ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ
ಶಿಥಿಲಾವಸ್ಥೆಯಲ್ಲಿದ್ದ ಹಳೆಯ ಕಟ್ಟಡದ ಒಂದು ಭಾಗದಲ್ಲಿ ದಮ್ ಬಿರಿಯಾನಿ ಹಾಗೂ ಮತ್ತೊಂದರಲ್ಲಿ ಸಮೀರ್ ಎಂಬವರ ಮಟನ್ ಅಂಗಡಿ ಇತ್ತು. ಕಟ್ಟಡ ದಿಢೀರ್ ಸಂಪೂರ್ಣವಾಗಿ ನೆಲಸಮಗೊಂಡಿದೆ.
ಕಟ್ಟಡ ಕುಸಿತ ಉಂಟಾದ ಶಬ್ಧಕ್ಕೆ ಬಿರಿಯಾನಿ ಹೊಟೇಲ್ ನಡೆಸುತ್ತಿದ್ದ ತಿರುಮುಗನ್ ಹಾಗೂ ಅವರ ಕುಟುಂಬದವರು, ಗ್ರಾಹಕರು ಕಟ್ಟಡದಿಂದ ಓಡಿ ಪಾರಾಗಿದ್ದಾರೆ. ಕೆಲವು ಗ್ರಾಹಕರು ಒಳಗೆ ಸಿಲುಕಿದ್ದರು. ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರುಅಗ್ನಿಶಾಮಕ ದಳದ ಸಿಬ್ಬಂದಿ, ಎನ್‌ಡಿಆರ್‌ಎಫ್ ಹಾಗೂ ಸಾರ್ವಜನಿಕರು ಸೇರಿ ಕಟ್ಟಡದ ಅವಶೇಷಗಳ ಅಡಿ ಸಿಲುಕಿಕೊಂಡವರನ್ನು ರಕ್ಷಣೆ ಮಾಡಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುರಾತನ ಕಟ್ಟಡ
ಈ ಘಟನೆ ಬಗ್ಗೆ ಮಾತನಾಡಿದ ಸ್ಥಳೀಯರೊಬ್ಬರು, ಈ ಕಟ್ಟಡ ಹಲವು ವರ್ಷಗಳಷ್ಟು ಹಳೆಯದು. ಅಲ್ಲದೇ ಪಟ್ಟಣದಲ್ಲಿ ಇನ್ನಷ್ಟು ಇಂತಹ ಹಳೆಯ ಕಟ್ಟಡಗಳಿವೆ. ಅವನ್ನು ತೆರವು ಮಾಡಬೇಕಿದೆ ಎಂದು ಹೇಳಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಸೇರಿದಂತೆ ಗೋಣಿಕೊಪ್ಪ ಠಾಣಾ ಪೊಲೀಸರು, ಎನ್‌ಡಿಆರ್‌ಎಫ್ ಸಿಬ್ಬಂದಿ, ಗೋಣಿಕೊಪ್ಪ ಗ್ರಾಪಂ ಪ್ರಮುಖರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ನೆಲಸಮಗೊಂಡಿರುವ ಕಟ್ಟಡವನ್ನು 1952ರಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದ್ದು, 72 ವರ್ಷಗಳಾಗಿವೆ.