ಗದಗ ಜಿಲ್ಲೆಯಾದ್ಯಂತ ಉತ್ತಮ ಮಳೆ

KannadaprabhaNewsNetwork |  
Published : Jun 12, 2025, 12:48 AM IST
ಲಕ್ಷ್ಮೇಶ್ವರ ಪಟ್ಟಣದ ಹಾವಳಿ ಹನುಮಪ್ಪನ ದೇವಸ್ಥಾನದ ಹತ್ತಿರ ಮಳೆ ನೀರು ಅಂಗಡಿಗೆ ನುಗ್ಗಿದೆ. | Kannada Prabha

ಸಾರಾಂಶ

ಗದಗ ಜಿಲ್ಲೆಯಾದ್ಯಂತ ಬುಧವಾರ ಸಂಜೆ ಉತ್ತಮ ಮಳೆಯಾಗಿದ್ದು, ರೈತರಲ್ಲಿ ಹರ್ಷ ಮೂಡಿಸಿದೆ. ಲಕ್ಷ್ಮೇಶ್ವರ ತಾಲೂಕಿನಲ್ಲಿ ಗುಡುಗು ಸಹಿತ ಜೋರಾದ ಮಳೆಯಾಗಿದೆ. ಮುಂಡರಗಿ ತಾಲೂಕಿನಲ್ಲಿ ಜಿಟಿ ಜಿಟಿ ಮಳೆಯಾಗಿದೆ.

ಗದಗ: ಜಿಲ್ಲೆಯಾದ್ಯಂತ ಬುಧವಾರ ಸಂಜೆ ಉತ್ತಮ ಮಳೆಯಾಗಿದ್ದು, ರೈತರಲ್ಲಿ ಹರ್ಷ ಮೂಡಿಸಿದೆ. ಕಳೆದೊಂದು ವಾರದಿಂದ ಮರೆಯಾಗಿದ್ದ ವರುಣದೇವ ಬುಧವಾರ ಅಬ್ಬರಿಸುತ್ತಿದ್ದು, ಇದರಿಂದಾಗಿ ಹೆಸರು ಬಿತ್ತನೆ ಮಾಡಿದ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಜೂ. 8ರಿಂದ ಪ್ರಾರಂಭವಾಗಿರುವ ಮೃಗಶಿರಾ ಮಳೆ ಪ್ರಾರಂಭದಲ್ಲಿ ಕೇವಲ ತುಂತುರು ರೂಪದಲ್ಲಿಯೇ ಕಾಣಿಸಿಕೊಂಡು ಈಗ ಉತ್ತಮವಾಗಿ ಸುರಿದಿದೆ. ಗದಗ ನಗರ ಮತ್ತು ತಾಲೂಕಿನ ಹಳ್ಳಿಗಳು, ಬೆಟಗೇರಿ ಹೋಬಳಿಯ ಕೆಲ ಗ್ರಾಮಗಳಲ್ಲಿ 20 ನಿಮಿಷಕ್ಕೂ ಹೆಚ್ಚು ಕಾಲ ಉತ್ತಮ ಮಳೆಯಾಗಿದೆ. ಲಕ್ಷ್ಮೇಶ್ವರ ತಾಲೂಕಿನಲ್ಲಿ ಗುಡುಗು ಸಹಿತ ಜೋರಾದ ಮಳೆಯಾಗಿದೆ. ಮುಂಡರಗಿ ತಾಲೂಕಿನಲ್ಲಿ ಜಿಟಿ ಜಿಟಿ ಮಳೆಯಾಗಿದೆ. ಡಂಬಳ ಗ್ರಾಮ ಸೇರಿದಂತೆ ಕಪ್ಪತ್ತಗುಡ್ಡ, ಡೋಣಿ, ಕದಾಂಪುರ, ಡೋಣಿತಾಂಡಾ, ಅತ್ತಿಕಟ್ಟಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದ್ದು, ತೀವ್ರ ಮೋಡ ಕವಿದ ವಾತಾವರಣ ಮುಂದುವರಿದಿದೆ.ಲಕ್ಷ್ಮೇಶ್ವರದಲ್ಲಿ ಮನೆಗಳಿಗೆ ನುಗ್ಗಿದ ನೀರು: ಲಕ್ಷ್ಮೇಶ್ವರ ಪಟ್ಟಣದಲ್ಲಿ ಬುಧವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಪಟ್ಟಣದ ಹಾವಳಿ ಹನುಮಪ್ಪನ ದೇವಸ್ಥಾನದ ಹತ್ತಿರ ಅಂಗಡಿ ಮುಂಗಟ್ಟುಗಳಿಗೆ ಹಾಗೂ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡಿದ ಘಟನೆ ನಡೆದಿದೆ.

ಲಕ್ಷ್ಮೇಶ್ವರ ತಾಲೂಕಿನಲ್ಲಿ ಬುಧವಾರ ಸಂಜೆ ಗುಡುಗು ಸಿಡಿಲು ಸಹಿತ ರಭಸದ ಮಳೆ ಸುರಿಯಿತು. ಚರಂಡಿಯ ಹಾಗೂ ಮಳೆ ನೀರು ಹಾವಳಿ ಹನುಮಪ್ಪನ ದೇವಸ್ಥಾನ, ಆಸಾರ್ ಓಣಿ, ಹೊಸ ಬಸ್ ನಿಲ್ದಾಣ ಹಾಗೂ ಗದಗ ಅಗಸಿಯಲ್ಲಿ ರಸ್ತೆಯ ಮೇಲೆ 2- 3 ಅಡಿ ನೀರು ಹರಿದು, ರಸ್ತೆಯ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿತು.

ಪಟ್ಟಣದ ಹಲವು ಪ್ರದೇಶಗಳಲ್ಲಿ ಮಳೆ ನೀರಿನ ಆರ್ಭಟ ಜೋರಾಗಿದ್ದು, ಜನರು ಬೆಚ್ಚಿ ಬೀಳುವಂತಾಗಿದೆ.

ಪಟ್ಟಣದ ಬಹುತೇಕ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ರೈತರಿಗೆ ನೆಮ್ಮದಿ ಮೂಡಿಸಿದೆ.

ರೈತನಿಗೆ ಹರ್ಷ ತಂದ ಮೃಗಶಿರಾ ಮಳೆ: ನರಗುಂದ ಪಟ್ಟಣದ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬುಧವಾರ 30 ನಿಮಿಷ ಜೋರಾದ ಮಳೆಯಾಗಿದೆ. ತಾಲೂಕಿನ ರೈತ ಸಮುದಾಯಕ್ಕೆ ಮೃಗಶಿರಾ ಮಳೆ ಹರ್ಷ ತಂದಿದೆ. ಈಗಾಗಲೇ ರೈತರು ರೋಹಿಣಿ ಮಳೆ ಪ್ರಾರಂಭದಲ್ಲಿ ವಾಣಿಜ್ಯ ಬೆಳೆಯಾದ ಹೆಸರು ಬಿತ್ತನೆ ಮಾಡಿದ್ದರು. ಆನಂತರ ಮಳೆರಾಯ ಕೈ ಕೊಟ್ಟದ್ದರಿಂದ ರೈತ ಸಮುದಾಯ ಆತಂಕಕ್ಕೆ ಸಿಲುಕಿತ್ತು. ಆದರೆ ಕಳೆದ ಎರಡು ದಿನಗಳಿಂದ ತಾಲೂಕಿನ ವಿವಿಧ ಭಾಗಗಳಲ್ಲಿ ಮೃಗಶಿರಾ ಮಳೆ ಆಗುತ್ತಿರವುದರಿಂದ ರೈತರಿಗೆ ಗೋವಿನ ಜೋಳ, ಬಿ.ಟಿ. ಹತ್ತಿ, ಈರಳ್ಳಿ, ಸೂರ್ಯಕಾಂತಿ, ತೊಗರಿ, ಮುಂತಾದ ಬೆಳೆಗಳನ್ನು ಬಿತ್ತನೆ ಮಾಡಲು ಅನುಕೂಲವಾಗಿದೆ ಎಂದು ತಾಲೂಕಿನ ಮೂಗನೂರ ಗ್ರಾಮದ ಅಣ್ಣಪ್ಪಗೌಡ ಪಾಟೀಲ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''