ವಿವಿಧ ಇಲಾಖೆಗಳಿಂದ ಉತ್ತಮ ಜನಸ್ಪಂದನೆ ಕಾರ್ಯ: ಕೆ. ಎಸ್. ಆನಂದ್ ಮೆಚ್ಚುಗೆ

KannadaprabhaNewsNetwork | Published : Dec 27, 2024 12:46 AM

ಸಾರಾಂಶ

ಕಡೂರು, ತಾಲೂಕಿನ ರೈತರಿಗೆ ಸಂಬಂಧಿಸಿದ ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳು ತಮ್ಮ ಅವಧಿಯಲ್ಲಿ ಜನರಿಗೆ ಸ್ಪಂದಿಸುವಂತಹ ಉತ್ತಮ ಕಾರ್ಯಗಳನ್ನು ಮಾಡುತ್ತಿವೆ ಎಂದು ಶಾಸಕ ಕೆ. ಎಸ್. ಆನಂದ್ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ 2024- 25ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ

ಕನ್ನಡಪ್ರಭ ವಾರ್ತೆ, ಕಡೂರು.

ತಾಲೂಕಿನ ರೈತರಿಗೆ ಸಂಬಂಧಿಸಿದ ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳು ತಮ್ಮ ಅವಧಿಯಲ್ಲಿ ಜನರಿಗೆ ಸ್ಪಂದಿಸುವಂತಹ ಉತ್ತಮ ಕಾರ್ಯಗಳನ್ನು ಮಾಡುತ್ತಿವೆ ಎಂದು ಶಾಸಕ ಕೆ. ಎಸ್. ಆನಂದ್ ಮೆಚ್ಚುಗೆ ವ್ಯಕ್ತಪಡಿಸಿದರು.ಗುರುವಾರ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ 2024- 25ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನನ್ನ ಅವಧಿಯಲ್ಲಿ ತಾಲೂಕು ಆಡಳಿತದಲ್ಲಿ ಜನಪ್ರತಿನಿಧಿಗಳಿಗೆ ಅಧಿಕಾರಿಗಳು ಸಹಕಾರ ನೀಡುವ ಮೂಲಕ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುವಂತೆ ತಮ್ಮದೇ ಆದ ರೀತಿಯಲ್ಲಿ ಸಹಕಾರ ನೀಡುವ ಮೂಲಕ ಅಧಿಕಾರಿಗಳು ಜನರಿಗೆ ಸರ್ಕಾರದ ಕಾರ್ಯಕ್ರಮ ತಲುಪುವ ರೀತಿ ಕಾರ್ಯ ನಿರ್ವಹಿಸುತ್ತಿರುವುದು ತಮಗೆ ಸಂತಸ ತಂದಿದೆ ಎಂದರು.

ಸಭೆಯಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಬಳ್ಳೇಕೆರೆ ವಿಶ್ವನಾಥ್ ಮಾತನಾಡಿ, ಖಾಸಗಿ ಕಂಪನಿಯೊಂದು ಸರ್ಕಾರಿ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ರೈತರಿಗೆ ಮೂರು ವರ್ಷದಲ್ಲಿ ಫಲ ನೀಡುವ ಹಲಸಿನ ಮರಗಳ ನೀಡಲು ಮುಂದಾಗಿದ್ದು ಜೊತೆಯಲ್ಲಿ ಬೈ ಬ್ಯಾಕ್ ಮಾಡಲಾಗುವುದು ಎನ್ನುತ್ತಿವೆ. ಆದರೆ ಬೈ ಬ್ಯಾಕ್ ಯಶಸ್ವಿಯಾಗಿಲ್ಲ ಎಂದಾಗ ಶಾಸಕ ಆನಂದ್‌ ಈ ಬಗ್ಗೆ ಅಧಿಕಾರಿಗಳು ಸರಿಯಾಗಿ ಪರಿಶೀಲಿಸಿ ರೈತರಿಗೆ ಯಾವುದೇ ತೊಂದರೆ ಆಗುವುದು ಬೇಡ ಎಂದು ತೋಟಗಾರಿಕಾ ಅಧಿಕಾರಿ ಜಯದೇವ್ ಗೆ ಸೂಚಿಸಿದರು. ಬಳ್ಳೇಕೆರೆ ಸುತ್ತಮುತ್ತ ಎರಡು ಚಿರತೆಗಳು ರಸ್ತೆಯಲ್ಲಿ ಓಡಾಡುತ್ತಿದ್ದು ಜನ ಹೊರಬರಲು ಹೆದರುತ್ತಿದ್ದಾರೆ. ಅರಣ್ಯ ಇಲಾಖೆ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿದಾಗ ಶಾಸಕರು ಕ್ರಮಕ್ಕೆ ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೃಷಿ ಇಲಾಖೆಯಲ್ಲಿ ಕೃಷಿಭಾಗ್ಯ ಯೋಜನೆಯಲ್ಲಿ ಕೃಷಿ ಹೊಂಡ ಸೇರಿ 5 ಸವಲತ್ತುಗಳು ಒಳಗೊಂಡಿದ್ದು ಸಬ್ಸಿಡಿ ದರದಲ್ಲಿ ರೈತರಿಗೆ ನೀಡ ಲಾಗುವುದು. ಅಲ್ಲದೆ ತುಂತುರು ಹನಿ ನೀರಾವರಿ ಎಸ್ಸಿ ಎಸ್ಟಿ ಮತ್ತು ಸಾಮಾನ್ಯರೂ ಹನಿ ನೀರಾವರಿ ಸಾಮಗ್ರಿಗಳನ್ನು ಪಡೆದುಕೊಳ್ಳಬೇಕು ಎಂದು ಸಹಾಯಕ ನಿರ್ದೇಶಕ ಅಶೋಕ್ ಮಾಹಿತಿ ನೀಡಿದಾಗ. ಶಾಸಕರು ಸವಲತ್ತುಗಳನ್ನು ಪರಿಪೂರ್ಣವಾಗಿ ನಿಜವಾದ ಫಲಾನುಭವಿಗಳಿಗೆ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿ, ಕಾರ್ಯಕ್ರಮ ಮೂಲಕ ಪ್ರಚಾರ ಮಾಡಿ ಸವಲತ್ತುಗಳ ವಿತರಣೆಗೆ ತಮ್ಮನ್ನು ಕರೆಸಿ ಎಂದರು. ಆಹಾರ ಇಲಾಖೆಗೆ ಸಂಭಂಧಿಸಿದಂತೆ ಎಮ್ಮೇದೊಡ್ಡಿಯಲ್ಲಿ ಪಡಿತರ ವಿತರಣೆಗೆ ಕೆಲವರು ಜಾಗ ನೀಡುತ್ತಿಲ್ಲವೆಂದು ಗ್ರಾಮಸ್ಥರಿಂದ ದೂರು ಬಂದಿದೆ. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ರಂಗೇನಹಳ್ಳಿ ಅಥವಾ ಕಡೂರು ಟಟಿಎಪಿಸಿಎಂಎಸ್‌ ಮೂಲಕ ವಿತರಣೆ ಮಾಡಬೇಕು ಎಂದು ಆಹಾರ ನಿರೀಕ್ಷಕ ಶ್ರೀನಿವಾಸ್ ಗೆ ಸೂಚಿಸಿದರು. ಗ್ರಾಮೀಣ ಜನತೆಗೆ ಅನುಕೂಲವಾಗುವ ರೀತಿ ಈಗಾಗಲೇ ಎಮ್ಮೇದೊಡ್ಡಿ ಮತ್ತು ವಿವಿಧ ಮಾರ್ಗಗಳಲ್ಲಿ ಕೆಎಸ್ಆರ್ ಟಿಸಿ ಬಸ್ಸು ಸಂಚರಿಸುತ್ತಿವೆ. ಉಳಿದ 6 ಮಾರ್ಗಗಳ ಪಟ್ಟಿ ಮಾಡಿ ಸ್ಥಳೀಯ ಸಾರಿಗೆ ಬಸ್ಸುಗಳನ್ನು ಬಿಡಲು ಕ್ರಮ ಕೈಗೊಳ್ಳಬೇಕು ಎಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಶಾಸಕರು ತಾಕೀತು ಮಾಡಿದರು.ಅನೇಕ ಗ್ರಾಮಗಳಲ್ಲಿ, ಧಾರ್ಮಿಕ ಸ್ಥಳಗಳಲ್ಲಿ ಮಂಗಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳಬೇಕು. ಹಂಪಾಪುರ ಬಳಿ ಭೋವಿ ಕಾಲೋನಿ ಸಮೀಪದ 12 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದ ಶಾಸಕರು, ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ಭಾಗವಹಿಸದೆ ಇರುವ ಖಾಸಗಿ ಶಾಲೆಗಳಿಗೆ ನೋಟಿಸ್ ನೀಡುವಂತೆ ಬಿಇಒಗೆ ನಿರ್ದೇಶಿಸಿದರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಟರಾಜ್ ಮಾಹಿತಿ ನೀಡಿ ತಾಲೂಕಿನ 2 ಕಡೆ ಮುರಾರ್ಜಿ ವಸತಿ ಶಾಲೆಗಳ ನಿರ್ಮಾಣ ಕಾರ್ಯ ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.

10ನೇ ತರಗತಿ ಫಲಿತಾಂಶ ಈ ಭಾರಿ ಉತ್ತಮ ಮಟ್ಟದಲ್ಲಿ ಬರುವಂತೆ ಶಿಕ್ಷಕರು ಮಕ್ಕಳ ತರಬೇತಿ ವಿಚಾರವನ್ನು ಈಗಲೇ ಸಭೆ ನಡೆಸಿ ಸೂಚನೆ ನೀಡಲಾಗಿದ್ದು, ಬೆಳಗ್ಗೆ ಮತ್ತು ಸಂಜೆ ವಿಶೇಷ ತರಗತಿ ನಡೆಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿದ್ದರಾಜು ನಾಯ್ಕ ಮಾಹಿತಿ ನೀಡಿದರು. ---

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ. ಅಶೋಕ್ ಮಾತನಾಡಿ, ಇಲಾಖೆಗೆ ಹೊಸ ಕಟ್ಟಡದ ಅವಶ್ಯಕತೆ ಇದ್ದು, ಎಪಿಎಂಸಿ ಆವರಣದಲ್ಲಿ ನಿವೇಶನ ಲಭ್ಯವಿದ್ದು, ಕಟ್ಟಡ ನಿರ್ಮಾಣಕ್ಕೆ ಅನುದಾನದ ಅವಶ್ಯಕತೆ ಇದೆ. ಬೀರೂರು, ಸಿಂಗಟಗೆರೆ ರೈತ ಸಂಪರ್ಕ ಕೇಂದ್ರಗಳ ಕಟ್ಟಡದ ದುರಸ್ತಿಗೆ 1 ಲಕ್ಷ ಬಿಡುಗಡೆಯಾಗಿದೆ. ಕೃಷಿ ಹೊಂಡ ನಿರ್ಮಾಣ ಪ್ರಗತಿಯಲ್ಲಿದ್ದು, ಶೇ.107ರಷ್ಟು ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿ ಪೂರ್ಣಗೊಂಡಿವೆ ಎಂದರು.ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕೆ.ಪಿ.ಜಯದೇವ ಈ ಬಾರಿ 1304 ರೈತರು 76.91 ಲಕ್ಷ ರೂ ವಿಮೆ ಹಣ ಪಾವತಿಸಿದ್ದರು. ಅವರಿಗೆ 954 ಲಕ್ಷ ವಿಮೆ ಹಣ ಬಂದಿದೆ. ಒಟ್ಟು 13.7 ಕೋಟಿ ಹಣ ವಿವಿಧ ಯೋಜನೆಗಳ ಕೃಷಿ ಪ್ರೋತ್ಸಾಹ ಧನ ನೀಡುವ ಗುರಿಯಿದ್ದು, 3847 ರೈತರು ಅರ್ಜಿ ಸಲ್ಲಿಸಿದ್ದಾರೆ ಎಂದರು. ತಾಲೂಕಿನ ಉಡುಗೆರೆ ಗ್ರಾಮದ ವಿವೇಕ ಶಾಲೆ ಕೊಠಡಿ ಕಳಪೆಯಾಗಿದ್ದು, ಕಾಮಗಾರಿ ಸಮರ್ಪಕವಾಗಿ ನಿರ್ವಹಿಸದೆ ಇರುವ ಗುತ್ತಿಗೆದಾರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಪಿಡ್ಲ್ಯೂಡಿ ಎಇಇ ಬಸವರಾಜನಾಯ್ಕ ಅವರಿಗೆ ಹೇಳಿದರು. ಭೂಸೇನಾ ನಿಗಮದ ಕಾಮಗಾರಿಗಳು, ಮೆಸ್ಕಾಂ, ಆಹಾರ ಇಲಾಖೆ, ಪಿಎಂಜಿಎಸ್.ವೈ. ಅರಣ್ಯ ಮತ್ತಿತರ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ತಹಸೀಲ್ದಾರ್ ಪೂರ್ಣಿಮಾ ತಾಪಂ ಇಒ ಸಿ.ಆರ್.ಪ್ರವೀಣ್ , ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.-- ಬಾಕ್ಸ್‌ --- ಕಡೂರು ಪಟ್ಟಣದ ಸಂತೆಕೆರೆ ಬಳಿಯ ಹುಲ್ಲುಬನಿ ಜಾಗದ ಒತ್ತುವರಿ ಜೊತೆ ಅನಧಿಕೃತವಾಗಿ ಮನೆಗಳನ್ನು ಪ್ರಭಾವಿಗಳು ಅಕ್ರಮವಾಗಿ ಕಟ್ಟಿಕೊಳ್ಳುತ್ತಿರುವ ದೂರುಗಳು ಬಂದಿದ್ದು, ಪುರಸಭೆ ಅಧಿಕಾರಿಗಳು, ಪೊಲೀಸರ ರಕ್ಷಣೆಯಲ್ಲಿ ತಹಸೀಲ್ದಾರ್‌ ಕ್ರಮ ಕೈಗೊಂಡು ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ಶಾಸಕ ಆನಂದ್ ಸೂಚನೆ ನೀಡಿದರು. 26ಕೆಕೆಡಿಯು1.

ಕಡೂರು ಪಟ್ಟಣದ ತಾ.ಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಕೆ.ಎಸ್.ಆನಂದ್ ಮಾತನಾಡಿದರು. ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಇಒ ಸಿ.ಆರ್. ಪ್ರವೀಣ್ ಇದ್ದರು.

Share this article