ಗೋಮಾಳ ಜಮೀನು ಒತ್ತುವರಿ: ಸರ್ಕಾರದ ಕ್ರಮ ಸ್ವಾಗತಾರ್ಹ

KannadaprabhaNewsNetwork | Published : Feb 4, 2025 12:31 AM

ಸಾರಾಂಶ

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಅವರ ಸಂಬಂಧಿಕರು ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಕೇತಗಾನಹಳ್ಳಿಯ ಗೋಮಾಳ ಜಮೀನನ್ನು ಅತಿಕ್ರಮಣ ಮಾಡಿಕೊಂಡಿರುವುದು ಸರ್ಕಾರಿ ಅಧಿಕಾರಿಗಳು ನೀಡಿದ ದಾಖಲೆಯಲ್ಲಿ ಸ್ಪಷ್ಟವಾಗಿದೆ.

ಹುಬ್ಬಳ್ಳಿ:

ಕೇತಗಾನಹಳ್ಳಿಯ 52 ಎಕರೆ ಗೋಮಾಳ ಜಮೀನು ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮ ಹಾಗೂ ಅನುಷ್ಠಾನದ ವರದಿ ಸಲ್ಲಿಸುವಂತೆ ಹೈಕೋರ್ಟ್‌ ಉನ್ನತ ಮಟ್ಟದ ಅಧಿಕಾರಿಗಳಿಗೆ ನೀಡಿದ ನಿರ್ದೇಶನವನ್ನು ನ್ಯಾಷನಲ್ ಕಮಿಟಿ ಫಾರ್ ಪ್ರೊಟೆಕ್ಷನ್ ಆಫ್ ನ್ಯಾಚುರಲ್ ರಿಸೋರ್ಸಸ್ (ಎನ್‌ಸಿಪಿಎನ್ಆರ್) ಮತ್ತು ಜನಾಂದೋಲನಗಳ ಮಹಾಮೈತ್ರಿ (ಜೆಎಂಎಂ) ಸಂಘಟನೆ ಸ್ವಾಗತಿಸುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಹೇಳಿದರು.

ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಅವರ ಸಂಬಂಧಿಕರು ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಕೇತಗಾನಹಳ್ಳಿಯ ಗೋಮಾಳ ಜಮೀನನ್ನು ಅತಿಕ್ರಮಣ ಮಾಡಿಕೊಂಡಿರುವುದು ಸರ್ಕಾರಿ ಅಧಿಕಾರಿಗಳು ನೀಡಿದ ದಾಖಲೆಯಲ್ಲಿ ಸ್ಪಷ್ಟವಾಗಿದೆ. ಅದಾಗ್ಯೂ ರಾಜ್ಯ ಸರ್ಕಾರ ಹಾಗೂ ಸಂಬಂಧ ಪಟ್ಟ ಇಲಾಖೆಯ ಸಚಿವರು ಕ್ರಮ ವಹಿಸುತ್ತಿಲ್ಲ ಎಂದು ಆರೋಪಿಸಿದರು.

ದಾಖಲೆ ನೀಡುತ್ತೇವೆ:

ಗೋಮಾಳ ಜಮೀನು ಕಬಳಿಕೆಗೆ ಸಂಬಂಧಿಸಿದಂತೆ ಸರ್ಕಾರ ರಚಿಸಿದ ಎಸ್ಐಟಿ ತಂಡದ ತನಿಖೆಗೆ ಅಗತ್ಯವಾದ ಎಲ್ಲ ದಾಖಲೆ ನೀಡಲು ನಮ್ಮ ಸಂಘವು ಸಿದ್ಧವಿದೆ. ಸರ್ಕಾರ ಹಾಗೂ ಅಧಿಕಾರಿಗಳು ತನಿಖೆಯ ನೆಪದಲ್ಲಿ ದಿನಗಳನ್ನು ದೂಡುತ್ತಿರುವುದು ಸರಿಯಲ್ಲ ಎಂದರು.

2020ರ ಜ. 14ರಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕ ಅವರ ಸಹಯೋಗಿ ಪೀಠ ನೀಡಿದ ಆದೇಶವನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಮಾಜ ಪರಿವರ್ತನಾ ಸಮುದಾಯ ನ್ಯಾಯಾಲಯ ನಿಂದನಾ ಪ್ರಕರಣ (674/2020)ವನ್ನು ದಾಖಲಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಜ. 7ರಂದು (ಅನುಬಂಧ 1), ಜ. 29 (ಅನುಬಂಧ 2) ರಂದು ನ್ಯಾಯಾಲಯ ಹೊರಡಿಸಿದ ಆದೇಶವನ್ನು ನಾವು ಸ್ವಾಗತಿಸುವುದಾಗಿ ತಿಳಿಸಿದರು.

ಹೈಕೋರ್ಟ್‌ ಜ. 14ರಂದು ಹೊರಡಿಸಿದ ಆದೇಶದಲ್ಲಿ ಮುಂದಿನ 3 ತಿಂಗಳೊಳಗೆ ಹೈಕೋರ್ಟ್‌ ಸಹಯೋಗಿ ಪೀಠದ ಎದುರು ಹೆಚ್ಚುವರಿ ಅಡ್ವಕೇಟ್ ಜನರಲ್ ನೀಡಿರುವ ಸೂಚನೆಯಂತೆ ಕಾರ್ಯಪಾಲನ ವರದಿ ಸಲ್ಲಿಸುವಂತೆ ತಿಳಿಸಿದೆ. ಅಲ್ಲದೇ ಕೂಡಲೇ ಕೇತಗಾನಹಳ್ಳಿಯಲ್ಲಿ ನಡೆದ ಅತಿಕ್ರಮಣ ಮಾಡಿರುವ ಗೋಮಾಳ ಭೂಮಿಯನ್ನು ವಾಪಾಸ್ ಪಡೆಯಲು ಕಾನೂನಾತ್ಮಕ ಕ್ರಮಗಳನ್ನು ಆರಂಭಿಸಬೇಕು. ಅತಿಕ್ರಮಣ ಮಾಡಿರುವ ವ್ಯಕ್ತಿಗಳು ಹಾಗೂ ಶಾಮೀಲಾದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಣ ಬಕ್ಕಾಯಿ, ಎಸ್.ಎ. ಮುಲ್ಲಾ, ಎಂ.ಸಿ. ಹಾವೇರಿ ಸೇರಿದಂತೆ ಹಲವರಿದ್ದರು.

Share this article