ಕಾಟರಗಿಯ ಸೋಮನಾಳ ಕ್ಯಾಂಪ್‌ನಲ್ಲಿ ಸಂಕ್ರಮಣ ದಿನ ಬೀದಿ ನಾಯಿಗಳಿಗೆ ಸುಗ್ರಾಸ ಭೋಜನ

KannadaprabhaNewsNetwork |  
Published : Jan 15, 2024, 01:47 AM IST
ಕಾರಟಗಿ ತಾಲೂಕಿನ ಸೋಮನಾಳ ಕ್ಯಾಂಪಿನಲ್ಲಿ ಸಂಕ್ರಮಣ ದಿನ ಬೀದಿ ನಾಯಿಗಳಿಗೆ ತುಪ್ಪದ ಅನ್ನ ಬಡಿಸುತ್ತಿರುವ ನಿವಾಸಿಗಳು. | Kannada Prabha

ಸಾರಾಂಶ

ಮನೆಯಲ್ಲಿಯೇ ವಿಶೇಷವಾಗಿ ಮಡಿಕೆಯಲ್ಲಿ ಸಂಕ್ರಮಣ ಭೋಜನ ಸಿದ್ಧವಾಗುತ್ತದೆ. ತುಪ್ಪ, ಹೆಸರು ಬೇಳೆ, ಅಕ್ಕಿ, ವಿವಿಧ ನಮೂನೆ ತರಕಾರಿಗಳನ್ನು ಹಾಕಿ ಅಡುಗೆ ಮಾಡಲಾಗುತ್ತದೆ. ಇಡೀ ಕುಟುಂಬ ಸೇರಿ ಸೂರ್ಯೋದಯದ ಮುನ್ನ ಅಡುಗೆ ತಯಾರಿಸುತ್ತಾರೆ.

ಕಾರಟಗಿ: ಸಂಕ್ರಮಣ ಹಬ್ಬದ ಮುನ್ನಾ ದಿನ ತಾಲೂಕಿನ ಸೋಮನಾಳ ಕ್ಯಾಂಪ್‌ ಹಾಗೂ ಸುತ್ತಮುತ್ತಲ ಗ್ರಾಮಗಳ ಬೀದಿ ನಾಯಿಗಳಿಗೆ ಸುಗ್ಗಿಯ ದಿನ. ಯಾಕೆಂದರೆ ಈ ಕ್ಯಾಂಪ್‌ನಲ್ಲಿ ಬೀದಿನಾಯಿಗಳಿಗೆ ಈ ದಿನ ತುಪ್ಪದ ಊಟ ನೀಡಲಾಗುತ್ತದೆ.

ತುಂಗಭದ್ರಾ ನೀರಾವರಿ ಪ್ರದೇಶದಲ್ಲಿ ಬೇರುಬಿಟ್ಟ ವಲಸಿಗ ಆಂಧ್ರದ ಜನರಿಗೆ ಸಂಕ್ರಾಂತಿ ಮಹತ್ವದ ಹಬ್ಬ. ಈ ದಿನ ಮನೆಮಂದಿಗಷ್ಟೇ ಹಬ್ಬದೂಟ ಸೀಮಿತವಲ್ಲ, ಬೀದಿನಾಯಿಗಳಿಗೂ ಉಣಬಡಿಸಿ ತೃಪ್ತರಾಗುವ ವಿಶಿಷ್ಟ ಪದ್ಧತಿ ಇಲ್ಲಿದೆ.ತುಂಗಭದ್ರಾ ಎಡದಂಡೆ ಮುಖ್ಯನಾಲೆ ಪಕ್ಕದಲ್ಲಿ ಇರುವ ತಾಲೂಕಿನ ಸೋಮಾನಾಳ ಕ್ಯಾಂಪ್ ೫೫ ಮನೆಗಳು ಇರುವ ಚಿಕ್ಕ ಮತ್ತು ಚೊಕ್ಕ ಕ್ಯಾಂಪ್. ಇಲ್ಲಿ ಈ ಪದ್ಧತಿ ಇದೆ. ಸಂಕ್ರಾಂತಿಯ ಮುನ್ನಾ ದಿನ ‘ಭೋಗಿಯ ದಿನ. ಅಂದು ಮನೆಯ ಮುಂದಿನ ಅಂಗಳದಲ್ಲಿ ದೊಡ್ಡಕಟ್ಟಿಗೆ ಮತ್ತು ವಾರದಿಂದ ತಯಾರಿಸಿದ್ದ ಹಸುವಿನ ಸಗಣಿಯ ಕುಳ್ಳುಗಳನ್ನು ಸೇರಿಸಿ ಬೆಂಕಿ ಹಾಕಿದರು. ಈ ಪರಿಸರದಲ್ಲಿನ ಮಕ್ಕಳೆಲ್ಲ ಸಗಣಿ ಮಣಿಗಳ ಹಾರ ಹಾಕಿಕೊಂಡು ಬಂದು ಮೊದಲು ಈ ಬೆಂಕಿ ಕುಂಡಕ್ಕೆ ನಮಸ್ಕರಿಸಿದರು. ನಂತರ ತಮ್ಮ ಕೊರಳಲ್ಲಿನ ಸಗಣಿ ಮುತ್ತಿನ ಹಾರವನ್ನು ಬೆಂಕಿಗೆ ಅರ್ಪಿಸಿದರು. ಜನರನ್ನು ಪೀಡಿಸುತ್ತಿದ್ದ ರಾಕ್ಷಸನನ್ನು ಬೆಂಕಿಗೆ ಅರ್ಪಿಸಿದಂತೆ. ರೋಗಗಳು ಬರುವುದಿಲ್ಲ ಎನ್ನುವ ನಂಬಿಕೆ ಈ ಜನರದ್ದು.

ಸಂಕ್ರಮಣ ಭೋಜನ: ಮನೆಯಲ್ಲಿಯೇ ವಿಶೇಷವಾಗಿ ಮಡಿಕೆಯಲ್ಲಿ ಸಂಕ್ರಮಣ ಭೋಜನ ಸಿದ್ಧವಾಗುತ್ತದೆ. ತುಪ್ಪ, ಹೆಸರು ಬೇಳೆ, ಅಕ್ಕಿ, ವಿವಿಧ ನಮೂನೆ ತರಕಾರಿಗಳನ್ನು ಹಾಕಿ ಅಡುಗೆ ಮಾಡಲಾಗುತ್ತದೆ. ಇಡೀ ಕುಟುಂಬ ಸೇರಿ ಸೂರ್ಯೋದಯದ ಮುನ್ನ ಅಡುಗೆ ತಯಾರಿಸುತ್ತಾರೆ. ಬೆಳಕು ಹರಿಯುತ್ತಿದ್ದಂತೆ ಪ್ರತಿ ಬೀದಿ, ಓಣಿಯಲ್ಲಿ ನಡೆದು ಎದುರಾಗುವ ನಾಯಿಗಳಿಗೆ ಬಾಳೆ ಎಲೆ ಹಾಕಿ ಊಟ ಬಡಿಸಲಾಗುತ್ತದೆ. ಸೋಮನಾಳ ಕ್ಯಾಂಪ್ ಸುತ್ತಿದ ನಂತರ ಪಕ್ಕದ ಊರುಗಳಿಗೆ ತೆರಳಿ ಭಾನುವಾರ ಅನ್ನದಾನ ಮಾಡಿದರು.

ಈ ಅಡುಗೆ ನಾಯಿಗಳಿಗೆ ಮಾತ್ರ ಮೀಸಲು. ಭಿಕ್ಷುಕರಿಗೆ, ಅಲೆಮಾರಿಗಳಿಗೆ ಹಾಕುವುದಿಲ್ಲ. ಕೊನೆ ತುತ್ತು ಸಹ ನಾಯಿಗೆ ಸಲ್ಲಬೇಕು ಎಂದು ಗೋವಿಂದರಾಜು ಹೇಳಿದರು.

ಜಾರಿಗೆ ಬಂದ ಕಥೆ: ಆಂಧ್ರ ಪ್ರದೇಶದ ಗೋದಾವರಿ ನದಿ ತೀರದ ಹಳ್ಳಿಗಳಲ್ಲಿ ಈ ಪದ್ಧತಿ ಆಚರಣೆಯಲ್ಲಿದೆ. ಹಿಂದೆ ದ್ವೇಷವಿದ್ದರೆ ಆಹಾರದಲ್ಲಿ ವಿಷ ಹಾಕುವ ಪದ್ಧತಿ ಇತ್ತು. ಸಂಕ್ರಾಂತಿಯಂದು ಅನ್ನ ಮಾಡಿ ನಾಯಿಗೆ ತಿನ್ನಿಸಿ ನೋಡುತ್ತಿದ್ದರಂತೆ. ಅಂದಿನಿಂದ ಈ ಪದ್ಧತಿ ಆರಂಭವಾಗಿದೆ ಎಂದು ಗೋವಿಂದರಾಜು ವಿವರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!