ಉಡುಪಿ: ಉಡುಪಿಯ ಯಕ್ಷಗಾನ ಕಲಾರಂಗವು ಎಸ್. ಗೋಪಾಲಕೃಷ್ಣರ ನೆನಪಿನಲ್ಲಿ ನೀಡುತ್ತಾ ಬಂದಿರುವ ‘ಸೇವಾ ಭೂಷಣ ಪ್ರಶಸ್ತಿ’ಯನ್ನು ಈ ವರ್ಷದಿಂದ ಎಚ್.ಎನ್. ಶೃಂಗೇಶ್ವರರ ಹೆಸರನ್ನು ಸೇರಿಸಿ ಈರ್ವರ ನೆನಪಿನಲ್ಲಿ ನೀಡಲು ಕಾರ್ಯಕಾರಿ ಸಮಿತಿ ತೀರ್ಮಾನಿಸಿದೆ.
ಎಸ್. ಗೋಪಾಲ ಕೃಷ್ಣರು 27 ವರ್ಷ ಸಂಸ್ಥೆಯ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಕಳೆದ ವರ್ಷ ನಮ್ಮನ್ನಗಲಿದ ಎಚ್.ಎನ್. ಶೃಂಗೇಶ್ವರರು ಕಾರ್‍ಯಕರ್ತರಾಗಿ, ಜೊತೆ ಕಾರ್‍ಯದರ್ಶಿಯಾಗಿ 35 ವರ್ಷಗಳ ಕಾಲ ಸಂಸ್ಥೆಯ ಉತ್ಕೃಷ್ಟಕ್ಕೆ ಕಾರಣರಾಗಿದ್ದರು.ಈ ವರ್ಷದ ಸೇವಾ ಭೂಷಣ ಪ್ರಶಸ್ತಿಗೆ ನಿವೃತ್ತ ಬ್ಯಾಂಕ್ ಅಧಿಕಾರಿ, ಸಮಾಜ ಸೇವಕ, ಹಿರಿಯ ಲೇಖಕ ಯು. ಶ್ರೀಧರ್ ಆಯ್ಕೆಯಾಗಿದ್ದಾರೆ. ಇವರು ಶ್ರೀ ನಾರಾಯಣ ಗುರುಗಳ ತತ್ವೋಪದೇಶವನ್ನು ಸ್ವತಃ ಮೈಗೂಡಿಸಿಕೊಂಡು ಗುರುಗಳ ಕುರಿತು ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಅದನ್ನು ಉಚಿತವಾಗಿ ಹಂಚುತ್ತಾ ಅವರ ಜೀವನ ಮೌಲ್ಯಗಳನ್ನು ಪ್ರಸಾರ ಮಾಡುತ್ತಾ, ಅದರೊಂದಿಗೆ ನೊಂದವರಿಗೆ, ಸಂಸ್ಥೆಗಳಿಗೆ ನೆರವು ನೀಡುತ್ತಾ ಸಮಾಜದ ಒಳಿತಿಗಾಗಿ ಸ್ಪಂದಿಸುವಲ್ಲಿ ಕ್ರಿಯಾಶೀಲರಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಫೆ. 27ರಂದು ಸಂಸ್ಥೆಯ ಐವೈಸಿ ಸಭಾಂಗಣದಲ್ಲಿ ಜರುಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್‍ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.