ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮುರುಘರಾಜೇಂದ್ರ ಬೃಹನ್ಮಠದ ಶ್ರೀ ಮುರುಗಿಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳ ಲೀಲಾ ವಿಶ್ರಾಂತಿ ಸನ್ನಿಧಾನದಲ್ಲಿ ಬುಧವಾರ ನಡೆದ ಅನುಭಾವಿ ವಚನಕಾರ ಅಂಬಿಗರ ಚೌಡಯ್ಯನವರ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಚೌಡಯ್ಯ ಅವರ ನಿಜದನಿಯ ಆಶಯಗಳ ಅನುಸರಿಸುವುದು ಅಗತ್ಯ ಎಂದು ಹೇಳಿದರು.
ಅರಿವೇ ಅಂಗ, ಆಚಾರವೇ ಶಿವ, ನಾಲಿಗೆಯೇ ಗುರುಲಿಂಗ ಎಂದ ಅಂಬಿಗರ ಚೌಡಯ್ಯನವರು ಗಣಾಚಾರ ತತ್ವಗಳನ್ನು ಹೊಂದಿದಂತಹ ಮಹಾನುಭಾವಿ. ಸಮಾಜದಲ್ಲಿದ್ದ ತಾರತಮ್ಯ ನೀತಿಯ ವಿರುದ್ಧ ಹೋರಾಡಿ ಹೊಸ ವ್ಯವಸ್ಥೆಯ ಸೈದ್ಧಾಂತಿಕ ನೆಲೆಗಳನ್ನು ಭದ್ರಗೊಳಿಸಿದ ನಿಜ ಶರಣ. ಸಮಾಜದ ಕಂದಾಚಾರ, ಡಂಭಾಚಾರ, ಮೌಢ್ಯಗಳನ್ನು ನೇರ, ನಿಷ್ಠುರ ಮತ್ತು ನಿಭೀರ್ತಿಯಿಂದ ಕಟುವಾಗಿ ಟೀಕಿಸಿದವರು. ಎಲ್ಲಾ ಶರಣರಂತೆ ಈತ ಕಾಯಕಯೋಗಿ. ಅವನ ಕಾಯಕ ಅಂಬಿಗ ವೃತ್ತಿಯಾಗಿತ್ತು ಎಂದರು.ಅಥಣಿ ಗಚ್ಚಿನ ಮಠದ ಶ್ರೀ ಶಿವಬಸವ ಸ್ವಾಮಿಗಳು ಮಾತನಾಡಿ, 12ನೇ ಶತಮಾನ ಜ್ಞಾನ, ಸಮಾನತೆಯ ಬೆಳಕಿನ ಶತಮಾನ. ವೈಚಾರಿಕತೆಯನ್ನು ಬಿತ್ತಿದ ಸರ್ವಕಾಲಕ್ಕೂ ಪ್ರಸ್ತುತವಾದ ಶಕ್ತಿಯುತ ವಚನ ಸಾಹಿತ್ಯವನ್ನು ಜಗತ್ತಿಗೆ ಕೊಡುಗೆಯಾಗಿ ಕೊಟ್ಟಂತಹ ಶತಮಾನ ಎಂದರು.
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ಸಪ್ತ ಸೂತ್ರವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಾಯಕವು ದೈಹಿಕ ಆರೋಗ್ಯಕ್ಕಾಗಿ ಬೇಕು. ಶರಣರ ಸಂಕುಲವನ್ನು ರಕ್ಷಿಸಿ ವಚನ ಸಾಹಿತ್ಯದ ಉಳಿವಿಗೆ ಕಾರಣಕರ್ತರಾದ ಅಂಬಿಗರ ಚೌಡಯ್ಯನವರ ವಿಚಾರಧಾರೆಗಳನ್ನು ನಾವೆಲ್ಲ ಅಳವಡಿಸಿಕೊಂಡು ಮುನ್ನಡೆಯೋಣ ಎಂದು ಹೇಳಿದರು.ಜೇವರ್ಗಿ ಮರುಳಶಂಕರ ಗುರುಪೀಠದ ಶ್ರೀ ಸಿದ್ಧಬಸವ ಕಬೀರ ಸ್ವಾಮೀಜಿ ಮಾತನಾಡಿ, ಕಾಯಕ ನಿಷ್ಠೆಯನ್ನು ಹೊಂದಿದ್ದ ಮಹಾನ್ ಶರಣ ಅಂಬಿಗರ ಚೌಡಯ್ಯ ತುಂಬ ನಿಷ್ಠೂರವಾದಿ. ನೇರ ಮತ್ತು ದಿಟ್ಟ ನುಡಿಗಳಿಂದ ಸಮಾಜವನ್ನು ತಿದ್ದಲು ಪ್ರಯತ್ನಿಸಿದರು ಎಂದರು. ಶ್ರೀ ಮುರುಘೇಂದ್ರ ಸ್ವಾಮಿಗಳು ಅಂಬಿಗರ ಚೌಡಯ್ಯನವರ ಧರ್ಮನಿಷ್ಠೆ, ಕಾಯಕ ಮಹತ್ವವನ್ನು ಕುರಿತು ಮಾತನಾಡಿದರು.
ಡಾ.ಬಸವ ಚೇತನ ಸ್ವಾಮೀಜಿ, ಈಚಲ ನಾಗೇನಹಳ್ಳಿ ಗೋವಿಂದ ಸ್ವಾಮೀಜಿ, ಅಖಿಲ ಭಾರತ ಲಿಂಗಾಯತ ಮಹಾಸಭಾದ ನಿರ್ದೇಶಕ ಬಸವರಾಜ ಕಟ್ಟಿ, ಗಾಣಿಗ ಸಮಾಜದ ಅಧ್ಯಕ್ಷ ತಿಪ್ಪೇಸ್ವಾಮಿ, ಬಿ.ಟಿ.ನಂದೀಶ್, ನಿವೃತ್ತ ಪ್ರಾಚಾರ್ಯ ಟಿ.ಪಿ.ಸುಜ್ಞಾನ ಮೂರ್ತಿ, ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದ ಉಪಾಧ್ಯಕ್ಷ ನಾಗರಾಜ್ ಸಂಗಮ, ಕುರುಬ ಸಮಾಜದ ಪೈಲ್ವಾನ್ ತಿಪ್ಪೇಸ್ವಾಮಿ, ವೀರಶೈವ ಸಮಾಜದ ಶಿವಾನಂದ್, ಎಸ್‌ಜೆಎಂ ಪದವಿ ಕಾಲೇಜಿನ ಪ್ರಾಚಾರ್ಯ ಪಂಚಾಕ್ಷರಿ ಪ್ರಾಧ್ಯಾಪಕ ಡಾ.ಆನಂದ, ಚನ್ನಪಟ್ಟಣದ ಉಮೇಶ್, ಎಸ್ ಜೆಎಂ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪವಲ್ಲಿ ಇದ್ದರು.