ಹಳಿಯಾಳ: ಯೇಸು ಕ್ರಿಸ್ತರು ಮಾನವ ಕುಲದ ಉದ್ಧಾರಕ್ಕಾಗಿ ತನ್ನ ಪ್ರಾಣವನ್ನೇ ಬಲಿದಾನವಾಗಿ ಅರ್ಪಿಸಿದ ಪವಿತ್ರ ದಿನ ಗುಡ್ ಫ್ರೈಡೇಯನ್ನು ತಾಲೂಕಿನ ಮುಖ್ಯ ಚರ್ಚ್ ಎಂದೆನ್ನಿಸಿಕೊಳ್ಳುವ ಪಟ್ಟಣದ ಮಿಲಾಗ್ರಿಸ್ ಚರ್ಚ್‌ನಲ್ಲಿ ಅತ್ಯಂತ ಶ್ರದ್ಧೆ ಭಕ್ತಿಯಿಂದ ಆಚರಿಸಲಾಯಿತು.
ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಕ್ರೈಸ್ತರು ಗುಡ್ ಫ್ರೈಡೇ ಪೂಜಾವಿಧಿಯಲ್ಲಿ ಭಕ್ತಿಯಿಂದ ಪಾಲ್ಗೊಂಡು, ಉಪವಾಸ ವೃತಾಚರಣೆಯೊಂದಿಗೆ ದಿನವಿಡೀ ನಿರಂತರ ಪ್ರಾರ್ಥನೆಯಲ್ಲಿ ತಲ್ಲೀನರಾದರು.ಕ್ರಿಸ್ತರ ಕಷ್ಟ ಸಂಕಷ್ಟಗಳ ಸ್ಮರಣೆ:
ಬೆಳಿಗ್ಗೆ ಚರ್ಚ್‌ನಲ್ಲಿ ಗುರು ಫ್ರಾನ್ಸಿಸ್ ಮಿರಾಂಡಾ ಸಾನ್ನಿಧ್ಯದಲ್ಲಿ ಧಾರ್ಮಿಕ ಪೂಜಾವಿಧಿಗಳು ನಡೆದವು. ಯೇಸು ಕ್ರಿಸ್ತರು ತಮ್ಮ ಅಂತ್ಯಾವಧಿಯಲ್ಲಿ ಎದುರಿಸಿದ ಕಷ್ಟ ಸಂಕಷ್ಟ ಶೋಷಣೆಗಳನ್ನು ಸ್ಮರಿಸುವ ಶಿಲುಬೆಯ ಮಾರ್ಗ ಅಧ್ಯಾತ್ಮ ಪೂಜಾ ವಿಧಿ ನಡೆಸಿದರು. ಜಾಗತಿಕವಾಗಿ ಶಾಂತಿ ನೆಲೆಸಲು ಮತೀಯ ಸಾಮರಸ್ಯತೆಗಾಗಿ ವಿಶೇಷವಾಗಿ ಪ್ರಾರ್ಥಿಸಲಾಯಿತು. ಸಹಾಯಕ ಗುರು ಅರುಣ ಹಾಗೂ ಧರ್ಮ ಭಗಿಣಿಯರು ಇದ್ದರು.ಮಧ್ಯಾಹ್ನ ಚರ್ಚ್‌ನಲ್ಲಿ ಗುಡ್ ಫ್ರೈಡೇಯ ಧಾರ್ಮಿಕ ಪೂಜಾ ವಿಧಿಗಳು ಜರುಗಿದವು. ಯೇಸು ಕ್ರಿಸ್ತರು ಅನುಭವಿಸಿದ ಕಷ್ಟ ಮರಣಗಳ ಚರಿತ್ರೆ, ಪವಿತ್ರ ಬೈಬಲ್ ವಾಚನ, ಪ್ರವಚನಗಳು ನಡೆದವು.
ಎಲ್ಲೆಡೆ ಗುಡ್ ಪ್ರೈಡೇ:ತಾಲೂಕಿನ ಗ್ರಾಮಾಂತರ ಭಾಗಗಳಾದ ಮಂಗಳವಾಡದ ಸಂತ ಸೆಬೆಸ್ಟಿಯನ್ ಚರ್ಚ್‌ನಲ್ಲಿ ಗುರು ನಾತ್ವಿದಾದ, ಯಡೋಗಾದ ಸಂತ ಅನ್ನಾ ಚರ್ಚ್‌ನಲ್ಲಿ ಗುರು ಉರ್ಬಾನ್ ಫರ್ನಾಂಡೀಸ್, ಗುಂಡೋಳ್ಳಿಯ ಸಂತ ಅಂತೋನಿ ಚರ್ಚ್‌ನಲ್ಲಿ ಗುರು ನೋಯಲ್ ಪ್ರಕಾಶ, ಗರಡೊಳ್ಳಿಯ ಚರ್ಚ್‌ನಲ್ಲಿ ಗುರು ರೋನಾಲ್ಡೋ, ಬುಕಿನಕೊಪ್ಪ ಚರ್ಚ್‌ನಲ್ಲಿ ಗುರು ದೊಮನಿಕ್ ಪೂಜಾ ವಿಧಿ ನೆರವೆರಿಸಿ ಜಾಗತಿಕ ಶಾಂತಿಗಾಗಿ, ನಮ್ಮ ಜನಪ್ರತಿನಿಧಿಗಳಿಗಾಗಿ, ಅಧಿಕಾರಿ ವೃಂದಕ್ಕಾಗಿ, ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿದರು. ಯೇಸು ಕ್ರಿಸ್ತರು ಪ್ರಾಣ ಬಲಿದಾನ ಮಾಡಿದ ಧ್ಯೋತಕವಾಗಿ ಚರ್ಚ್‌ಗಳಲ್ಲಿ ಗಂಟೆಗಳನ್ನು ಬಾರಿಸಲಿಲ್ಲ.