ಕೃಷ್ಣ ಎನ್. ಲಮಾಣಿ
ಕನ್ನಡಪ್ರಭ ವಾರ್ತೆ ಹೊಸಪೇಟೆಈರುಳ್ಳಿಗೆ ಉತ್ತಮ ಬೆಲೆ ದೊರೆಯುತ್ತಿರುವ ಹಿನ್ನೆಲೆಯಲ್ಲಿ ಉಳ್ಳಾಗಡ್ಡಿ ಬೆಳೆಗೆ ರೈತರು ಹಗಲು- ರಾತ್ರಿ ಕಾವಲು ಕಾಯುತ್ತಿದ್ದಾರೆ!.ಹೌದು, ಜಿಲ್ಲೆಯ ರೈತರು ಈಗ ಈರುಳ್ಳಿ ಹೊಲಗಳಲ್ಲೇ ರಾತ್ರಿ ಹೊತ್ತು ಮಲಗುತ್ತಿದ್ದಾರೆ. ರಸ್ತೆಬದಿಯ ಈರುಳ್ಳಿ ಹೊಲಗಳಿಗೆ ಕಳ್ಳರು ನುಗ್ಗಿ ಕಿತ್ತಿಟ್ಟ ಉಳ್ಳಾಗಡ್ಡಿ ಹೊತ್ತುಕೊಂಡು ಹೋಗಬಾರದು; ಎಂಬ ಭಯದಿಂದ ರೈತರು ಈಗ ಕಾವಲು ಕಾಯುತ್ತಿದ್ದಾರೆ. ಈಗಾಗಲೇ ಟೊಮೇಟೊಗೆ ಬಂಪರ್ ಬೆಲೆ ಬಂದಾಗ; ರೈತರು ಇದೇ ಹಾದಿ ಅನುಸರಿಸಿದ್ದರು. ಈಗ ಈರುಳ್ಳಿ ದರ ಕೂಡ ದಿನೇ ದಿನೇ ಏರಿಕೆ ಹಾದಿ ಹಿಡಿದಿರುವುದರಿಂದ ರೈತರು ಈ ಮಾರ್ಗ ಅನುಸರಿಸಿದ್ದಾರೆ.
ಹೊಲದಲ್ಲಿ ಕಾವಲು:ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬನ್ನಿಗೋಳ ಗ್ರಾಮದಲ್ಲಿ ಅಂದಾಜು 70 ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆ ಬೆಳೆಯಲಾಗಿದೆ. ಅದರಲ್ಲೂ ಬನ್ನಿಗೋಳ ಗ್ರಾಮದ ಯಂಕರೆಡ್ಡಿ ಹೇಮರೆಡ್ಡಿ ಗಿರಿಯಪ್ಪನವರ ಎಂಬ ರೈತರು ನಾಲ್ಕು ಎಕರೆ ಹೊಲದಲ್ಲಿ ಬೆಳೆ ಬೆಳೆದಿದ್ದಾರೆ. ಈ ಪೈಕಿ ಈಗ 2.5 ಎಕರೆ ಪ್ರದೇಶದಲ್ಲಿ ಈರುಳ್ಳಿ ಕಿತ್ತಿಟ್ಟಿದ್ದಾರೆ. ಬೆಲೆ ದಿನೇ ದಿನೇ ಏರಿಕೆಯಾಗುತ್ತಿರುವುದರಿಂದ; ಇನ್ನೂ ಕಟಾವು ಮಾಡಿಲ್ಲ. ಕಿತ್ತಿಟ್ಟ ಈರುಳ್ಳಿಯನ್ನು ರಾತ್ರಿ ಹೊತ್ತು ಬಂದು ಕಳ್ಳತನ ಮಾಡಿಕೊಂಡು ಪರಾರಿಯಾದರೆ, ಎಂಬ ಆತಂಕದಿಂದ ಈಗ ರೈತರೇ ಕಾವಲು ಕಾಯುತ್ತಿದ್ದಾರೆ. ದಿನದ 24 ತಾಸೂ ಇಬ್ಬರು ರೈತರು ರೈತರು ಕಾವಲು ಕಾಯುತ್ತಿದ್ದಾರೆ. ಇದರಿಂದ ಬೆಳೆ ಬಚಾವು ಆಗುವುದಲ್ಲದೇ, ಉಳಿದ ಮೆಣಸಿನಕಾಯಿ ಬೆಳೆಗೂ ನೀರು ಹಾಯಿಸಲು ಅನುಕೂಲವಾಗುತ್ತಿದೆ ಎಂದು ಹೇಳುತ್ತಾರೆ ರೈತ ಯಂಕರೆಡ್ಡಿ ಹೇಮರೆಡ್ಡಿ ಗಿರಿಯಪ್ಪನವರ.
ಉತ್ತಮ ಬೆಲೆ:ಈಗಾಗಲೇ ಈರುಳ್ಳಿಗೆ ಬೆಂಗಳೂರು ಮಾರ್ಕೆಟ್‌ನಲ್ಲಿ ಕ್ವಿಂಟಲ್‌ಗೆ ₹5,500ರಿಂದ ₹6000 ಸಿಗುತ್ತಿದೆ. ಅಂಗಡಿ ಹಾಗೂ ಕಿರುಕೋಳ ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ ಬೆಲೆ 70-80 ರು.ಗಳಾಗಿವೆ. ದಿನೇ ದಿನೇ ಏರಿಕೆಯಾಗುತ್ತಲೇ ಸಾಗುತ್ತಿದೆ. ದಾವಣಗೆರೆ, ಹುಬ್ಬಳ್ಳಿ ಮಾರ್ಕೆಟ್‌ನಲ್ಲೂ ಉತ್ತಮ ದರ ಇದೆ. ಹಾಗಾಗಿ ರೈತರು ಇನ್ನೂ ಹೆಚ್ಚಿನ ದರ ಲಭಿಸಲಿದೆ ಎಂಬ ಆಶಾಭಾವದೊಂದಿಗೆ ಹೊಲಗಳನ್ನು ಕಾವಲು ಕಾಯುತ್ತಿದ್ದಾರೆ.
ಇನ್ನು ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಕೊಟ್ಟೂರು, ಹೂವಿನಹಡಗಲಿ, ಕೂಡ್ಲಿಗಿ ಮತ್ತು ಹೊಸಪೇಟೆಯ ಮರಿಯಮ್ಮನಹಳ್ಳಿ ಭಾಗದಲ್ಲಿ ಬೋರ್‌ವೆಲ್‌ಗಳ ನೀರು ಬಳಸಿ ಈರುಳ್ಳಿ ಬೆಳೆಯನ್ನು ರೈತರು ಬೆಳೆದಿದ್ದಾರೆ. ಈಗ ಬಂಪರ್ ಬೆಲೆ ಸಿಗುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ರೈತರೇ ಕಾವಲು ಕಾಯುತ್ತಿದ್ದಾರೆ. ಜತೆಗೆ ಹೊಲಗಳಿಗೆ ಬರುತ್ತಿರುವ ಮಧ್ಯವರ್ತಿಗಳಿಗೂ ಈರುಳ್ಳಿ ಮಾರಾಟ ಮಾಡಲು ಹಿಂದೇಟು ಹಾಕುತ್ತಿದ್ದಾರೆ.ಕೃಷಿ ಇಲಾಖೆ ಜಾಗೃತಿ:
ಈರುಳ್ಳಿ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿರುವುದನ್ನು ಮನಗಂಡಿರುವ ವಿಜಯನಗರ ಜಿಲ್ಲೆಯ ಕೃಷಿ ಇಲಾಖೆಯ ಅಧಿಕಾರಿಗಳು, ಈಗಾಗಲೇ ರೈತರಲ್ಲಿ ದರ ಕುರಿತು ಜಾಗೃತಿ ಕೂಡ ಮೂಡಿಸುತ್ತಿದ್ದಾರೆ. ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ರೈತರನ್ನು ಸಂಪರ್ಕಿಸಿ ದಿನವಹಿ ಮಾರುಕಟ್ಟೆ ದರವನ್ನು ರೈತರಿಗೆ ತಲುಪಿಸುತ್ತಿದ್ದಾರೆ. ಹಾಗಾಗಿ ಹೊಲಗಳಿಗೆ ಖುದ್ದು ಮಧ್ಯವರ್ತಿಗಳು ಹೋದರೂ ರೈತರು ಈರುಳ್ಳಿ ಬೆಳೆ ಮಾರಾಟ ಮಾಡುತ್ತಿಲ್ಲ. ಎಪಿಎಂಸಿಗಳಿಗೆ ತೆರಳಿಯೇ ಈರುಳ್ಳಿ ಮಾರಾಟ ಮಾಡುವ ಶಪಥದೊಂದಿಗೆ ಬೆಳೆ ಜೋಪಾನ ಮಾಡುತ್ತಿದ್ದಾರೆ.ಕಳ್ಳಕಾಕರ ಹಾವಳಿ:
ಈರುಳ್ಳಿ ಬೆಳೆಯ ದರ ದಿಢೀರ್ ಏರಿಕೆಯಾಗಿದೆ. ನಾವು ಕಿತ್ತು ಇಟ್ಟಿದ್ದೇವೆ. ಇನ್ನೂ ಹೆಚ್ಚಿನ ಬೆಲೆ ಬಂದರೆ ಕಟಾವು ಮಾಡುತ್ತೇವೆ. ಕಿತ್ತಿಟ್ಟ ಈರುಳ್ಳಿ ಹಾಳಾಗುವುದಿಲ್ಲ. ಆದರೆ, ಕಳ್ಳಕಾಕರ ಹಾವಳಿ ಇದೆ. ಹಾಗಾಗಿ ಹಗಲು- ರಾತ್ರಿ ಕಾವಲು ಕಾಯುತ್ತಿದ್ದೇವೆ ಎನ್ನುತ್ತಾರೆ ರೈತರಾದ ಯಂಕರೆಡ್ಡಿ, ಹೇಮರೆಡ್ಡಿ, ಗಿರಿಯಪ್ಪನವರ.ವಿಜಯನಗರ ಜಿಲ್ಲೆಯಲ್ಲಿ ಬೋರ್‌ವೆಲ್ ನೀರು ಬಳಸಿ ರೈತರು ಈರುಳ್ಳಿ ಬೆಳೆ ಬೆಳೆದಿದ್ದಾರೆ. ಈಗ ಉತ್ತಮ ದರ ಇದೆ. ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ, ಹೊಸಪೇಟೆ ಎಪಿಎಂಸಿ ಮಾರುಕಟ್ಟೆಗಳಲ್ಲೂಉತ್ತಮ ದರ ಇದೆ. ಜಿಲ್ಲೆಯಲ್ಲಿ ಬರಗಾಲ ಇರುವುದರಿಂದ; ಈ ಬೆಳೆ ರೈತರಿಗೆ ಕೊಂಚ ಆಸರೆಯಾಗಿ ಪರಿಣಮಿಸುವ ಲಕ್ಷಣ ಇದೆ ಎಂದರು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದುಗಲ್.