ಕಾಲ ಕಾಲಕ್ಕೆ ತಪಾಸಣೆಗೆ ಒಳಗಾಗಿ ಆರೋಗ್ಯ ಕಾಪಾಡಿಕೊಳ್ಳಿ

KannadaprabhaNewsNetwork |  
Published : Aug 05, 2024, 12:31 AM IST
60 | Kannada Prabha

ಸಾರಾಂಶ

ನಮ್ಮ ಜೀವನ ಶೈಲಿ, ದಿನನಿತ್ಯದ ಚಟುವಟಿಕೆಗಳು, ಆಹಾರದಲ್ಲಿ ರೀತಿ ನೀತಿಗಳಿಂದಾಗಿ ಹಲವಾರು ಕಾಯಿಲೆಗಳು ಬರುತ್ತಿವೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯ. ಆರೋಗ್ಯವಂತರಾಗಿದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು, ಮನುಷ್ಯನಿಗೆ ಆರೋಗ್ಯ ಹಾಗೂ ಅನಾರೋಗ್ಯ ಜೊತೆಯಲ್ಲಿಯೇ ಬರುತ್ತದೆ. ಆದ್ದರಿಂದ ಎಲ್ಲರೂ ಆಯಾ ಕಾಲಕ್ಕೆ ತಪಾಸಣೆಗೆ ಒಳಗಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್. ವಿದ್ಯಾ ಸಾಗರ್ ಹೇಳಿದರು.

ತಾಲೂಕಿನ ಹೆಗ್ಗಡಹಳ್ಳಿ ಗ್ರಾಾಮದಲ್ಲಿ ಸುಯೋಗ್ ಆಸ್ಪತ್ರೆ ಸಹಯೋಗದಲ್ಲಿ ಸಾಮೂಹಿಕ ನಾಯಕತ್ವದ ಕರ್ನಾಟಕ ರೈತ ಸಂಘ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು.

ನಮ್ಮ ಜೀವನ ಶೈಲಿ, ದಿನನಿತ್ಯದ ಚಟುವಟಿಕೆಗಳು, ಆಹಾರದಲ್ಲಿ ರೀತಿ ನೀತಿಗಳಿಂದಾಗಿ ಹಲವಾರು ಕಾಯಿಲೆಗಳು ಬರುತ್ತಿವೆ. ಜೀವನದಲ್ಲಿ ಶಿಸ್ತುನ್ನು ಅಳವಡಿಸಿಕೊಂಡು ಆಹಾರ ಕ್ರಮದಲ್ಲಿ ನಿಯಮಿತವಾಗಿದ್ದರೆ ರೋಗ ಬರುವುದನ್ನು ತಡೆಗಟ್ಟಬಹುದು. ಅಲ್ಲದೆ ನಮಗೆ ಕಾಯಿಲೆ ಇಲ್ಲದಿದ್ದರೂ ಕೂಡ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆಗೆ ಒಳಗಾಗಬೇಕು. ಆಗ ಕಾಯಿಲೆ ಇಲ್ಲ ಎಂಬ ಬಗ್ಗೆ ಆತ್ಮವಿಶ್ವಾಸ ಮೂಡುವ ಜೊತೆಗೆ ಕಾಯಿಲೆ ಇದ್ದಲ್ಲಿ ಪ್ರಾರಂಭದಲ್ಲೇ ಪತ್ತೆ ಹಚ್ಚಿ ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಸುಯೋಗ್ ಆಸ್ಪತ್ರೆಯ ವೈದ್ಯರು ಗ್ರಾಮೀಣ ಭಾಗದ ಬಡವರಿಗೆ ಅದರಲ್ಲೂ ಮುಖ್ಯವಾಗಿ ರೈತರಿಗೆ ನೆರವಾಗಲಿ ಎಂಬ ಉದ್ದೇಶದಿಂದ ಆರೋಗ್ಯ ತಪಾಸಣೆ ಶಿಬಿರ ನಡೆಸುತ್ತಿದ್ದು ಎಲ್ಲರೂ ಇದರ ಸದುಪಯೋಗ ಪಡೆದುಕೊಂಡು ತಪಾಸಣೆಗೆ ಒಳಗಾಗಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಸುಯೋಗ್ ಆಸ್ಪತ್ರೆ ಸಂಸ್ಥಾಪಕ ಡಾ.ಎಸ್‌.ಪಿ. ಯೋಗಣ್ಣ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಸೇವೆ ಎಂಬುದು ವಾಣಿಜ್ಯ ಮಯವಾಗಿದೆ. ಆಸ್ಪತ್ರೆಗಳು ಸುಲಿಗೆಯ ತಾಣಗಳಾಗಿವೆ. ಆದ್ದರಿಂದ ಸುಯೋಗ್ ಆಸ್ಪತ್ರೆ ಹಳ್ಳಿಗಾಡಿನ ಜನರಿಗೆ ಆರೋಗ್ಯ ಸೇವೆ ಒದಗಿಸಬೇಕು ಎಂಬ ಸಾಮಾಜಿಕ ಕಳಕಳಿಯೊಂದಿಗೆ ಸುಯೋಗ ಆಸ್ಪತ್ರೆ ಹಳ್ಳಿಯ ಕಡೆಗೆ ಎಂಬ ಕಾರ್ಯಕ್ರಮ ರೂಪಿಸಿಕೊಂಡು ರೈತ ಸಂಘದ ಜೊತೆಗೆ ಗ್ರಾಮೀಣ ಜನರಿಗೆ ಆರೋಗ್ಯ ಸೇವೆ ಒದಗಿಸಲು ಮುಂದಾಗಿದೆ. ಪ್ರತಿ ತಿಂಗಳು ಗ್ರಾಪಂ ಕೇಂದ್ರಗಳಲ್ಲಿ ರೈತ ಸಂಘದ ನೆರವಿನೊಂದಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸುವ ಜೊತೆಗೆ ಬಡವರಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ಕೊಡಲು ನಿರ್ಧರಿಸಿದೆ. ನಮ್ಮ ಆಸ್ಪತ್ರೆ ಶೋಷಣೆ ಮಾಡದೆ ಅತ್ಯಂತ ಕಡಿಮೆ ದರದಲ್ಲಿ ವೈದ್ಯಕೀಯ ಸೇವೆ ಒದಗಿಸಲಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಕೂಡ ಸಕ್ಕರೆ ಖಾಯಿಲೆ, ಅಧಿಕ ರಕ್ತದ ಒತ್ತಡಗಳು ಮನುಷ್ಯನ ಮೌನ ಕಾಯಿಲೆಯಾಗಿವೆ. ಇದರಿಂದ ಹೃದಯಾಘಾತ, ಲಕ್ವದಂತಹ ಮಾರಣಾಂತಿಕ ಕಾಯಿಲೆಗೂ ಈ ಕಾಯಿಲೆ ಕಾರಣವಾಗುತ್ತಿದೆ. ಆದ್ದರಿಂದ ಆಸ್ಪತ್ರೆಯು ಸಕ್ಕರೆ ಕಾಯಿಲೆ ರೋಗಿಗಳ ಸಂಘವನ್ನೂ ಸ್ಥಾಪಿಸಿದೆ. ಬಡವರು ಆಸ್ಪತ್ರೆ ಕಡೆಗೆ ಸುಳಿಯದಂತೆ ಮಾಡುವ ಸಲುವಾಗಿ ಆಸ್ಪತ್ರೆ ವಾಟ್ಸಾಪ್ ಗ್ರೂಪ್‌ ರಚಿಸಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಸಕ್ಕರೆ ಕಾಯಿಲೆ ಇದ್ದರೆ ಅವರಿಗೆ ಆಹಾರ ಕ್ರಮಗಳ ಬಗ್ಗೆ ತಿಳುವಳಿಕೆ ಮೂಡಿಸಲಾಗುತ್ತಿದೆ ಎಂದರು.

ಈ ವೇಳೆ ಗ್ರಾಪಂ ಅಧ್ಯಕ್ಷ ಕಾಂತರಾಜು, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ಮಾವು ರಘು, ತಾಲೂಕು ಅಧ್ಯಕ್ಷ ಸತೀಶ್‌ ರಾವ್, ಶಿವಣ್ಣ, ವೆಂಕಟೇಗೌಡ, ಹೆಗ್ಗಡಹಳ್ಳಿ ಮಹದೇವಸ್ವಾಮಿ, ಶಿವಕುಮಾರ್, ಪ್ರಕಾಶ್, ಶೈಲಜಾ, ಶ್ವೇತಾ, ಸುಯೋಗ್ ಆಸ್ಪತ್ರೆಯ ಡಾ. ಪ್ರಭುದೇವ್, ಡಾ. ಲಿಖಿತಾ, ಡಾ. ಅಲೋಕ್‌ ಕುಮಾರ್, ಗ್ರಾಪಂ ಸದಸ್ಯರಾದ ಮನೋಜ್ ಮೊದಲಾದವರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ