ಗೋಲ್ಡ್‌ಫಿಂಚ್‌ ಸಿಟಿ: 28ರಂದು ‘ಮಂಗಳೂರು ಕಂಬಳ’

KannadaprabhaNewsNetwork | Published : Dec 27, 2024 12:47 AM

ಸಾರಾಂಶ

ದ.ಕ. ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಸಾರಥ್ಯದಲ್ಲಿ ನಡೆಯುವ 8ನೇ ವರ್ಷದ ‘ಮಂಗಳೂರು ಕಂಬ‍ಳ’ ನಗರದ ಹೊರವಲಯದ ಗೋಲ್ಡ್‌ಫಿಂಚ್‌ ಸಿಟಿಯಲ್ಲಿ 28ರಂದು ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ. ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಸಾರಥ್ಯದಲ್ಲಿ ನಡೆಯುವ 8ನೇ ವರ್ಷದ ‘ಮಂಗಳೂರು ಕಂಬ‍ಳ’ ನಗರದ ಹೊರವಲಯದ ಗೋಲ್ಡ್‌ಫಿಂಚ್‌ ಸಿಟಿಯಲ್ಲಿ 28ರಂದು ನಡೆಯಲಿದೆ.

ರಾಮ-ಲಕ್ಷ್ಮಣ ಜೋಡುಕರೆಯಲ್ಲಿ ನಡೆಯುವ ಹೊನಲು ಬೆಳಕಿನ ಮಂಗಳೂರು ಕಂಬಳವನ್ನು ಬೆಳಗ್ಗೆ 8.30ಕ್ಕೆ ಎಂಆರ್‌ಪಿಎಲ್‌ ನಿವೃತ್ತ ಆಡಳಿತ ನಿರ್ದೇಶಕ ಎಂ.ವೆಂಕಟೇಶ್‌ ಉದ್ಘಾಟಿಸಲಿದ್ದಾರೆ. ಕಂಕಕನಾಡಿ ಶ್ರೀಬ್ರಹ್ಮಬೈದರ್ಕಳ ಗರಡಿ ಅಧ್ಯಕ್ಷ ಕೆ.ಚಿತ್ತರಂಜನ್‌ ದೀಪ ಪ್ರಜ್ವಲನ ಮಾಡುವರು. ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾ.ಗಣೇಶ್‌ ಕಾರ್ಣಿಕ್‌ ಅಧ್ಯಕ್ಷತೆ ವಹಿಸುವರು. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ, ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ, ಗುರುಪುರ ವಜ್ರದೇಹಿ ಮಛದ ಶ್ರೀರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಗಣ್ಯರನೇಕರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಕಂಬಳ ಸಮಿತಿ ಅಧ್ಯಕ್ಷರೂ ಆಗಿರುವ ಕ್ಯಾ.ಬ್ರಿಜೇಶ್‌ ಚೌಟ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಜ 6 ಗಂಟೆಗೆ ಕಂಬ‍ಳ ಸಮಿತಿ ಗೌರವಾಧ್ಯಕ್ಷ ಎಂ.ಆರ್‌.ಜಿ. ಗ್ರೂಪ್‌ ಸಿಎಂಡಿ ಡಾ.ಕೆ.ಪ್ರಕಾಶ್‌ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಸ್ಪೀಕರ್‌ ಯು.ಟಿ.ಖಾದರ್‌, ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲ್‌, ಕಾರ್ಕಳ ಶಾಸಕ ಸುನಿಲ್‌ ಕುಮಾರ್‌, ಜಿಲ್ಲೆಯ ಶಾಸಕರು ಸೇರಿದಂತೆ ಚಲನಚಿತ್ರ ಕ್ಷೇತ್ರದ ಸಾಧಕರು, ಇತರೆ ಗಣ್ಯರು ಭಾಗವಹಿಸುವರು ಎಂದರು.

ಆರು ವಿಭಾಗಗಳಲ್ಲಿ ಸ್ಪರ್ಧೆ:

ಈ ಬಾರಿ ಕೂಡ ಆರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಕನೆ ಹಲಗೆ, ಅಡ್ಡ ಹಲಗೆ, ಹಗ್ಗ ಕಿರಿಯ, ಹಗ್ಗ ಹಿರಿಯ, ನೇಗಿಲು ಹಿರಿಯ ನೇಗಿಲು ಕಿರಿಯ ವಿಭಾಗಗಳಲ್ಲಿ ಸ್ಪರ್ಧೆ ನಡೆಯುವುದು. ವಿಜೇತರಿಗೆ ಚಿನ್ನದ ಪವನು ಬಹುಮಾನವಾಗಿ ನೀಡಲಾಗುವುದ ಎಂದರು.

ಮರುದಿನ ಸಮಾರೋಪ:

ಡಿ.29ರಂದು ಬೆಳಗ್ಗೆ ಕಂಬಳ ಸಮಾರೋಪ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಬಹುಮಾನ ವಿತರಣೆ ನಡೆಯಲಿದೆ. ಹಾಗಾಗಿ ಎರಡು ದಿನಗಳ ಕಾಲ ಕಂಬಳಾಭಿಮಾನಿಗಳು ಮಂಗಳೂರು ಕಂಬಳದಲ್ಲಿ ಭಾಗವಹಿಸಲು ಅವಕಾಶ ಇದೆ ಎಂದರು.

‘ಕಲರ್‌ ಕೂಟ’ ಸ್ಪರ್ಧೆ:

ಎಳೆಯ ಮನಸ್ಸುಗಳನ್ನು ಕಂಬಳ ಆಚರಣೆಯ ಭಾಗವಾಗಿಸುವ ಉದ್ದೇಶದಿಂದ ‘ಕಲರ್ ಕೂಟ’ ಎಂಬ ಸ್ಪರ್ಧಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಮೂರು ವಿಭಾಗಗಳಲ್ಲಿ ಆರು ವರ್ಷ ಮೇಲ್ಪಟ್ಟ ಮಕ್ಕಳಿಂದ ಎಲ್ಲರೂ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಭಾಗವಹಿಸಿದ ಎಲ್ಲರಿಗೂ ನೆನಪಿನ ಕಾಣಿಕೆ ಹಾಗೂ ಆಕರ್ಷಕ ಬಹುಮಾನ ನೀಡಲಾಗುವುದು ಎಂದರು.

ಫೋಟೋ, ರೀಲ್ಸ್‌ ಸ್ಪರ್ಧೆ:

ಕಂಬಳದ ರೀಲ್ಸ್‌ ಮತ್ತು ಫೋಟೋಗ್ರಫಿ ಸ್ಪರ್ಧೆ ಆಯೋಜಿಸಲಾಗಿದೆ. ಇದನ್ನು ಮಂಗಳೂರು ಕಂಬಳ ಸಮಿತಿಯ ಇ ಮೇಲ್‌ಗೆ ಕಳುಹಿಸಬೇಕು ಎಂದು ಸಮಿತಿ ಉಪಾಧ್ಯಕ್ಷ ಈಶ್ವರ ಶೆಟ್ಟಿ ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಸುಜಿತ್‌ ಪ್ರತಾಪ್‌ ಮಂಗಲ್ಪಾಡಿ, ಸಂಚಾಲಕ ಸಚಿನ್‌ ಶೆಟ್ಟಿ, ಪದಾಧಿಕಾರಿಗಳಾದ ಕಿರಣ್‌ ಕುಮಾರ್‌, ಅಶೋಕ್‌, ವಸಂತ ಜೆ.ಶೆಟ್ಟಿ, ಸಾಕ್ಷಾತ್‌ ಶೆಟ್ಟಿ, ನಂದನ್‌ ಮಲ್ಯ ಮತ್ತಿತರರಿದ್ದರು. .................

ಕರಾವಳಿ ಕ್ರೂಸ್‌ ಟೂರಿಸಂ ಪ್ರಯತ್ನ

ಕರಾವಳಿ ಜಿಲ್ಲೆಯಲ್ಲಿ ಕ್ರೂಸ್‌ ಟೂರಿಸಂಗೆ ಆದ್ಯತೆ ನೀಡಲಾಗುವುದು. ಮಂಗಳೂರು ಬಂದರನ್ನು ಕ್ರೂಸ್‌ ಟೂರಿಸಂ ಬಂದರು ಆಗಿ ಗುರುತಿಸುವಂತಾಗಬೇಕು. ಟೂರಿಸಂ ಡೆಸ್ಟಿನೇಷನ್‌ ಆಗಿ ಪರಿವರ್ತಿಸಲು ಪ್ರಯತ್ನಿಸಲಾಗುವುದು. ಕಂಬಳಕ್ಕೆ ಪೇಟಾ ತಕರಾರು ತೆಗೆದ ಕಾರಣ ಮಂಗಳೂರು ಕಂಬಳ ಆರಂಭವಾಯಿತು. ಕಾನೂನು ಚೌಕಟ್ಟಿನಲ್ಲಿ ಕಂಬಳ ಉಳಿವಿದೆ ಹಾಗೂ ಕಂಬಳಕ್ಕೆ ಜಾಗತಿಕ ಮನ್ನಣೆಗೆ ಪ್ರಯತ್ನಿಸಲಾಗುವುದು. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಕ್ಯಾ.ಬ್ರಿಜೇಶ್‌ ಚೌಟ ಹೇಳಿದರು.

Share this article