ಮಂಗಳೂರು: ಸೆಂಟ್ರಲ್ ಅಡಕೆ ಮತ್ತು ಕೋಕೊ ಮಾರ್ಕೆಟಿಂಗ್‌ ಆಂಡ್‌ ಪ್ರೊಸೆಸಿಂಗ್ ಕೋಆಪರೇಟಿವ್ ಲಿಮಿಟೆಡ್ (ಕ್ಯಾಂಪ್ಕೊ), ವೈಟ್ ಫಾಲ್ಕನ್ ಪಬ್ಲಿಷಿಂಗ್ ಪ್ರಕಟಿಸಿದ ‘ಅರೆಕಾ ನಟ್- ಹಿಸ್ಟರಿ, ಕನ್ಸ್ಟಿಟ್ಯುಯೆಂಟ್ಸ್, ಕ್ಯಾನ್ಸರ್ ಆಂಡ್‌ ಬಿಯಾಂಡ್’ ಪುಸ್ತಕವನ್ನು ನಗರದ ಕ್ಯಾಂಪ್ಕೊ ಕೇಂದ್ರ ಕಚೇರಿಯಲ್ಲಿ ಎನ್‌ಐಟಿಕೆ ನಿರ್ದೇಶಕ ಪ್ರೊ.ಬಿ.ರವಿ ಬಿಡುಗಡೆ ಮಾಡಿದರು.ಕಾರ್ಯಕ್ರಮವು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಅಧ್ಯಕ್ಷತೆಯಲ್ಲಿ ನಡೆಯಿತು. ಎನ್‌ಐಟಿಕೆಯಲ್ಲಿ ಪ್ರೊಫೆಸರ್ ಮತ್ತು ಜೀವರಾಸಾಯನಿಕ ಎಂಜಿನಿಯರಿಂಗ್‌ನಲ್ಲಿ ಪರಿಣತಿ ಹೊಂದಿರುವ ಡಾ. ಪ್ರಸನ್ನ ಬೇಲೂರು ಅವರು ಬರೆದಿರುವ ಈ ಪುಸ್ತಕವು ಅಡಕೆಯ ಕುರಿತು ಸಮಗ್ರ ವೈಜ್ಞಾನಿಕ, ಐತಿಹಾಸಿಕ ಮತ್ತು ಸಾಮಾಜಿಕ- ಆರ್ಥಿಕ ದೃಷ್ಟಿಕೋನವನ್ನು ಪ್ರಸ್ತುತಪಡಿಸಿದೆ.

ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ, ನಿವೃತ್ತ ಸಹ ಪ್ರಾಧ್ಯಾಪಕ ವಿಘ್ನೇಶ್ವರ ವರ್ಮುಡಿ ಈ ಸಂದರ್ಭ ಹಾಜರಿದ್ದರು.

ಪುಸ್ತಕದ ಕಿರು ವಿಮರ್ಶೆ: ಈ ಪುಸ್ತಕವು ಪ್ರಸ್ತುತಪಡಿಸುವ ವೈಜ್ಞಾನಿಕ ಸತ್ಯಗಳ ಪ್ರಕಾರ, ಐಎಆರ್‌ಸಿ ವರದಿಗಳು ಪ್ರಮುಖವಾಗಿ ತೈವಾನ್ ಮತ್ತು ಚೀನಾ ದೇಶಗಳಲ್ಲಿ ನಡೆಸಲಾದ ಅಧ್ಯಯನಗಳನ್ನು ಅವಲಂಬಿಸಿವೆ. ಜಾಗತಿಕ ಉತ್ಪಾದನೆಯ ಶೇ. 86ರಷ್ಟಿರುವ ಭಾರತ ಮತ್ತು ಪಕ್ಕದ ರಾಷ್ಟ್ರಗಳಲ್ಲಿ ಅಡಕೆಯನ್ನು ಬೇಯಿಸಿ ಅಥವಾ ಒಣಗಿಸಿ ಸಂಸ್ಕರಿಸಿದ ನಂತರವೇ ಸೇವಿಸಲಾಗುತ್ತದೆ. ಅಧ್ಯಯನಗಳ ಪ್ರಕಾರ, ಸಂಸ್ಕರಿಸಿದ ಭಾರತೀಯ ಅಡಕೆಯಲ್ಲಿ ಹಾನಿಕಾರಕ ಅರೆಕೋಲಿನ್ ಪ್ರಮಾಣವು ಹಸಿ ಅಡಿಕೆಗಿಂತ 2ರಿಂದ 7 ಪಟ್ಟು ಕಡಿಮೆ ಇರುತ್ತದೆ.ವಾಸ್ತವವಾಗಿ, ಅಡಕೆಗೆ ಕೆಟ್ಟ ಹೆಸರು ಬರಲು ಮೂಲ ಕಾರಣ 17ನೇ ಶತಮಾನದಲ್ಲಿ ಭಾರತಕ್ಕೆ ಪ್ರವೇಶಿಸಿದ ತಂಬಾಕು ಮತ್ತು ಇತ್ತೀಚಿನ ದಶಕಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಗುಟ್ಕಾ, ತಂಬಾಕು ಮಿಶ್ರಿತ ಉತ್ಪನ್ನಗಳು. ಮಿತವೀರಿದ ಮತ್ತು ತಂಬಾಕು ಮಿಶ್ರಿತ ಸೇವನೆಯೇ ಹೊರತು ಶುದ್ಧ ಅಡಕೆ ಕ್ಯಾನ್ಸರ್ ಕಾರಕವಲ್ಲ ಎಂದು ಲೇಖಕರು ಪ್ರತಿಪಾದಿಸಿದ್ದಾರೆ.

ಅಡಕೆ ಕುರಿತು ತಿಳುವಳಿಕೆ ಮೂಡಿಸುವ ಯಾವುದೇ ರಚನಾತ್ಮಕ ಮತ್ತು ವೈಜ್ಞಾನಿಕ ಉಪಕ್ರಮಗಳನ್ನು ಕ್ಯಾಂಪ್ಕೊ ಬೆಂಬಲಿಸಲಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್‌.ಆರ್. ಸತೀಶ್ಚಂದ್ರ ತಿಳಿಸಿದರು.

ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ. ಸತ್ಯನಾರಾಯಣ ಸ್ವಾಗತಿಸಿದರು. ಡೆಪ್ಯುಟಿ ಜನರಲ್ ಮ್ಯಾನೆಜರ್ ಶ್ಯಾಮ ವಂದಿಸಿದರು.


------------

ಫೋಟೊ

18ಕ್ಯಾಂಪ್ಕೊ