ಉಪ ವಲಯ ಅರಣ್ಯಾಧಿಕಾರಿ ವರುಣ ಶೆಟ್ಟಿಯಿಂದ ಉತ್ತಮ ಕೆಲಸ: ಮಂಜುನಾಥ ಗೌಡ ಪ್ರಶಂಸೆ

KannadaprabhaNewsNetwork | Published : Sep 9, 2024 1:32 AM

ಸಾರಾಂಶ

ನರಸಿಂಹರಾಜಪುರ, ಕಳೆದ 12 ವರ್ಷಗಳಿಂದ ಸೀತೂರು ವೃತ್ತದ ಉಪ ವಲಯ ಅರಣ್ಯಾಧಿಕಾರಿಯಾಗಿದ್ದ ವರುಣ.ಸಿ .ಶೆಟ್ಟಿ ಗ್ರಾಮಸ್ಥರೊಂದಿಗೆ ಅತ್ಯುತ್ತಮ ಸಂಬಂಧ ಇಟ್ಟುಕೊಂಡಿದ್ದರು ಎಂದು ಕೊನೋಡಿ ಪಂಚವಟಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಬಿ.ಎಸ್‌. ಮಂಜುನಾಥ್‌ ಪ್ರಶಂಸೆ ವ್ಯಕ್ತಪಡಿಸಿದರು.

- ಬೆಮ್ಮನೆ ವಿನಾಯಕ ಸೇವಾ ಸಮಿತಿ ಗಣೇಶೋತ್ಸವದಲ್ಲಿ ಆತ್ಮೀಯ ಬೀಳ್ಕೊಡುಗೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕಳೆದ 12 ವರ್ಷಗಳಿಂದ ಸೀತೂರು ವೃತ್ತದ ಉಪ ವಲಯ ಅರಣ್ಯಾಧಿಕಾರಿಯಾಗಿದ್ದ ವರುಣ.ಸಿ .ಶೆಟ್ಟಿ ಗ್ರಾಮಸ್ಥರೊಂದಿಗೆ ಅತ್ಯುತ್ತಮ ಸಂಬಂಧ ಇಟ್ಟುಕೊಂಡಿದ್ದರು ಎಂದು ಕೊನೋಡಿ ಪಂಚವಟಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಬಿ.ಎಸ್‌. ಮಂಜುನಾಥ್‌ ಪ್ರಶಂಸೆ ವ್ಯಕ್ತಪಡಿಸಿದರು.

ಭಾನುವಾರ ಬೆಮ್ಮನೆಯಲ್ಲಿ ವಿನಾಯಕ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ಗಣೇಶೋತ್ಸವದಲ್ಲಿ ವರ್ಗಾವಣೆಗೊಂಡ ಸೀತೂರು ವೃತ್ತದ ವಲಯ ಅರಣ್ಯಾಧಿಕಾರಿ ವರುಣ ಸಿ ಶೆಟ್ಟಿ ಅವರಿಗೆ ಪಂಚವಟಿ ಗ್ರಾಮ ಅರಣ್ಯ ಸಮಿತಿ, ಗಣೇಶೋತ್ಸವ ಸಮಿತಿ ಹಾಗೂ ಗ್ರಾಮಸ್ಥರಿಂದ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದರು.

1996 ರಲ್ಲಿ ಕೊನೋಡಿ ಪಂಚವಟಿ ಗ್ರಾಮ ಅರಣ್ಯ ಸಮಿತಿ ಪ್ರಾರಂಭವಾಗಿತ್ತು. ಕಳೆದ 12 ವರ್ಷದಿಂದ ಈ ಗ್ರಾಮ ಅರಣ್ಯ ಸಮಿತಿಗೆ ವರುಣ ಸಿ ಶೆಟ್ಟಿ ಅವರೇ ಕಾರ್ಯದರ್ಶಿಯಾಗಿದ್ದರು. ಗ್ರಾಮ ಅರಣ್ಯ ಸಮಿತಿ ಪ್ಲಾಂಟೇಷನ್‌ ಹರಾಜು ಆದ ನಂತರ ಶೇ.50 ರಷ್ಟು ಹಣ ಗ್ರಾಮ ಅರಣ್ಯ ಸಮಿತಿಗೆ ಬರಬೇಕಾಗಿತ್ತು. 5 ಲಕ್ಷ ಬಂದಿದ್ದು ಉಳಿದ 19 ಲಕ್ಷ ಅರಣ್ಯ ಇಲಾಖೆಯಿಂದ ಬರಬೇಕಾಗಿದೆ. ಮುಂದಿನ ದಿನಗಳಲ್ಲಿ ವರುಣ.ಸಿ ಶೆಟ್ಟಿ ಅವರಿಗೆ ಪ್ರಮೋಷನ್‌ ಆಗಿ ತಾಲೂಕು ಅರಣ್ಯ ಅಧಿಕಾರಿಯಾಗಿ ಬರಲಿ ಎಂದು ಆಶಯ ವ್ಯಕ್ತಪಡಿಸಿದರು.

ಸೀತೂರು ಗ್ರಾಮ ಪಂಚಾಯಿತಿ ಸದಸ್ಯ ಎಚ್‌.ಇ. ದಿವಾಕರ ಮಾತನಾಡಿ, ವರುಣ ಸಿ ಶೆಟ್ಟಿ ಅವರು ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದು ಗ್ರಾಮಸ್ಥರಿಗೆ, ರೈತರೊಂದಿಗೆ ಸ್ನೇಹವಾಗಿ ನಡೆದುಕೊಂಡಿದ್ದರು ಎಂದರು. ಮುಖಂಡ ಬೆಮ್ಮನೆ ಮೋಹನ್‌ ಮಾತನಾಡಿ, ವರುಣ ಸಿ.ಶೆಟ್ಟಿ ಒಬ್ಬ ಅರಣ್ಯಾಧಿಕಾರಿ ಎನ್ನುವುದಕ್ಕಿಂತ ಮನೆಯ ಮಗನ ರೀತಿಯಲ್ಲಿ ಕೆಲಸ ಮಾಡಿದ್ದಾರೆ ಎಂದರು.

ಸನ್ಮಾನ ಸ್ವೀಕಾರ ಮಾಡಿದ ವರುಣ ಸಿ.ಶೆಟ್ಟಿ ಮಾತನಾಡಿ, ಸೀತೂರು ವೃತ್ತದ ವ್ಯಾಪ್ತಿಯಲ್ಲಿ ಬೆಳ್ಳೂರು, ಕೊನೋಡಿ, ಸೀತೂರು ಗ್ರಾಮ ಅರಣ್ಯ ಸಮಿತಿ ಉತ್ತಮವಾಗಿ ಕೆಲಸ ಮಾಡುತ್ತಿದೆ. ಕೊಪ್ಪ ಅರಣ್ಯ ವಿಭಾಗದಲ್ಲೇ ಈ 3 ಗ್ರಾಮ ಅರಣ್ಯ ಸಮಿತಿ ಮೊದಲನೇ ಸ್ಥಾನದಲ್ಲಿದೆ. ಕೊನೋಡಿ ಗ್ರಾಮ ಅರಣ್ಯ ಸಮಿತಿಗೆ ಪ್ಲಾಂಟೇಷನ್‌ ಕಡಿತಲೆ ಬಾಬ್ತು ಹಣ ಬಂದಿಲ್ಲ.ಈ ಬಗ್ಗೆ ಕೊನೋಡಿ ಪಂಚವಟಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರು ಪ್ರಯತ್ನ ಮಾಡುತ್ತಿದ್ದಾರೆ. ಶೀಘ್ರ ಬಾಕಿ ಇರುವ ಹಣ ಬರ ಬಹುದು. ಗಣಪತಿ ಹಬ್ಬದ ದಿನ ನನಗೆ ಸನ್ಮಾನ ಮಾಡಿರುವುದು ನನಗೆ ಮರೆಯಲಾಗದ ದಿನ ಎಂದರು.

ಈ ಸಂದರ್ಭದಲ್ಲಿ ಬೆಮ್ಮನೆ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಸುಬೋದ್‌, ಮುಖಂಡರಾದ ಯೋಗೇಂದ್ರ, ಎಚ್‌.ಇ . ಮಹೇಶ್‌, ಸಂಪತ್‌ ಕುಮಾರ್‌, ಕೊನೋಡಿ ಗಣೇಶ್, ವನಪಾಲಕ ರಾಘವೇಂದ್ರ, ಬೆಮ್ಮನೆ ವಿನಾಯಕ ಸೇವಾ ಸಮಿತಿ ಸದಸ್ಯರು, ಪಂಚವಟಿ ಗ್ರಾಮ ಅರಣ್ಯ ಸಮಿತಿ ಸದಸ್ಯರು ಇದ್ದರು.

Share this article