ಕುಕನೂರು ತಾಲೂಕಿನ ಬಿನ್ನಾಳ, ಮಸಬಹಂಚಿನಾಳ, ಭಾನಾಪುರ ಗ್ರಾಮದಲ್ಲಿ ಜರುಗಿದ ಜನಸಂದರ್ಶನ ಕಾರ್ಯಕ್ರಮದಲ್ಲಿ ಸಚಿವ ಬಸವರಾಜ ರಾಯರಡ್ಡಿ ಭಾಗವಹಿಸಿದ್ದರು.
ಕುಕನೂರು: ರಾಜ್ಯದಲ್ಲಿ ಮಳೆ ಇಲ್ಲ, ಬೆಳೆ ಇಲ್ಲ, ಸರ್ಕಾರಕ್ಕೆ ಆದಾಯವೂ ಕಡಿಮೆ ಇದೆ. ಕೇಂದ್ರ ಸರ್ಕಾರ ಸಹ ಒಂದು ರು. ಕೊಡುತ್ತಿಲ್ಲ. ಕಳೆದ ಸಲ ₹3700 ಕೋಟಿ ಕೋರ್ಟಿನ ಮೂಲಕ ತೆಗೆದುಕೊಂಡಿದ್ದೇವೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದಾರೆ.
ತಾಲೂಕಿನ ಬಿನ್ನಾಳ, ಮಸಬಹಂಚಿನಾಳ, ಭಾನಾಪುರ ಗ್ರಾಮದಲ್ಲಿ ಜರುಗಿದ ಜನಸಂದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಮಹಿಳೆಯರಿಗೆ ಬಸ್ ಉಚಿತ ಪ್ರಯಾಣ ಮಾಡಿದಂತೆ, ಪ್ರಧಾನಿ ಮೋದಿ ಪುರುಷರಿಗಾಗಿ ರೈಲು ಪ್ರಯಾಣ ಉಚಿತ ಮಾಡಲಿ ನೋಡೋಣ ಎಂದು ಸವಾಲು ಹಾಕಿದರು. ಆದರೂ ಜನ ಮೋದಿ ಮೋದಿ ಅನ್ನುತ್ತಾರೆ ಎಂಬ ಬೇಸರ ವ್ಯಕ್ತಪಡಿಸಿದರು.ಅಂಗವಿಕಲರಿಗೆ ವಿಶೇಷ ಅನುದಾನ: ಅಂಗವಿಕಲರಿಗಾಗಿ ವಿಶೇಷ ಅನುದಾನ ಹಾಗೂ ಮನೆ ನೀಡುವಂತೆ ಮುಖ್ಯಮಂತ್ರಿಗೆ ನಾನು ತಕ್ಷಣ ಪತ್ರದ ಮೂಲಕ ಮನವಿ ಮಾಡುತ್ತೇನೆ ಎಂದು ಸಚಿವ ರಾಯರಡ್ಡಿ ಹೇಳಿದರು.ಮುಂದಿನ ತಿಂಗಳು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುಕನೂರಿಗೆ ಕರೆಯಿಸಿ, ಕೆರೆ ತುಂಬಿಸುವ ಯೋಜನೆಗೆ ಚಾಲನೆ ಕೊಡಿಸುತ್ತೇನೆ. ಯಲಬುರ್ಗಾ ಕ್ಷೇತ್ರದಲ್ಲಿ ಸದ್ಯ ನೀರಾವರಿ ಮಾಡಲು ಆಗುವುದಿಲ್ಲ. ಕೆರೆ ತುಂಬಿಸುತ್ತಿದ್ದೇವೆ. ನೀರಾವರಿಗೆ ಕಾನೂನು ತೊಡಕು ಇದೆ ಎಂದರು.
ವಿವಿ ಸ್ವಚ್ಛತೆ: ವಿವಿಗಳ ಕಸ ಹೊಡೆಯುವ ಕಾರ್ಯ ಮಾಡುತ್ತಿದ್ದೇನೆ. ಹಲವಾರು ಯೋಜನೆಗಳು ಜಾರಿಗೆ ತರುತ್ತೇನೆ. ಮಾಸಾಶನಕ್ಕೆ ಆದಾಯ ಮಿತಿಯನ್ನು ₹32 ಸಾವಿರದಿಂದ ₹1.20 ಲಕ್ಷದ ವರೆಗೆ ಹೆಚ್ಚಿಸಿದೆ. ಇದರಿಂದ ಹೆಚ್ಚಿನ ಜನರಿಗೆ ಸಾಮಾಜಿಕ ಭದ್ರತೆ ಯೋಜನೆಗಳಲ್ಲಿ ಮಾಸಾಶನ ದೊರೆಯಲಿದೆ ಎಂದರು.ನಾನು, ಹಾಲಪ್ಪ ಕ್ಲೋಸ್: ನಾನು ಮಾಜಿ ಸಚಿವ ಹಾಲಪ್ಪ ಆಚಾರ್ ಅವರು ಕ್ಲೋಸ್ ಇದ್ದೇವೆ. ರಾಜಕಾರಣಕ್ಕೆ ಬಂದಿದ್ದಾರೆ. ಅದಕ್ಕೆ ನನ್ನ ಬೈಯ್ತಾರೆ. ನನ್ನ ಬೈಯ್ಲಿಲ್ಲಂದ್ರೇ ಅವ್ರೀಗೆ ಅವ್ರ ಪಕ್ಷದಲ್ಲಿ ಟಿಕೆಟ್ ಕೊಡುವುದಿಲ್ಲ. ನಾನು ಯಾರನ್ನೂ ದ್ವೇಷ ಮಾಡುವುದಿಲ್ಲ. ಹಿಂದೆ ಈಶಣ್ಣ ಅವರ ಪತ್ನಿ ಗಂಗಮ್ಮ ಗುಳಗಣ್ಣವರ ಅವರು ಜಿಪಂ ಸದಸ್ಯರಿದ್ದಾಗ, ಅವರನ್ನು ಕರೆಯಿಸಿ ವೇದಿಕೆಯಲ್ಲಿ ಮುಖ್ಯ ಅತಿಥಿ ಎಂದು ಮಾಡಿದ್ದೇನೆ. ಅವರು ನಮ್ಮ ಸಹೋದರಿ ಸಮಾನ. ನವೀನ ಗುಳಗಣ್ಣವರ ಸಹ ಹಾಗೇ ಬೈಯ್ತಿರ್ತಾರೆ. ಅವ್ನು ನಮ್ಮ ಹುಡುಗ. ನಿಮ್ಮೆಲ್ಲರಿಗಿಂತ ಕ್ಲೋಸ್ ಇರೋದು ಹಾಲಪ್ಪ ಆಚಾರ್ ನನಗೆ. ಸುಮ್ನೆ ಬಾಯಿಂದ ಬಯ್ಯಬಹುದು, ಆದರೆ ಹೃದಯದಿಂದ ಅಲ್ಲ, ಹೃದಯಲ್ಲಿ ನನಗೂ ಪ್ರೀತಿ ಇದೆ. ಬೇಕಾದ್ರೇ ಈಗ ಹೋಗಿ ಟೀ ಸಹ ಕುಡಿದು ಬರ್ತೇನೆ. ನಡುವೆ ಈ ಪೇಪರ್ನವರು ಬರೆಯುತ್ತಿರುತ್ತಾರೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಅವರ ತವರೂರು ಮಸಬಹಂಚಿನಾಳ ಗ್ರಾಮದಲ್ಲಿ ಸಚಿವ ಬಸವರಾಜ ರಾಯರಡ್ಡಿ ಆಚಾರ್ ಅವರನ್ನು ಈ ರೀತಿ ನೆನೆದರು.ಪಾರದರ್ಶಕ ಚುನಾವಣೆ ಬಗ್ಗೆ ಸಭೆ: ರಾಜ್ಯದಲ್ಲಿ ಚುನಾವಣೆಗಳು ಹಣ ಕೊಡದೆ, ಜಾತಿ, ಧರ್ಮದ ಆಧಾರ ಮೇಲೆ ಆಗದೆ ಪ್ರಾಮಾಣಿಕ ವ್ಯಕ್ತಿ ಎಂಎಲ್‌ಎ, ಎಂಪಿ ಆಗಬೇಕು. ಪ್ರಾಮಾಣಿಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಮಾಡಿದ್ದೇವೆ ಎಂದು ಸಚಿವ ರಾಯರಡ್ಡಿ ಹೇಳಿದರು.ತಹಸೀಲ್ದಾರ್ ಬಸವರಾಜ ಬೆಣ್ಣೆ ಶಿರೂರು, ತಾಪಂ ಇಒ ಬೆಟದೇಶ ಮಾಳೆಕೊಪ್ಪ, ಪಿಡಬ್ಲ್ಯೂಡಿ ಎಇಇ ಮಲ್ಲಿಕಾರ್ಜುನ, ತಾಲೂಕು ಆಹಾರ ನಿರೀಕ್ಷಕ ಮಂಜುನಾಥ ಮೇಗಳಮನಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ, ರಾಬಕೊ ಒಕ್ಕೂಟದ ನಿರ್ದೇಶಕಿ ಕಮಲಮ್ಮ ಗಾವರಾಳ, ಪ್ರಮುಖರಾದ ಮಂಜುನಾಥ ಕಡೇಮನಿ, ಸುಧೀರ ಕೊರ್ಲಹಳ್ಳಿ, ಸಂಗಮೇಶ ಗುತ್ತಿ, ಶಿವನಗೌಡ ದಾನರೆಡ್ಡಿ, ಮಹೇಶ ಗಾವರಾಳ, ನಿಂಗಪ್ಪ ಗೋಡೆಕಾರ, ಜಂಬಣ್ಣ ಬೆಣಕಲ್ಲ, ಭೀಮರೆಡ್ಡಿ ಶ್ಯಾಡ್ಲಗೇರಿ, ಸಂತೋಷ ಮೆಣಸಿನಕಾಯಿ, ಮಂಜುನಾಥ ಕಡೆಮನಿ ಇತರರಿದ್ದರು.