ಭೀಮಣ್ಣ ಗಜಾಪುರ
ಕೂಡ್ಲಿಗಿ: ತಾಲೂಕಿನ ಪಿಚ್ಚಾರಹಟ್ಟಿ ಗೊಲ್ಲರಹಟ್ಟಿ ಮಿನಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಎಸ್. ಶಾಂಭಕ್ಕ ಅಂಗನವಾಡಿ ಕಾರ್ಯಕರ್ತೆಯಾಗಿ ಮುಂಬಡ್ತಿ ಪಡೆದು ಆಯ್ಕೆಯಾದರೂ ಗ್ರಾಮದ ಜನತೆ "ನಮ್ಮೂರಿನವರೇ ಕಾರ್ಯಕರ್ತೆ ಆಗಬೇಕು ನೀನು ಕೆಲಸ ಮಾಡಬಾರದು " ಎಂದು ಅಂಗನವಾಡಿ ಕೇಂದ್ರಕ್ಕೆ ಬೀಗ ಜಡಿದು 6 ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.ಕಾರ್ಯಕರ್ತೆಯನ್ನು ಕೇಂದ್ರದ ಒಳಗೆ ಹೋಗಲು ಬಿಡದೇ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮಸ್ಥರ ನಿರ್ಧಾರವ ವಿರುದ್ಧ ಏಕಾಂಗಿ ಹೋರಾಟ ಮಾಡುತ್ತಿರುವ ಕಾರ್ಯಕರ್ತೆಗೆ ಈಗ ಕೆಲಸ ಮಾಡುವುದೇ ಸಾಹಸವಾಗಿದೆ.
ಕೆಂಚಮಲ್ಲನಹಳ್ಳಿ ಗ್ರಾಮದ ಎಸ್.ಶಾಂಭಕ್ಕ ಅದೇ ಊರಲ್ಲಿ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಸಹಾಯಕಿ ಹುದ್ದೆಯಿಂದ ಸೇವಾ ಆಧಾರದ ಮೇಲೆ ಮುಂಬಡ್ತಿಯಾಗಿ ಪಕ್ಕದ ಪಿಚ್ಚಾರಹಟ್ಟಿ ಗೊಲ್ಲರಹಟ್ಟಿ ಗ್ರಾಮದ ಮಿನಿ ಅಂಗನವಾಡಿ ಕೇಂದ್ರಕ್ಕೆ ಕಾರ್ಯಕರ್ತೆಯಾಗಿ ಕಳೆದ ಜೂನ್ 19ರಂದು ಮುಂಬಡ್ತಿ ಮಾಡಿ ನೇಮಕ ಮಾಡಲಾಗಿತ್ತು. ಇಲಾಖೆಯ ಆದೇಶದಂತೆ ಜೂನ್ 26ರಿಂದ ಕೆಲಸಕ್ಕೆ ಹಾಜರಾಗಿದ್ದಾರೆ. ಅಂದಿನಿಂದಲೇ ಕಾರ್ಯಕರ್ತೆ ಪ್ರತಿದಿನವೂ ಮಿನಿ ಅಂಗನವಾಡಿ ಕೇಂದ್ರಕ್ಕೆ ಹೋಗುತ್ತಿದ್ದಾರೆ.ಊರವರು ಮಕ್ಕಳನ್ನು ಕಳಿಸುತ್ತಿಲ್ಲ:
ಊರವರು ಮಾತ್ರ ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಕಳುಹಿಸದೇ ಅಂಗನವಾಡಿ ಕೇಂದ್ರದ ಬೀಗ ತೆರೆಯದಂತೆ ನಿರಂತರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದರಿಂದ ದಿಕ್ಕು ತೋಚದಾದ ಶಾಂಭಕ್ಕಗೆ ಇದುವರೆಗೂ ನ್ಯಾಯ ಸಿಕ್ಕಿಲ್ಲ. ಉನ್ನತ ಅಧಿಕಾರಿಗಳು ಊರವರ ಮನವೊಲಿಸಿ ಕಾರ್ಯಕರ್ತೆಗೆ ರಕ್ಷಣೆ ನೀಡಬೇಕಾದ ಅಗತ್ಯತೆ ಇದೆ.ನನಗೆ ರಕ್ಷಣೆ ನೀಡಿ:
ಊರಿನ ಕೆಲವರು ಅಂಗನವಾಡಿ ಕೇಂದ್ರದ ಮುಂದೆ ಬಂದು ನೀನು ಕೆಲಸ ಮಾಡುವ ಹಾಗಿಲ್ಲ. ನಮ್ಮೂರಿನವರೇ ಕಾರ್ಯಕರ್ತೆಯಾಗಿ ನೇಮಿಸಿಕೊಳ್ಳಬೇಕು. ನೀನು ಬೀಗ ತೆಗೆಯುವಂತಿಲ್ಲ. ನಿನಗೆ ಯಾರು ಆದೇಶ ಕೊಟ್ಟಿದ್ದಾರೋ ಅವರನ್ನು ಕರೆದುಕೊಂಡು ಬಾ ಎಂದು ಜಗಳ ಮಾಡಿದ್ರು. ಅದರಿಂದ ನಾನು ರೋಸಿ ಹೋಗಿದ್ದೇನೆ. ಈ ಬಗ್ಗೆ ಸೂಪರ್‌ವೈಸರ್ ಗಮನಕ್ಕೂ ತಂದಿದ್ದೇನೆ. ಮೂರು ತಿಂಗಳು ಕೇಂದ್ರದ ಮುಂದೆ ಕುಳಿತು ಹಾಜರಿ ಹಾಕಿ ಬಂದಿದ್ದೇನೆ. ನನಗೆ ಕೆಲಸ ಮಾಡಲು ಅವಕಾಶ ನೀಡಬೇಕು. ನನಗೆ ರಕ್ಷಣೆ ನೀಡಬೇಕು ಎನ್ನುತ್ತಾರೆ ಎಸ್. ಶಾಂಭಕ್ಕ.ಕರ್ತವ್ಯಕ್ಕೆ ತೆರಳಿದಾಗ ಊರಿನ ಕೆಲವರು ಕೇಂದ್ರಕ್ಕೆ ಬೀಗ ಹಾಕಿ ನಮ್ಮ ಕಾರ್ಯಕರ್ತೆ ಜತೆ ಗಲಾಟೆ ಮಾಡಿದ್ದಾರೆ. ನಮ್ಮೂರಿನವರನ್ನೇ ಕಾರ್ಯಕರ್ತೆ ಮಾಡಬೇಕೆಂದು ಗ್ರಾಮಸ್ಥರು ಹಟ ಹಿಡಿದಿದ್ದಾರೆ. ಇಲಾಖೆಯ ಉಪನಿರ್ದೇಶಕರ ಗಮನಕ್ಕೆ ತಂದು ಕಾನೂನು ಪ್ರಕಾರ ಕಾರ್ಯಕರ್ತೆಗೆ ಕೆಲಸ ಮಾಡಲು ಅವಕಾಶ ಹಾಗೂ ರಕ್ಷಣೆ ನೀಡಲಾಗುವುದು ಎನ್ನುತ್ತಾರೆ ಕೂಡ್ಲಿಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಾಲುಂಬಿ.