ಮಕ್ಕಳಿಗೆ ತಂದೆ, ತಾಯಿ ಮೊದಲ ಗುರುವಾದರೆ ಎರಡನೇ ಸ್ಥಾನ ಶಾಲೆಯಲ್ಲಿ ಪಾಠ ಹೇಳುವ ಶಿಕ್ಷಕರಿಗೆ ನೀಡುತ್ತೇವೆ

ಕೂಡ್ಲಿಗಿ: ಶಿಕ್ಷಕರು ಬೋಧನೆ ಮಾಡುವ ಬರೀ ವ್ಯಕ್ತಿಯಾಗಿರದೆ ವಿದ್ಯಾರ್ಥಿಗಳಿಗೆ ಜ್ಞಾನದ ದೀವಿಗೆ ಹಚ್ಚಿ ಉಜ್ವಲ ಭವಿಷ್ಯ ರೂಪಿಸುವ ಮಾರ್ಗದರ್ಶಕರಾಗಿದ್ದರಿಂದ ಶಿಕ್ಷಕರು ಉತ್ತಮ ವ್ಯಕ್ತಿತ್ವ ಹೊಂದುವ ಮೂಲಕ ಈ ಸಮಾಜಕ್ಕೆ ದಿಕ್ಸೂಚಿಯಾಗಬೇಕಿದೆ ಎಂದು ಕೂಡ್ಲಿಗಿ ಶಾಸಕ ಡಾ. ಶ್ರೀನಿವಾಸ ಶಿಕ್ಷಕರಿಗೆ ಕಿವಿಮಾತು ಹೇಳಿದರು.

ಅವರು ಪಟ್ಟಣದ ಅನುಬಂಧ ಕಲ್ಯಾಣ ಮಂಟಪದಲ್ಲಿ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ತಂದೆ, ತಾಯಿ ಮೊದಲ ಗುರುವಾದರೆ ಎರಡನೇ ಸ್ಥಾನ ಶಾಲೆಯಲ್ಲಿ ಪಾಠ ಹೇಳುವ ಶಿಕ್ಷಕರಿಗೆ ನೀಡುತ್ತೇವೆ, ವಿದ್ಯಾರ್ಥಿಯ ಬದುಕಿನಲ್ಲಿ ಶಿಕ್ಷಕರ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಮಕ್ಕಳ ಭವಿಷ್ಯವನ್ನೇ ಬದಲಿಸುವ ಶಕ್ತಿ ಹೊಂದಿದೆ. ಶಿಕ್ಷಕರು ಕೇವಲ ಪಾಠ ಹೇಳುವವರಲ್ಲ, ವಿದ್ಯಾರ್ಥಿಗಳ ಬದುಕಿಗೆ ಬೆಳಕು ಚೆಲ್ಲುವ ಭರವಸೆಯ ದಾರಿಯಾಗಿದ್ದಾರೆ. ಶಿಕ್ಷಕರ ಕೈಯಲ್ಲಿ ಪಾಠ ಮಾತ್ರವಲ್ಲ ಸಮಾಜದ ಭವಿಷ್ಯವೂ ಇದೆ. ಒಬ್ಬ ವೈದ್ಯರು ತಪ್ಪು ಮಾಡಿದರೆ ಒಬ್ಬ ರೋಗಿಯ ಜೀವಕ್ಕೆ ಅಪಾಯವಾಗಬಹುದು, ಒಬ್ಬ ನ್ಯಾಯಾಧೀಶರು ತಪ್ಪು ತೀರ್ಪು ನೀಡಿದರೆ ಒಬ್ಬ ವ್ಯಕ್ತಿಗೆ ಶಿಕ್ಷೆಯಾಗಬಹುದು ಆದರೆ ಒಬ್ಬ ಶಿಕ್ಷಕ ತನ್ನ ಕರ್ತವ್ಯದಲ್ಲಿ ತಪ್ಪು ಮಾಡಿದರೆ ಅದು ಇಡೀ ಸಮಾಜದ ಭವಿಷ್ಯದ ಮೇಲೆಯೇ ದುಷ್ಪರಿಣಾಮ ಬೀರಬಹುದು ಎಂದರು.

ಸಾನ್ನಿಧ್ಯ ವಹಿಸಿದ್ದ ಕೂಡ್ಲಿಗಿ ಹಿರೇಮಠದ ಪ್ರಶಾಂತಸಾಗರ ಸ್ವಾಮೀಜಿ ಮಾತನಾಡಿ, ಈ ದೇಶಕ್ಕೆ ಶಿಕ್ಷಕರ ಕೊಡುಗೆ ಅಪಾರವಾಗಿದ್ದು, ದೇಶದ ಪ್ರತಿಯೊಬ್ಬ ವಿದ್ಯಾರ್ಥಿಯ ಅಂಕು ಡೊಂಕು ತಿದ್ದುವ ಏಕೈಕ ಶಕ್ತಿ ಎಂದರೆ ಅದು ಶಿಕ್ಷಕರಿಂದ ಮಾತ್ರ ಸಾಧ್ಯ, ಮಠಮಾನ್ಯ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತಿವೆ. ಇದರಿಂದ ಶೈಕ್ಷಣಿಕ ಮಟ್ಟ ಹೆಚ್ಚಿಸಿ ದೇಶದ ಪ್ರಗತಿ ಹೊಂದಲಿದೆ ಎಂದರು.

ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ನರಸಪ್ಪ ಮಾತನಾಡಿ, ಶಿಕ್ಷಕರ ಕೊಡುಗೆ ಅನನ್ಯ, ತಮ್ಮ ಕರ್ತವ್ಯ ನಿಷ್ಠೆ ತೋರುವ ಮೂಲಕ ಶಿಕ್ಷಕರು ಮುನ್ನಡೆದರೆ ಇಡೀ ದೇಶವೇ ಪ್ರಗತಿ ಹೊಂದಲು ಸಾಧ್ಯವಾಗಲಿದೆ ಎಂದರು. ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ ಬೇವೂರು ಮಾತನಾಡಿ, ತಾಲೂಕಿನಲ್ಲಿ ಉತ್ತಮ ಶಿಕ್ಷಕರ ಸಹಾಯದಿಂದ ಶೈಕ್ಷಣಿಕ ಮಟ್ಟ ಹೆಚ್ಚಿದ್ದು, ಕಳೆದ ಸಾಲಿಗಿಂತ ಈ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಬಂದಿದ್ದು ಮುಂದಿನ ಪರೀಕ್ಷೆಯಲ್ಲೂ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಶಿಕ್ಷಕರು ಮುಂದಾಗಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ತಾಲೂಕಿನ ಶೈಕ್ಷಣಿಕ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೂ ಮೊದಲು ಮಹಾತ್ಮ ಗಾಂಧೀಜಿ ಪವಿತ್ರ ಚಿತಾಭಸ್ಮ ರಾಷ್ಟ್ರೀಯ ಹುತಾತ್ಮರ ಸ್ಮಾರಕದಿಂದ ಸರ್ವಪಲ್ಲಿ ಡಾ.ರಾಧಾಕೃಷ್ಣನ್ ಭಾವಚಿತ್ರ ಹೊತ್ತ ಸಾರೋಟದಲ್ಲಿ ಅದ್ಧೂರಿ ಮೆರವಣಿಗೆ ಪಟ್ಟಣದ ಪ್ರಮುಖ ವೃತ್ತಗಳ ಮೂಲಕ ಸಾಗಿತ್ತು ಉರಿ ಬಿಸಿಲು ಲೆಕ್ಕಿಸದೆ ಶಿಕ್ಷಕರು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಆರ್.ಬಿ.,ತಾಲೂಕು ನೌಕರರ ಸಂಘದ ಅಧ್ಯಕ್ಷ ಎಸ್.ವೆಂಕಟೇಶ ಸೇರಿದಂತೆ ತಾಲೂಕಿನ ಎಲ್ಲ ಶಿಕ್ಷಕ ಸಂಘದ ಪದಾಧಿಕಾರಿ, ಶಿಕ್ಷಕರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.