ಹುಬ್ಬಳ್ಳಿ: ನವನಗರದಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಆಡಳಿತ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾಗಿರುವ ಹು-ಧಾ ಮಹಾನಗರ ಪಾಲಿಕೆ ಒಡೆತನದ 39 ಗುಂಟೆ ನಿವೇಶನ ನೀಡುವಂತೆ ಪಾಲಿಕೆ ಮೇಯರ್ ಅವರಲ್ಲಿ ಕೋರಿದ್ದೇನೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಇಲ್ಲಿಯ ಕಾನೂನು ವಿಶ್ವವಿದ್ಯಾಲಯವನ್ನು ಶ್ರೇಷ್ಠ ವಿವಿಯನ್ನಾಗಿ ರೂಪಿಸಬೇಕಿದೆ. ಅದಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನು ಕಲ್ಪಿಸಬೇಕಿದೆ. ಕೆಲವು ಭೌತಿಕ ಸೌಲಭ್ಯಗಳನ್ನು ಸೃಷ್ಟಿಸಬೇಕಿದೆ. ಜತೆಗೆ ಶೈಕ್ಷಣಿಕವಾಗಿ ಉತ್ಕೃಷ್ಟತೆಯನ್ನು ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ ಆಡಳಿತ ಕಟ್ಟಡ, ಗ್ರಂಥಾಲಯ ಕಟ್ಟಡ, ಕೆಫ್ಟೇರಿಯಾ, ವಿದ್ಯಾರ್ಥಿ ವಸತಿ ನಿಲಯ, ಇತ್ಯಾದಿ ಕಟ್ಟಡಗಳ ನಿರ್ಮಾಣಕ್ಕೆ ಜಾಗದ ಅವಶ್ಯಕತೆ ಇದೆ ಎಂದರು.
ಹುಬ್ಬಳ್ಳಿಯಲ್ಲಿರುವ ಹಳೇ ಕೋರ್ಟ್ ಕಟ್ಟಡವನ್ನು ಪಾಲಿಕೆಗೆ ನೀಡಬೇಕೆಂಬ ಪ್ರಸ್ತಾವನೆಯನ್ನು ಮೇಯರ್ ಈ ವೇಳೆ ಗಮನಕ್ಕೆ ತಂದಿದ್ದಾರೆ. ಈ ಕುರಿತು ಸ್ಥಳೀಯ ಶಾಸಕ ಪ್ರಸಾದ ಅಬ್ಬಯ್ಯ, ಪಾಲಿಕೆಯ ಸಭಾನಾಯಕ, ವಿಪಕ್ಷ ನಾಯಕರೊಂದಿಗೆ ಬೆಂಗಳೂರಿಗೆ ಬನ್ನಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿಸುತ್ತೇನೆ. ಕುಳಿತು ಮಾತುಕತೆ ನಡೆಸೋಣ ಎಂದು ಹೇಳಿದ್ದೇನೆ ಎಂದರು. ಇದೇ ವೇಳೆ ಸಚಿವ ಎಚ್.ಕೆ. ಪಾಟೀಲ, ಕಾನೂನು ವಿವಿಯ ಅಧಿಕಾರಿಗಳಾದ ಅನುರಾಧಾ ವಸ್ತ್ರದ, ರತ್ನಾ ಭರಮಗೌಡರ್ ಹಾಗೂ ಸಿಂಡಿಕೇಟ್ ಸದಸ್ಯರಾದ ವಸಂತ ಲದ್ವಾ, ಪಿ.ಎನ್. ಪರಾಂಡೆ, ಎಚ್.ಯು. ಬೆಳಗಲಿ ಅವರೊಂದಿಗೆ ಸಭೆ ನಡೆಸಿದರು.ವಿನ್ಯಾಸಕ್ಕೆ ಅಡ್ಡಿ: ಬಡಿಗೇರ
ಪಾಲಿಕೆಯ ಸಾಮಾನ್ಯ ಸಭೆಯ ನಿರ್ಣಯದಂತೆ ಹುಬ್ಬಳ್ಳಿಯಲ್ಲಿರುವ ಹಳೇ ಕೋರ್ಟ್ ಕಟ್ಟಡ ಜಾಗದ ಬಗ್ಗೆ ಸಚಿವರ ಮುಂದೆ ಪ್ರಸ್ತಾವನೆ ಇಡಲಾಗಿದೆ. ಇದರಿಂದ ಈಗಷ್ಟೇ ನಿರ್ಮಾಣ ಹಂತದಲ್ಲಿರುವ ಪಾಲಿಕೆಯ ಸಭಾಭವನ ಕಟ್ಟಡಕ್ಕೆ ಅನುಕೂಲವಾಗಲಿದೆ ಎಂದು ಸಚಿವರ ಗಮನಕ್ಕೆ ತಂದಿರುವುದಾಗಿ ತಿಳಿಸಿದರು.