ಉತ್ತಮ ಸಂಸ್ಕಾರವೇ ನಮ್ಮ ಶ್ರೇಯಸ್ಸಿಗೆ ಸಹಕಾರಿ: ನಟ ದೊಡ್ಡಣ್ಣ

KannadaprabhaNewsNetwork |  
Published : May 02, 2024, 12:26 AM IST
11 | Kannada Prabha

ಸಾರಾಂಶ

ಅನೇಕ ಮಠ- ಮಂದಿರಗಳು ಹಾಗೂ ರೋಟರಿ ಕ್ಲಬ್‌ನಂತಹ ಸೇವಾ ಸಂಸ್ಥೆಗಳು ಇದನ್ನು ಮಾದರಿ ಕಾರ್ಯಕ್ರಮ ಎಂದು ಮಾನ್ಯತೆ ನೀಡಿ ಅಲ್ಲಲ್ಲಿ ಸಾಮೂಹಿಕ ವಿವಾಹ ನಡೆಸುತ್ತಿರುವುದು ತನಗೆ ಸಂತೋಷ ನೀಡುತ್ತಿದೆ ಎಂದು ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ತಾಯಿ- ತಂದೆ ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ನೀಡಿ ಸಮಾಜದ ಸಜ್ಜನರಾಗಿ, ಉತ್ತಮ ಚಾರಿತ್ರ್ಯವಂತರಾಗಿ ಮತ್ತು ಸಭ್ಯ ಸುಸಂಸ್ಕೃತ ನಾಗರಿಕರಾಗಿ ರೂಪಿಸಬೇಕು. ತನ್ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗಬೇಕು. ತಾಯಿ- ತಂದೆ ಮಾಡಿದ ದಾನ ಧರ್ಮ, ಸತ್ಕಾರ್ಯದ ಪುಣ್ಯ ಅವರ ಮಕ್ಕಳಿಗೂ ಲಭಿಸುತ್ತದೆ. ಉತ್ತಮ ಸಂಸ್ಕಾರವೇ ನಮ್ಮ ಶ್ರೇಯಸ್ಸಿಗೆ ಸಹಕಾರಿ ಎಂದು ಕನ್ನಡ ಚಲನಚಿತ್ರ ನಟ ದೊಡ್ಡಣ್ಣ ಹೇಳಿದರು.ಅವರು ಬುಧವಾರ ಗೋಧೂಳಿ ಲಗ್ನದಲ್ಲಿ ಧರ್ಮಸ್ಥಳದಲ್ಲಿ ನಡೆದ 52ನೇ ಸಾಮೂಹಿಕ ಉಚಿತ ವಿವಾಹ ಸಮಾರಂಭದಲ್ಲಿ ವಧು ವರರಿಗೆ ಮಾಂಗಲ್ಯ ವಿತರಿಸಿ ಶುಭ ಕೋರಿದರು.

ಯಾವುದೇ ಧರ್ಮ, ಸಂಸ್ಕಾರ ಕಲಿಯಲು ವಯಸ್ಸಿನ ಇತಿ-ಮಿತಿ ಇಲ್ಲ. ರಾಮಾಯಣ ಮತ್ತು ಮಹಾಭಾರತದಂತಹ ಪೌರಾಣಿಕ ಕೃತಿಗಳ ಅಧ್ಯಯನದೊಂದಿಗೆ ಸ್ವಾಧ್ಯಾಯ ಮಾಡಬೇಕು. ದೇವಸ್ಥಾನಕ್ಕೆ ಹೋಗುವಾಗ ಸಂಚಾರಿ ದೂರವಾಣಿ ಕೊಂಡು ಹೋಗಬಾರದು. ದೇವರ ಎದುರು ಕಣ್ಣು ಮುಚ್ಚಬಾರಾದು. ತೆರೆದ ಕಣ್ಣುಗಳಿಂದ ಏಕಾಗ್ರತೆಯೊಂದಿಗೆ ದೇವರ ದರ್ಶನ, ಧ್ಯಾನ ಮಾಡಬೇಕು. ಪ್ರೀತಿ, ವಿಶ್ವಾಸ, ಪರೋಪಕಾರ ಸೇವಾಕಳಕಳಿ, ಸಾಮಾಜಿಕ ಬದ್ಧತೆ ಮೊದಲಾದ ಮಾನವೀಯಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಸಾಮೂಹಿಕ ವಿವಾಹ ಅಂದರೆ ಸರಳ ವಿವಾಹಕ್ಕೆ ಆದ್ಯತೆ. ಸಾಮೂಹಿಕ ವಿವಾಹದಿಂದಾಗಿ ವರದಕ್ಷಿಣೆ ಪಿಡುಗು ಮತ್ತು ಮದುವೆಗಾಗುವ ದುಂದುವೆಚ್ಚ ಕಡಿಮೆಯಾಗಿದೆ. ನೂತನ ದಂಪತಿಗಳು ಸತ್ಸಂಗ ಮಾಡಿ ಸಂಸಾರವನ್ನು ಹೊಣೆಗಾರಿಕೆ ಮತ್ತು ಜವಬ್ದಾರಿಯಿಂದ ಅರ್ಥಪೂರ್ಣವಾಗಿ ನಿರ್ವಹಿಸಬೇಕು. ಮದುವೆಯ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಸಂಸ್ಕಾರಯುತ ಜೀವನ ನಡೆಸಬೇಕು. ಗ್ರಾಮೀಣ ಪ್ರದೇಶವನ್ನು ತ್ಯಜಿಸಿ ನಗರಕ್ಕೆ ವಲಸೆ ಹೋಗುವುದನ್ನು ತಡೆಯಬೇಕು ಎಂದು ಕಿವಿಮಾತು ಹೇಳಿದರು.

ಸಾಮೂಹಿಕ ವಿವಾಹಕ್ಕೆ ಅನೇಕ ಮಂದಿ ದಾನಿಗಳು ಸೀರೆ, ಮಂಗಳಸೂತ್ರ ಹಾಗೂ ಹೂಮಾಲೆಯನ್ನು ಉದಾರವಾಗಿ ದಾನ ನೀಡಿದ್ದಾರೆ. ನಿರೀಕ್ಷೆಗಿಂತಲೂ ಮಿಗಿಲಾಗಿ ದಾನ ಹರಿದುಬರುತ್ತಿದೆ ಎಂದು ಹೆಗ್ಗಡೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಾಂತಾ ದೊಡ್ಡಣ್ಣ, ಹೇಮಾವತಿ ಹೆಗ್ಗಡೆ, ಸುಪ್ರಿಯಾ ಹರ್ಷೇಂದ್ರಕುಮಾರ್ ಉಪಸ್ಥಿತರಿದ್ದರು. ಹರ್ಷೇಂದ್ರಕುಮಾರ್ ಸ್ವಾಗತಿಸಿದರು. ರತ್ನವರ್ಮ ಜೈನ್‌ ವಂದಿಸಿದರು. ಶ್ರೀನಿವಾಸ ರಾವ್ ಧರ್ಮಸ್ಥಳ ಮತ್ತು ಪೂಜಾ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು.ದಾಂಪತ್ಯ ಜೀವನಕ್ಕೆ ಕಾಲಿಟ್ಟ 123 ಜೋಡಿಗಳು

ಧರ್ಮಸ್ಥಳ ಕ್ಷೇತ್ರದಲ್ಲಿ ಬುಧವಾರ ಮದುವೆ ಮನೆಯ ಸಂಭ್ರಮ- ಸಡಗರ. ಸಂಜೆ ಗಂಟೆ 6.45ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ 39 ಜೋಡಿ ಅಂತರ್ಜಾತಿಯ ವಿವಾಹ ಸೇರಿದಂತೆ ಒಟ್ಟು 123 ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು.

ಬುಧವಾರ ಬೆಳಗ್ಗೆಯಿಂದಲೇ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು ಬೀಡಿನಲ್ಲಿ ವಧುವಿಗೆ ಸೀರೆ, ರವಿಕೆ ಮತ್ತು ವರನಿಗೆ ಧೋತಿ, ಶಾಲು ವಿತರಿಸಿದರು. ಸಂಜೆ 6 ಗಂಟೆಯಿಂದ ವಧು-ವರ ಜೋಡಿಗಳು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಭವ್ಯ ಮೆರವಣಿಗೆಯಲ್ಲಿ ಮದುವೆ ನಡೆಯುವ ಅಮೃತವರ್ಷಿಣಿ ಸಭಾಭವನಕ್ಕೆ ತೆರಳಿದರು.

ಮುಹೂರ್ತಕ್ಕೆ ಅರ್ಧ ಗಂಟೆ ಮುಂಚಿತವಾಗಿ ಹೆಗ್ಗಡೆ ದಂಪತಿ ಮತ್ತು ಚಲನಚಿತ್ರ ನಟ ದೊಡ್ಡಣ್ಣ ದಂಪತಿ ಮಂಗಳಸೂತ್ರ ವಿತರಿಸಿದರು. ಆಯಾ ಜಾತಿ- ಮತ ಸಂಪ್ರದಾಯದಂತೆ ಧಾರ್ಮಿಕ ವಿಧಿ- ವಿಧಾನಗಳನ್ನು ನೆರವೇರಿಸಲಾಯಿತು.ಸಂಜೆ ಗಂಟೆ: 6.45ಕ್ಕೆ ಸರಿಯಾಗಿ ಗೋಧೂಳಿಲಗ್ನ ಸುಮುಹೂರ್ತದಲ್ಲಿ ವೇದಿಕೆಯಿಂದ ವಸಂತ ಮಂಜಿತ್ತಾಯ ಅವರ ವೇದ-ಮಂತ್ರ ಪಠಣದೊಂದಿಗೆ ವರನು ವಧುವಿಗೆ ಮಂಗಳಸೂತ್ರ ಧಾರಣೆ ಮಾಡಿದರು. ಸೋಬಾನೆ ಹಾಡಿನೊಂದಿಗೆ ವಧು ವರರಿಗೆ ಆರತಿ ಎತ್ತಲಾಯಿತು. ಬಳಿಕ ನೂತನ ದಂಪತಿಗಳು ದೇವರ ದರ್ಶನ ಮಾಡಿ ಅನ್ನಪೂರ್ಣ ಭೋಜನಾಲಯದಲ್ಲಿ ಮದುವೆ ಊಟ ಸ್ವೀಕರಿಸಿದರು. ಧರ್ಮಸ್ಥಳದ ವತಿಯಿಂದ ನೂತನ ದಂಪತಿಗಳಿಗೆ ವಿಶೇಷ ಉಡುಗೊರೆ ನೀಡಿ ಸತ್ಕರಿಸಲಾಯಿತು. ಸಾಮೂಹಿಕ ವಿವಾಹದಲ್ಲಿ ಮದುವೆಯಾದ ದಂಪತಿಗೆ ವಿವಾಹ ನೋಂದಣಿ ಕಚೇರಿಯ ಅಧಿಕಾರಿಗಳು ಸ್ಥಳದಲ್ಲಿದ್ದು ಅಧಿಕೃತ ಪ್ರಮಾಣಪತ್ರ ನೀಡಿದರು. ಗದಗದ ಪ್ರವೀಣ ಖನ್ನೂರು ಅವರು ಅಪಘಾತದಲ್ಲಿ ಕಾಲನ್ನು ಕಳೆದುಕೊಂಡಿದ್ದು ಕೃತಕ ಕಾಲು ಅಳವಡಿಸಲಾಗಿದೆ. ಅವರನ್ನು ಕವಿತಾ ಗಿಡಕೆಂಚಣ್ಣವರ್ ಪರಸ್ಪರ ಪ್ರೀತಿಸಿ ಮದುವೆಗೆ ಒಪ್ಪಿದ್ದು ಅವರಿಗೆ 12,900ನೇ ಜೋಡಿ ಎಂಬ ವಿಶೇಷ ಮಾನ್ಯತೆಯೊಂದಿಗೆ ಪ್ರತ್ಯೇಕ ವೇದಿಕೆ ನಿರ್ಮಿಸಲಾಗಿತ್ತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ