ಒಳಿತು ಸಾಧನೆಯೇ ನಿಜವಾದ ಕಲ್ಯಾಣ: ಬಸವಪ್ರಭು ಶ್ರೀ

KannadaprabhaNewsNetwork | Published : Aug 5, 2024 12:31 AM

ಸಾರಾಂಶ

ಕಲ್ಯಾಣ ಎಂದರೆ ಒಳಿತು ಎಂದರ್ಥ. ಬದುಕಿನಲ್ಲಿ ಒಳಿತನ್ನು ಸಾಧನೆ ಮಾಡುವುದೇ ನಿಜವಾದ ಕಲ್ಯಾಣವಾಗಿದೆ. ಸರ್ವರಿಗೂ ಒಳಿತನ್ನು ಬಯಸಿ ಮತ್ತು ಒಳ್ಳೆಯದನ್ನು ಮಾಡಿದ ಬಸವಣ್ಣನವರು ಇಂದಿಗೂ ನಮ್ಮ ನಡುವೆ ಜೀವಂತವಾಗಿದ್ದಾರೆ ಎಂದು ಶ್ರೀ ಬಸವಪ್ರಭು ಸ್ವಾಮೀಜಿ ದಾವಣಗೆರೆಯಲ್ಲಿ ನುಡಿದಿದ್ದಾರೆ.

- "ಕಲ್ಯಾಣದಿಂದ ಉಳವಿಯೆಡೆಗೆ " ಪ್ರವಚನ ಉದ್ಘಾಟನಾ ಸಮಾರಂಭ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಕಲ್ಯಾಣ ಎಂದರೆ ಒಳಿತು ಎಂದರ್ಥ. ಬದುಕಿನಲ್ಲಿ ಒಳಿತನ್ನು ಸಾಧನೆ ಮಾಡುವುದೇ ನಿಜವಾದ ಕಲ್ಯಾಣವಾಗಿದೆ. ಸರ್ವರಿಗೂ ಒಳಿತನ್ನು ಬಯಸಿ ಮತ್ತು ಒಳ್ಳೆಯದನ್ನು ಮಾಡಿದ ಬಸವಣ್ಣನವರು ಇಂದಿಗೂ ನಮ್ಮ ನಡುವೆ ಜೀವಂತವಾಗಿದ್ದಾರೆ ಎಂದು ಶ್ರೀ ಬಸವಪ್ರಭು ಸ್ವಾಮೀಜಿ ನುಡಿದರು.

ನಗರದ ವಿರಕ್ತ ಮಠದಲ್ಲಿ ಬಸವ ಕೇಂದ್ರ, ಶಿವಯೋಗಾಶ್ರಮ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳ ಕಾಲ ನಡೆಯುವ 114 ನೇ ವರ್ಷದ ಪ್ರವಚನ "ಕಲ್ಯಾಣದಿಂದ ಉಳವಿಯೆಡೆಗೆ " ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಆಧುನಿಕ ಕಾಲದ ಜನರು ಯಾಂತ್ರಿಕವಾಗಿ ಜೀವಿಸುತ್ತಿದ್ದಾರೆ ಸದಾಕಾಲವೂ ಹಣ ಗಳಿಸುವುದರಲ್ಲಿಯೇ ಮುಳುಗಿದ್ದಾರೆ. ಹಣದ ಹಿಂದೆ ಹೋಗಿ ಒಳಿತನ್ನು ಮರೆತಿದ್ದಾರೆ. ಹಿಂದಿನ ಕಾಲದಲ್ಲಿ ಓದು ಬರಹ ಬರಲಾರದ ಜನರು ಒಳಿತನ್ನು ಮಾಡುವುದೇ ಬದುಕಿನ ನಿಜವಾದ ಸಾಧನೆ ಎಂದು ತಿಳಿದಿದ್ದರು. ಯಾವಾಗಲೂ ಹಣವೇ ಮುಖ್ಯ ಎಂದು ಬಡಿದಾಡಲಿಲ್ಲ. ಹಾಗಾಗಿಯೇ ಅವರ ಬದುಕಿನಲ್ಲಿ ಶಾಂತಿ ನೆಮ್ಮದಿ ಇತ್ತು ಎಂದರು.

ಇಂದು ಹಣ, ಆಸ್ತಿಯ ಬೆನ್ನುಹತ್ತಿ ಬದುಕಿನ ನೆಮ್ಮದಿ ಕಳೆದುಕೊಂಡಿದ್ದೇವೆ. ಈ ನೆಮ್ಮದಿ ಪಡೆಯುವ ಮಾರ್ಗವೆಂದರೆ ಶ್ರಾವಣ. ಶ್ರಾವಣ ಎಂದರೆ ಶ್ರವಣ ಎಂದರ್ಥ. ಒಳ್ಳೆಯ ವಿಚಾರಗಳನ್ನು, ಬಸವಾದಿ ಶರಣರ ಆದರ್ಶದ ಬದುಕನ್ನು ಕೇಳಿದಾಗ ಬದುಕಿನಲ್ಲಿ ನಾವು ಒಳಿತನ್ನು ಕಾಣಲು ಸಾಧ್ಯ ಎಂದರು.

ಅಂತರಂಗದಲ್ಲಿ ತೊಳಲಾಟ, ಬಹಿರಂಗದಲ್ಲಿಯೂ ಬಳಲಾಟ ಇಂದಿನ ಸ್ಥಿತಿಯಾಗಿದೆ. ತೊಳಲಾಟ ಬಳಲಾಟಗಳಿಂದ ಹೊರಬರಲು ಶರಣರ ಒಡನಾಟ ಬೇಕು. ಅದುವೇ ಸತ್ಸಂಗವಾಗಿದೆ. ಹಾಗಾಗಿ, ಕಲ್ಯಾಣದಿಂದ ಉಳವಿಯಡೆಗೆ ಪ್ರವಚನ ಕೇಳಿ ನಾವು ಪುನೀತರಾಗೋಣ ಎಂದರು.

ಜಿಲ್ಲಾ ವರದಿಗಾರರ ಕೂಟ ಅಧ್ಯಕ್ಷ, ಕನ್ನಡಪ್ರಭ ಜಿಲ್ಲಾ ಪ್ರಧಾನ ವರದಿಗಾರ ನಾಗರಾಜ ಎಸ್. ಬಡದಾಳ್ ಮಾತನಾಡಿ, ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ, ಸದ್ಗುಣಗಳನ್ನು ಬಿತ್ತುವ ಕೆಲಸ ಮನೆಯಲ್ಲಿ ತಾಯಿ ಸೇರಿದಂತೆ ಕುಟುಂಬದವರಿಂದ ಆಗಬೇಕಿದೆ. ಹಿಂದೆಲ್ಲಾ ಪ್ರವಚನ, ಧಾರ್ಮಿಕ ಕಾರ್ಯಕ್ರಮಕ್ಕೆ ಇಡೀ ಕುಟುಂಬ ಸದಸ್ಯರು ಬರುತ್ತಿದ್ಧರು. ಅಂತಹ ವಾತಾವರಣ ಮರುಕಳಿಸಬೇಕಿದೆ ಎಂದರು.

ಬಸವಲಿಂಗ ಮೂರ್ತಿ ಸ್ವಾಮೀಜಿ ಪ್ರವಚನ ನಡೆಸಿಕೊಟ್ಟರು. ಪಾಲಿಕೆ ಮಾಜಿ ಸದಸ್ಯ ಎಸ್. ಬಸಪ್ಪ, ಶ್ರೀಮಠದ ಅಂದನೂರು ಮುಪ್ಪಣ್ಣ, ಹಾಸಬಾವಿ ಕರಿಬಸಪ್ಪ, ಮಹಾದೇವಮ್ಮ, ಕುಂಟೋಜಿ ಚನ್ನಪ್ಪ, ಕಣಕುಪ್ಪಿ ಮುರುಗೇಶಪ್ಪ, ಅನಸೂಯಮ್ಮ ಪಟೇಲ್, ಬೆಳ್ಳೂಡಿ ಮಂಜುನಾಥ ಇದ್ದರು. ಬಸವ ಕಲಾಲೋಕದವರು ವಚನ ಗಾಯನ ನಡೆಸಿಕೊಟ್ಟರು.

- - -

-4ಕೆಡಿವಿಜಿ38ಃ:

ದಾವಣಗೆರೆಯ ವಿರಕ್ತ ಮಠದಲ್ಲಿ ಆರಂಭವಾದ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮವನ್ನು ಶ್ರೀ ಬಸವಪ್ರಭು ಸ್ವಾಮೀಜಿ, ಉದ್ಘಾಟಿಸಿದರು.

Share this article