ಜಿಲ್ಲೆಯ ಹಲವೆಡೆ ವರುಣನ ಸಿಂಚನ । ರೈತರ ಮೊಗದಲ್ಲಿ ಮಂದಹಾಸ । ಆಲೂಗಡ್ಡೆ, ಮುಸುಕಿನ ಜೋಳ, ತಂಬಾಕು ನಾಟಿ ಬಿರುಸು
ಕಳೆದ ಬಾರಿ ಕೈಕೊಟ್ಟಿದ್ದ ಮುಂಗಾರು ಈ ಬಾರಿ ಉತ್ತಮವಾಗಿ ಆಗುತ್ತಿದ್ದು, ರೈತರ ಮೊಗದಲ್ಲಿ ನಗು ತಂದಿದೆ. ವಾಡಿಕೆ ಪ್ರಕಾರ ಮಾರ್ಚ್ ಅಂತ್ಯ ಹಾಗೂ ಏಪ್ರಿಲ್‌ನಲ್ಲಿ ಬರಬೇಕಾದ ಮಳೆಗಳು ಕೈಕೊಟ್ಟರೂ ಸಹ ಮೇ ಹಾಗೂ ಜೂನ್‌ನಲ್ಲಿ ಆಗುತ್ತಿರುವ ಉತ್ತಮ ಮಳೆಗೆ ರೈತ ಸಮುದಾಯ ಕೃಷಿ ಚಟುವಟಿಕೆಯನ್ನು ಚುರುಕುಗೊಳಿಸಿದೆ.
ಈಗಾಗಲೇ ಜಿಲ್ಲೆಯ ಬಹುಪಾಲು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಅದರಲ್ಲೂ ಅರಸೀಕೆರೆ ತಾಲೂಕಿನ ಪೂರ್ವ ಭಾಗಗಳನ್ನು ಹೊರತುಪಡಿಸಿ ಚನ್ನರಾಯಪಟ್ಟಣ, ಹಾಸನ, ಹೊಳೆರನಸೀಪುರ, ಅರಕಲಗೂಡು, ಬೇಲೂರು, ಸಕಲೇಶಪುರ ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ಆಲೂಗಡ್ಡೆ ಹಾಗೂ ಮುಸುಕಿನ ಜೋಳ ಬಿತ್ತನೆಗೆ ಕೊಂಚ ತಡವಾದರೂ ಕೂಡ ಇದೀಗ ಬಿದ್ದಿರುವ ಹದ ಮಳೆಗೆ ರೈತರು ಆರುರಾತುರವಾಗಿ ಬಿತ್ತನೆ ಮಾಡುತ್ತಿದ್ದಾರೆ. ಈಗಾಗಲೇ ಆಲೂರು, ಹಾಸನ, ಅರಕಲಗೂಡು, ಹೊಳೆನರಸೀಪುರ ತಾಲೂಕುಗಳಲ್ಲಿ ಆಲೂಗಡ್ಡೆ ಹಾಗೂ ಮುಸುಕಿನ ಜೋಳದ ಬಿತ್ತನೆ ಭರದಿಂದ ಸಾಗಿದೆ. ರಾಮನಾಥಪುರ ಹೋಬಳಿಯಲ್ಲಿ ತಂಬಾಕು ಸಸಿಗಳ ನಾಟಿ ಕಾರ್ಯ ಕೂಡ ಜೋರಾಗಿದೆ.ದಶಕದ ಹಿಂದೆ ಆಲೂಗಡ್ಡೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿತ್ತು. ಆದರೆ, ಆನಂತರದಿಂದ ಈವರೆಗೆ ಶುಂಠಿ ಬೆಳೆ ಆ ಸ್ಥಾನವನ್ನು ಆವರಿಸಿಕೊಂಡಿದೆ. ಹಾಗಾಗಿ ರೈತ ಸಮುದಾಯ ಶುಂಠಿಯತ್ತ ಗಮನ ಕೊಟ್ಟಿದ್ದು, ಶುಂಠಿ ಬೆಳೆಯ ಆರೈಕೆಯಲ್ಲಿ ತೊಡಗಿದೆ.
ಹಾಸನ ಜಿಲ್ಲೆಯಲ್ಲಿ ಮುಸುಕಿನ ಜೋಳ, ರಾಗಿ, ಭತ್ತ, ಕಡಲೆ, ಅಲಸಂದೆ ಬೆಳೆಗಳನ್ನು ಮುಂಗಾರು ಹಂಗಾಮಿನಲ್ಲಿ ಮುಖ್ಯ ಬೆಳೆಯಾಗಿ ಬೆಳೆಯಲಾಗುತ್ತಿದೆ. ಬೆಳೆ ಪದ್ಧತಿ ಕ್ರಮಗಳನ್ನು ಆಧರಿಸಿ ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ಸೂಕ್ತ ಎಂದು ಕೃಷಿ ಇಲಾಖೆ ತಿಳಿಸಿದೆ.
ಅಲಸಂದೆ ಸಾಲು ಬಿತ್ತನೆ ಮಾಡುವುದರಿಂದ ಸುಲಭವಾಗಿ ಕಳೆ ನಿಯಂತ್ರಿಸಲು ಸಹಕಾರಿಯಾಗುತ್ತದೆ. ಸಾಲುಗಳ ನಡುವೆ ಕುಂಟೆ ಹೊಡೆದು ದಿಂಡು ಏರಿಸಿದಾಗ ತೇವಾಂಶ ಕಾಪಾಡಿಕೊಳ್ಳಲು ಸಹಕಾರಿಯಾಗುವುದು. ಉತ್ತಮವಾಗಿ ಗಾಳಿ ಆಡುವಿಕೆಯಿಂದ ಕೀಟ ಬಾಧೆ ಕಡಿಮೆಯಾಗುವುದು ಎಂದು ಕೃಷಿ ಇಲಾಖೆ ತಿಳಿಸಿದೆ.