ನಾರಾಯಣ ಹೆಗಡೆ
ಬಯಲು ಸೀಮೆಯ ವಿಶಾಲ ಹುಲ್ಲುಗಾವಲುಗಳಲ್ಲಿ ಹಿಂಡುಹಿಂಡಾಗಿ ಓಡಾಡುವ ಕೃಷ್ಣಮೃಗಗಳು... ದೂರದಿಂದಲೇ ಎದ್ದು ಕಾಣುವ ಕಪ್ಪು-ಬಿಳಿ ಬಣ್ಣದ ಕೃಷ್ಣಮೃಗಗಳ ಸೊಬಗು... ಪ್ರಕೃತಿಯ ಮಡಿಲಿನ ಈ ಅಪರೂಪದ ದೃಶ್ಯಕ್ಕೆ ಸಾಕ್ಷಿಯಾಗಿರುವ ರಾಣಿಬೆನ್ನೂರು ಕೃಷ್ಣಮೃಗ ಅಭಯಾರಣ್ಯ ಇದೀಗ ತನ್ನ ಸುವರ್ಣ ಸಂಭ್ರಮದ ಪಯಣವನ್ನು ಪೂರ್ಣಗೊಳಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಕೃಷ್ಣಮೃಗಗಳ ಸಂರಕ್ಷಣೆಗಾಗಿ 1974, ಜೂ.17ರಂದು ಅಧಿಸೂಚನೆಯ ಮೂಲಕ ರಾಣಿಬೆನ್ನೂರು ಕೃಷ್ಣಮೃಗ ಅಭಯಾರಣ್ಯ ಅಸ್ತಿತ್ವಕ್ಕೆ ಬಂದಿತು. 119 ಚದರ ಕಿಮೀ ವಿಸ್ತೀರ್ಣ ಹೊಂದಿರುವ ಈ ಅಭಯಾರಣ್ಯಕ್ಕೆ ಇದೀಗ ಐದು ದಶಕಗಳ ಇತಿಹಾಸ. ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಸುತ್ತಮುತ್ತಲಿನ ಒಣ ಪ್ರದೇಶದ ಹುಲ್ಲುಗಾವಲುಗಳು ಕೃಷ್ಣಮೃಗಗಳ ಆವಾಸಕ್ಕೆ ಪೂರಕವಾಗಿದ್ದವು. ಇದೇ ಕಾರಣಕ್ಕೆ ಈ ಪ್ರದೇಶವನ್ನು ಸಂರಕ್ಷಿತ ವನ್ಯಜೀವಿ ಪ್ರದೇಶವಾಗಿ ಘೋಷಿಸಲಾಯಿತು. ಅಭಯಾರಣ್ಯವು ಮುಖ್ಯವಾಗಿ ಪೊದೆಕಾಡು, ಹುಲ್ಲುಗಾವಲು ಹಾಗೂ ನೆಡುತೋಪುಗಳನ್ನು ಒಳಗೊಂಡಿದೆ. 15 ವರ್ಷಗಳ ಹಿಂದೆ ನಡೆಸಿದ ಸಮೀಕ್ಷೆ ವೇಳೆ 7 ಸಾವಿರಕ್ಕಿಂತ ಹೆಚ್ಚು ಕೃಷ್ಣಮೃಗಗಳು ಇದ್ದವು. ಈಗ ದುಪ್ಪಟ್ಟಾಗಿರುವ ಸಾಧ್ಯತೆಯಿದೆ.ಅಭಯಾರಣ್ಯವು ಎರಡು ಪ್ರತ್ಯೇಕ ಭಾಗಗಳಾಗಿ ಹರಡಿಕೊಂಡಿದ್ದು, ಕೋರ್ ವಲಯ ಮತ್ತು ಪ್ರವಾಸೋದ್ಯಮಕ್ಕೆ ಅವಕಾಶವಿರುವ ಬಫರ್ ವಲಯ ಹೊಂದಿದೆ. ರಾಜ್ಯ ಪ್ರವಾಸೋದ್ಯಮದ ಪ್ರಕಾರ ಒಟ್ಟು 119 ಚದರ ಕಿ.ಮೀ. ಪ್ರದೇಶದಲ್ಲಿ ಸುಮಾರು 15 ಚದರ ಕಿಮೀ ಕೋರ್ ವಲಯ ಹಾಗೂ 104 ಚದರ ಕಿಮೀ ಹೆಚ್ಚುವರಿ ಪ್ರದೇಶವಿದೆ. ಇದರಿಂದ ವನ್ಯಜೀವಿ ಸಂರಕ್ಷಣೆಯೊಂದಿಗೆ ಪ್ರವಾಸೋದ್ಯಮ ಅಭಿವೃದ್ಧಿಗೂ ಪ್ರಶಸ್ತವಾಗಿದೆ.
50 ವರ್ಷಗಳಲ್ಲಿ ಬದಲಾದ ಚಿತ್ರಣ: 1974ರಲ್ಲಿ ಸಂರಕ್ಷಣೆಯ ಉದ್ದೇಶದಿಂದ ಆರಂಭವಾದ ಅಭಯಾರಣ್ಯ, ಕಾಲಕ್ರಮೇಣ ವನ್ಯಜೀವಿ ಪ್ರವಾಸೋದ್ಯಮದ ತಾಣವಾಗಿಯೂ ಗುರುತಿಸಿಕೊಳ್ಳುತ್ತಿದೆ. ಕೃಷ್ಣಮೃಗಗಳ ಹಿಂಡುಗಳನ್ನು ಅವುಗಳ ಸಹಜ ಆವಾಸದಲ್ಲೇ ವೀಕ್ಷಿಸುವ ಅವಕಾಶ ಪ್ರವಾಸಿಗರನ್ನು ಸೆಳೆಯುತ್ತಿದೆ.
ಸಂರಕ್ಷಣೆಯ ಜತೆಗೆ ಸವಾಲು: ಅಭಯಾರಣ್ಯದ ಸುತ್ತಲೂ ಕೃಷಿ ಪ್ರದೇಶಗಳಿರುವುದರಿಂದ ವನ್ಯಜೀವಿ–ಕೃಷಿ ಪ್ರದೇಶದ ನಡುವಿನ ಸಂಘರ್ಷ, ಆವಾಸಸ್ಥಳದ ಸಂರಕ್ಷಣೆ, ಹುಲ್ಲುಗಾವಲುಗಳ ನಿರ್ವಹಣೆ ಮತ್ತು ಮಾನವ ಚಟುವಟಿಕೆಗಳ ನಿಯಂತ್ರಣ ಪ್ರಮುಖ ಸವಾಲುಗಳಾಗಿವೆ. ಕೃಷ್ಣಮೃಗಗಳಂತಹ ಹುಲ್ಲುಗಾವಲು ಆಧಾರಿತ ವನ್ಯಜೀವಿಗಳ ಉಳಿವಿಗೆ ಕೇವಲ ಮರ ಬೆಳೆಸುವುದಕ್ಕಿಂತ ನೈಸರ್ಗಿಕ ಹುಲ್ಲುಗಾವಲು ಪರಿಸರದ ಸಂರಕ್ಷಣೆ ಕೂಡ ಅಷ್ಟೇ ಮುಖ್ಯವಾಗಿದೆ.
ಜಿಲ್ಲೆಯಲ್ಲಿ ಕಾಗಿನೆಲೆ, ಬಾಡ, ಶಿಶುವಿನಹಾಳ, ಸವಣೂರು ನವಾಬರ ಅರಮನೆ, ಬಂಕಾಪುರ ನವಿಲುಧಾಮ, ಬ್ಯಾಡಗಿ ವಿಶ್ವಪ್ರಸಿದ್ಧ ಮೆಣಸಿನಕಾಯಿ ಮಾರುಕಟ್ಟೆ, ಗಳಗನಾಥ, ಕದರಮಂಡಲಗಿ ದೇವಸ್ಥಾನ, ಗೊಟಗೋಡಿ ರಾಕ್ ಗಾರ್ಡನ್ ಹೀಗೆ ಹತ್ತು ಹಲವು ಪ್ರವಾಸಿ ತಾಣಗಳನ್ನು ಒಳಗೊಂಡ ಟೂರ್ ಸರ್ಕ್ಯೂಟ್ ಶುರು ಮಾಡಿದರೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸಬಹುದಾಗಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಆಸಕ್ತಿ ತೋರಬೇಕಿದೆ.