ಗೋಸೇವಕರಿಗೆ ಉತ್ತಮ ಆರೋಗ್ಯ: ಭಕ್ತಿಭೂಷಣ ದಾಸ್ ಗುರೂಜಿ

KannadaprabhaNewsNetwork | Published : Jan 25, 2025 1:02 AM

ಸಾರಾಂಶ

ಪೊಳಲಿಯ ರಾಧಾ ಸುರಭಿ ಗೋಮಂದಿರದಿಂದ ಹೊರಟ ನಂದಿ ರಥವು ಶಿಕಾರಿಪುರ ಮಾರ್ಗವಾಗಿ ನಗರವನ್ನು ತಲುಪಿದಾಗ ಮಾರಿಕಾಂಬಾ ದೇವಸ್ಥಾನ ಬಳಿ ನಂದಿ ಪೂಜೆ ನೆರವೇರಿಸಿ ಸ್ವಾಗತಿಸಲಾಯಿತು.

ಶಿರಸಿ: ಶಿರಸಿಯ ಗೋಸೇವಾ ಗತಿವಿಧಿ ವತಿಯಿಂದ ಆಯೋಜಿಸಿದ್ದ ನಂದಿ ರಥಯಾತ್ರೆ ಕಾರ್ಯಕ್ರಮವು ನಗರದಲ್ಲಿ ಶ್ರದ್ಧಾ-ಭಕ್ತಿಯಿಂದ ನೆರವೇರಿತು.

ಪೊಳಲಿಯ ರಾಧಾ ಸುರಭಿ ಗೋಮಂದಿರದಿಂದ ಹೊರಟ ನಂದಿ ರಥವು ಶಿಕಾರಿಪುರ ಮಾರ್ಗವಾಗಿ ನಗರವನ್ನು ತಲುಪಿದಾಗ ಮಾರಿಕಾಂಬಾ ದೇವಸ್ಥಾನ ಬಳಿ ನಂದಿ ಪೂಜೆ ನೆರವೇರಿಸಿ ಸ್ವಾಗತಿಸಲಾಯಿತು.

ಮಾರಿಕಾಂಬಾ ದೇವಸ್ಥಾನ ಹಾಗೂ ಗೋಸೇವಾ ಗತಿವಿಧಿಯ ಪ್ರಮುಖರು ಪೂಜೆಯನ್ನು ನೆರವೇರಿಸಿದರು. ಮಾತೆಯರು ಪೂರ್ಣಕುಂಭ ಸ್ವಾಗತ ಕೋರಿದರು. ನಂದಿ ರಥಯಾತ್ರೆಯ ಸಂಯೋಜಕರಾದ ಹರೀಶ ಕರ್ಕಿ ಭಗವಾ ಧ್ವಜ ಹಾರಿಸಿ, ರಥಯಾತ್ರೆಗೆ ಚಾಲನೆ ನೀಡಿದರು.ಮಾರಿಕಾಂಬಾ ದೇವಸ್ಥಾನದಿಂದ ಚಂಡೆ- ವಾದ್ಯಗಳೊಂದಿಗೆ ಭವ್ಯ ಶೋಭಾಯಾತ್ರೆ ಜತೆಗೆ ನಂದಿ ರಥವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರುದ್ರದೇವರ ಮಠದ ಬಳಿ ಆಗಮಿಸಿತು. ಮಾತೆಯರು ಹಾಗೂ ಭಜನಾ ಮಂಡಳಿಗಳಿಂದ ವಿಷ್ಣು ಸಹಸ್ರನಾಮ ಪಠಣ ನೆರವೇರಿತು.ಸಾನ್ನಿಧ್ಯ ವಹಿಸಿದ್ದ ರಾಧಾ ಸುರಭಿ ಗೋಮಂದಿರದ ಅಧ್ಯಕ್ಷ ಭಕ್ತಿಭೂಷಣ ದಾಸ್ ಗುರೂಜಿ ಮಾತನಾಡಿ, ಗೋಸೇವೆ ಮಾಡುವವರಿಗೆ ಖಿನ್ನತೆ ತೊಂದರೆ ಇಲ್ಲ. ಉತ್ತಮ ಆರೋಗ್ಯ ಗೋಸೇವಕರಿಗೆ ಶತಸಿದ್ಧ ಎಂದರು.

ಮುಖ್ಯ ವಕ್ತಾರ ಸತ್ಯನಾರಾಯಣ ಭಟ್ ಮಾತನಾಡಿ, ಗೋವು ಆಧರಿತ ಕೃಷಿ ಪದ್ಧತಿ ಹಿಂದೆ ಇತ್ತು. ಅದು ಭೂಮಿಯ ಫಲತ್ತತೆಯನ್ನು ಹೆಚ್ಚಿಸುತ್ತಾ ಇತ್ತು. ಆದರೆ ಇವತ್ತು ಹೊಗೆ ಉಗುಳುವ ಯಂತ್ರಗಳು ಭೂಮಿ ಉತ್ತುತ್ತಿವೆ ಎಂಬ ಕಳವಳ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಪುಣ್ಯಕೋಟಿ ಗೋಶಾಲೆಯ ಗಣೇಶ ಮುಂಡಗೋಡ, ಗೋವಿಗೆ ಪಾರಂಪರಿಕ ಔಷಧಿ ನೀಡುವ ವೈದ್ಯ ಮಂಜುನಾಥ ಗೌಡ ಅತ್ತಿಸವಲು, ಗೋ-ರಕ್ಷಕರು ಶಿರಸಿ ತಂಡದ ಲಕ್ಷ್ಮಣ ನಾಯ್ಕ ಹಾಗೂ ರವಿ ಗೌಳಿ, ಪುಣ್ಯಕೋಟಿ ಟ್ರಸ್ಟ್‌ನ ಮಲೆನಾಡು ಗಿಡ್ಡ ಸಂರಕ್ಷಕ ಪುರುಷೋತ್ತಮ ಕಲ್ಮನೆ, ಗೋಸೇವಾ ನಿರತ ಪಾಂಡುರಂಗ ನಾಯ್ಕ ಕಾನಗೋಡ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಂದಿ ಸಂರಕ್ಷಕ ವಿಘ್ನೇಶ್ವರ ಹೆಗಡೆ ವಡಗೆರೆ ಅವರನ್ನು ಗೌರವಿಸಲಾಯಿತು. ಸನ್ಮಾನಿತರನ್ನು ಗುರುಪ್ರಸಾದ ಹೆಗಡೆ ಹರ್ತೆಬೈಲ್ ಸಭೆಗೆ ಪರಿಚಯಿಸಿ ನಿರ್ವಹಿಸಿದರು. ಆನಂದ ಸಾಲೇರ ದಂಪತಿಗಳು ಪೂಜ್ಯ ಶ್ರೀ ಭಕ್ತಿಭೂಷಣ ದಾಸ್ ಗುರೂಜಿ ಅವರಿಗೆ ಫಲ ಸಮರ್ಪಿಸಿದರು. ಹರೀಶ್ ಕರ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಜಾನನ ಸಕಲಾತಿ ಸ್ವಾಗತಿಸಿ ನಿರ್ವಹಿಸಿದರು. ಸಂದೀಪ್ ನಾಯ್ಕ ವಂದಿಸಿದರು.ಗೋಹತ್ಯೆ ತಡೆಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿ: ಸ್ವರ್ಣವಲ್ಲೀ ಶ್ರೀ

ಶಿರಸಿ: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಗೋವುಗಳ ಹತ್ಯೆ ರಾಜಾರೋಷವಾಗಿ ನಡೆಯುತ್ತಿದ್ದು, ಜಿಲ್ಲೆಯ ಹೊನ್ನಾವರದಲ್ಲಿ ಗರ್ಭ ಧರಿಸಿದ್ದ ಗೋವನ್ನು ಕೊಂದು ಗರ್ಭದಲ್ಲಿದ್ದ ಕರುವನ್ನು ಎಸೆದು ಹೋದ ದೃಶ್ಯ ಇಲ್ಲಿಯ ಜನರಿಗೆ ತುಂಬಾ ದುಃಖವನ್ನುಂಟು ಮಾಡಿದೆ. ಗೋಹತ್ಯೆ ನಿಲ್ಲಿಸಲು ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಒತ್ತಾಯಿಸಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ಅವರು, ಗೋವನ್ನು ಬದುಕಲು ಬಿಟ್ಟು ಕರು ಹಾಕಿದಿದ್ದರೆ ಎಷ್ಟೋ ಜನರಿಗೆ ಗೋವು ಹಾಲು ಕೊಡುತ್ತಿತ್ತು. ಆದರೆ ಕ್ರೂರವಾಗಿ ಕೊಂದಿರುವುದು ದುಃಖದ ಸಂಗತಿ. ಅಲ್ಲದೇ, ರಾಜ್ಯದ ಬೇರೆ ಕಡೆಗಳಲ್ಲಿಯೂ ಗೋಹತ್ಯೆ ನಡೆಯುತ್ತಿರುವುದು ದುಃಖ ಉಂಟು ಮಾಡಿದೆ. ಗೋಹತ್ಯೆ ಮಹಾಪಾಪ ಅದರಲ್ಲಿ ಸಂಶಯವಿಲ್ಲ. ಆ ಪಾಪದ ಪರಿಣಾಮವಾಗಿ ಮುಂದೆ ಸಮಾಜದಲ್ಲಿ ಅನೇಕ ಅನರ್ಥಗಳಾಗುತ್ತವೆ ಎಂದಿದ್ದಾರೆ.

Share this article