ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಗೊಲ್ಲ ಸಮುದಾಯದವರು ನೆಲ ಮೂಲ ಸಂಸ್ಕೃತಿ ವಾರಸುದಾರರಾಗಿದ್ದಾರೆ. ಕೃಷಿ ಹಾಗೂ ಪಶುಪಾಲನೆ ವೃತ್ತಿ ಮಾಡುತ್ತ ಶ್ರಮ ಜೀವಿಗಳಾಗಿದ್ದು ಕಂದಾಚಾರ, ಮೌಢ್ಯಾಚಾರಗಳ ಪ್ರೇರೇಪಿಸಿವುದು ಬೇಡವೆಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮನವಿ ಮಾಡಿದರು.ಅಖಿಲ ಭಾರತ ಯಾದವ ಮಹಾಸಂಸ್ಥಾನ ಸುಕ್ಷೇತ್ರ ಗೊಲ್ಲಗಿರಿಯಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಆಯೋಜಿಸಲಾದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಸಮುದಾಯ ಅಭಿವೃದ್ದಿಯಾಗಬೇಕಾದರೆ ಶಿಕ್ಷಣ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದರು..
ಸರ್ಕಾರ ವಿದ್ಯಾರ್ಥಿನಿಲಯ, ವಸತಿ ಶಾಲೆಗಳನ್ನು ತೆರೆದು ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡಿದೆ. ವಿದ್ಯಾವಂತರಾಗಲು ಯುವ ಸಮುದಾಯ ಪ್ರೇರೇಪಿಸಿಬೇಕು. ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದೆ. ಯಾವುದೇ ಕಾರಣಕ್ಕೂ ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ನೀಡಬಾರದು ಎಂದರು.ಉಳುವವನೇ ಭೂಮಿ ಒಡೆಯ ಎಂಬ ಮಾದರಿಯಲ್ಲಿ, ಸರ್ಕಾರ ವಾಸಿಸುವವನೇ ಮನೆ ಒಡೆಯ ಎಂಬ ಪರಿಕಲ್ಪನೆ ರೂಪಿಸಿ ಗೊಲ್ಲರಹಟ್ಟಿಗಳಿಗೆ ಕಂದಾಯ ಗ್ರಾಮಗಳ ಮಾನ್ಯತೆ ನೀಡಿ, ಅಲ್ಲಿ ವಾಸಿಸುವ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ನೀಡುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಜನವಸತಿ ಇರುವ 296 ಗ್ರಾಮಗಳಿಗೆ ಕಂದಾಯ ಗ್ರಾಮದ ಮಾನ್ಯತೆ ನೀಡಲಾಗಿದೆ. ಇವುಗಳಲ್ಲಿ ವಾಸವಿದ್ದ 6,384 ಕುಟುಂಬಗಳಿಗೆ ಹಕ್ಕುಪತ್ರ ಸಹ ನೀಡಲಾಗಿದೆ ಎಂದರು.
ಯಾದವ ಮಹಾಸಂಸ್ಥಾನ ಮಠದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಮಾತನಾಡಿ, ಕೃಷ್ಣ ಪರಮಾತ್ಮ ಎಲ್ಲರಿಗೂ ಗುರು. ಕೇವಲ ಯಾದವ ಜನಾಂಗಕ್ಕೆ ಸೀಮಿತವಲ್ಲ. ಇಂತಹ ಕೃಷ್ಣನಿಗೆ ಜಾತಿ ಬಂಧನದ ಸಂಕೋಲೆಯನ್ನು ತೊಡಿಸುವುದು ತರವಲ್ಲ. ನ್ಯಾಯಾಲಯಗಳಲ್ಲಿ ಇಂದಿಗೂ ಭಗವದ್ಗೀತೆ ಮೇಲೆ ಕೈ ಇರಿಸಿ ಪ್ರಮಾಣ ಮಾಡಿಸುತ್ತಾರೆ. ಕೃಷ್ಣ ಹಾಗೂ ಬಸವಣ್ಣನವರ ತತ್ವಗಳಲ್ಲಿ ಸಾಮ್ಯತೆ ಇದೆ. ಎರಡರಲ್ಲೂ ವಿಧವೆ ಎನ್ನುವ ಪರಿಕಲ್ಪನೆ ಇಲ್ಲ. ಮೂಹೂರ್ತ ನೋಡಿ ಮದುವೆ ಶುಭ ಕಾರ್ಯಗಳನ್ನು ಆಯೋಜಿಸುವುದಿಲ್ಲ ಎಂದರು.ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಹಿಂದಿನ ಅವಧಿಯಲ್ಲಿ ಶ್ರೀ ಕೃಷ್ಣ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲು ಆದೇಶ ಮಾಡಿದರು. ಕಾಡುಗೊಲ್ಲರ ಅಭಿವೃದ್ಧಿಗಾಗಿ ನಿಗಮ ರಚನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 40ಕ್ಕೂ ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗಿದೆ ಎಂದರು.
ಸಾಹಿತಿ ಎಚ್.ಆನಂದ್ ಕುಮಾರ್ ಉಪನ್ಯಾಸ ನೀಡಿ, ಶ್ರೀ ಕೃಷ್ಣ ವಿಚಾರಗಳು ಅನಂತವಾಗಿವೆ. ಭಕ್ತಿ ಅವಲೋಕನದ ಮೂಲಕ ಕೃಷ್ಣನನ್ನು ಅರಿಯಬಹುದಾಗಿದೆ. ಸೆರೆಮನೆಯ ಕತ್ತಲಲ್ಲಿ ಹುಟ್ಟಿದ ಕೃಷ್ಣ ಜಗತ್ತಿಗೆ ಬೆಳಕಾದರು. ಕೃಷ್ಣನದು ಬುಡಕಟ್ಟು ಸಂಸ್ಕೃತಿಯಾಗಿದ್ದು ಪ್ರಕೃತಿ ಹಾಗೂ ಪ್ರಾಣಿಗಳ ಜತೆ ಅನ್ಯೋನ್ಯ ಸಂಬಂಧವಿದೆ ಎಂದರು.ಕೆಡಿಪಿ ಸದಸ್ಯ ಕೆ.ಸಿನಾಗರಾಜ್, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ವಿಪ ಮಾಜಿ ಸದಸ್ಯೆ ಜಯಮ್ಮ ಬಾಲರಾಜ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್, ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಎಪಿಎಂಸಿ ಮಾಜಿ ಅಧ್ಯಕ್ಷ ತಿಪ್ಪೆಸ್ವಾಮಿ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ, ಮುಖಂಡರಾದ ಲಿಂಗಾರೆಡ್ಡಿ ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ್ ಸ್ವಾಗತಿಸಿದರು. ಆಯೋತೋಳ ಮಾರುತೇಶ್ ಮತ್ತು ತಂಡ ಗೀತಗಾಯನ ಪ್ರಸ್ತುತ ಪಡಿಸಿದರು. ಡಾ.ನವೀನ್ ಮಸ್ಕಲ್ ಕಾರ್ಯಕ್ರಮ ನಿರೂಪಿಸಿದರು.