹಸ್ತಾಂತರಿಸಲಾಗಿತ್ತು. ಆರೋಪಿಗಳನ್ನು ಉತ್ತರ ಪ್ರದೇಶದ ಗೋರಖಪುರ ಪಟ್ಟಣದಲ್ಲಿ ಬಂಧಿಸಲಾಗಿದೆ.ವಿಶೇಷ ತಂಡ:
ಇಷ್ಟೊಂದು ದೊಡ್ಡ ದರೋಡೆ ಪ್ರಕರಣದಿಂದ ಇಡೀ ನಗರವೇ ಬೆಚ್ಚಿ ಬಿದ್ದಿತ್ತು. ಪೊಲೀಸ್ ಕಮಿಷನರೇಟ್‌ಗೂ ದೊಡ್ಡ ಸವಾಲಿನ ಕೆಲಸವಾಗಿತ್ತು. ಈ ಹಿನ್ನೆಲೆಯಲ್ಲಿ ಇದಕ್ಕಾಗಿ ಎರಡು ಪ್ರತ್ಯೇಕ ತಂಡಗಳನ್ನೇ ಪೊಲೀಸ್ ಕಮಿಷನರೇಟ್ ರಚಿಸಿತ್ತು. ಕಾರು ತೆರಳಿದ ಮಾರ್ಗದಲ್ಲಿನ ಎಲ್ಲ ಸಿಸಿ ಕ್ಯಾಮೆರಾಗಳಲ್ಲಿ ದೃಶ್ಯಾವಳಿ ಪರಿಶೀಲನೆ ನಡೆಸಿದ್ದ ಪೊಲೀಸರು, ಉತ್ತರ ಪ್ರದೇಶದ ಗೋರಕಪುರದಲ್ಲಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿತ್ತು. ಇನ್ನಿಬ್ಬರು ಆರೋಪಿಗಳು ನಾಪತ್ತೆಯಾಗಿದ್ದು ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.ಈ ಕುರಿತು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದಿದೆ.