ಹೊಸದುರ್ಗ: ತಾಲೂಕಿನಾದ್ಯಂತ ಕಳೆದೆರೆಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ರೈತರಲ್ಲಿ ಸಂತಸದ ಜೊತೆಗೆ ಬೇಸರವನ್ನು ಮೂಡಿಸಿದೆ.
ಒಂದು ತಿಂಗಳ ಹಿಂದೆ ಮಳೆಯಾಗಿದ್ದರೆ ಈ ಬಾರಿ ನೆಚ್ಚಿನ ರಾಗಿ ಬೆಳೆಯನ್ನು ರೈತರು ತೆಗೆಯುತ್ತಿದ್ದರು. ಆದರೆ ಬೆಳೆಗೆ ಅವಶ್ಯಕತೆ ಇದ್ದಾಗ ಬಾರದ ಮಳೆ ಈಗ ಸುಮ್ಮನೆ ಸುರಿಯುತ್ತಿದೆ ಎಂದು ಕೆಲ ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಅನೇಕ ಕಡೆ ಜಮೀನುಗಳಲ್ಲಿ ನೀರು ನಿಂತು ಬೆಳೆ ನೆಲಕ್ಕೆ ಹಾಸಿದಂತೆ ಬೀಳತೊಡಗಿದೆ. ಇದರಿಂದ ಸಿಗಬಹುದಾದ ಅಲ್ಪ ಸ್ವಲ್ಪ ಬೆಳೆಯೂ ರೈತರ ಕೈಗೆ ಸಿಗದಂತಾಗುತ್ತಿದೆ. ಸಾವೆ ಬೆಳೆಯಂತೂ ಸಂಪೂರ್ಣವಾಗಿ ನೆಲಕ್ಕಾಸಿದೆ. ರಾಗಿ ಬೆಳೆ ಉತ್ತಮವಾಗಿದ್ದು, ಇದೆ ರೀತಿ ಮಳೆ ಮುಂದುವರೆದರೆ ಅದೂ ಕೂಡ ನೆಲಕ್ಕುರಳಲಿದೆ ಎಂಬುದು ರೈತರ ಆತಂಕವಾಗಿದೆ.
ನದಿಯಲ್ಲಿ ನೀರಿನ ಹರಿವು ಹೆಚ್ಚಳ: ವೇದಾವತಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ನದಿಯಲ್ಲಿ ನೀರಿನ ಹರಿವಿನ ಪ್ರಮಾಣವೂ ಹೆಚ್ಚಾಗಿದೆ. ಇದರಿಂದ ವಾಣಿ ವಿಲಾಸ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಾಗುತ್ತಿದೆ. ಕೆಲ್ಲೋಡು ಬ್ಯಾರೆಜ್ ಬಳಿ ನೀರು ರಭಸವಾಗಿ ಹರಿಯುತ್ತಿದ್ದು, ನದಿಯಲ್ಲಿ ಈಜಾಡದಂತೆ. ಮೀನು ಹಿಡಿಯುವವರು ನದಿಗೆ ಇಳಿಯದಂತೆ ಸ್ಥಳೀಯ ಆಡಳಿತ ಸೂಚನೆ ನೀಡಿದೆ.ಮನೆಗಳಿಗೆ ಹಾನಿ: ತಾಲೂಕಿನಾದ್ಯಂತ ಎಡೆಬಿಡದೆ ಬೀಳುತ್ತಿರುವ ಮಳೆಯಿಂದ ಸುಮಾರು 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಸೋಮವಾರ ಸುರಿದ ಮಳೆಗೆ ಮಾಡದಕೆರೆ ಹೋಬಳಿಯ ದೇವರಹಟ್ಟಿ ಗ್ರಾಮದ ಕೃಷ್ಣಮೂರ್ತಿ ಎಂಬುವವರ ಮನೆಗೆ ಹಾನಿಯಾಗಿದ್ದರೆ. ಮಂಗಳವಾರ ಬಿದ್ದ ಮಳೆಗೆ ಶ್ರೀರಾಂಪುರ ಹೋಬಳಿಯ ಕೆರೆಹೊಸಹಳ್ಳಿ ವೃತ್ತಕ್ಕೆ ಸೇರಿದ ಹರೇನಹಳ್ಳಿ ಗ್ರಾಮದ ರಂಗಮ್ಮ ಎಂಬುವವರ ಮನೆ, ಸಿಂಗೇನಹಳ್ಳಿ ಗ್ರಾಮದ ರಂಗಮ್ಮ, ಸಿರಗಿಪುರ ಗ್ರಾಮದ ಮಹದೇವಪ್ಪ, ಗಿರಿಯಾಪುರ ಗ್ರಾಮದ ಶಾರದಮ್ಮ ಎಂಬುವವರ ಮನೆಗೆ ಹಾನಿಯಾಗಿದ್ದು, ಸುಮಾರು 3 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ವರದಿಯಾಗಿದೆ.
ಮಳೆ ವಿವರ: ಮಂಗಳವಾರ ತಾಲೂಕಿನ ಶ್ರೀರಾಂಪುರದಲ್ಲಿ 50.2 ಮಿಮೀ, ಬಾಗೂರು 21ಮಿಮೀ, ಮಾಡದಕೆರೆಯಲ್ಲಿ 20 ಮಿಮೀ, ಮತ್ತೋಡು 19.2 ಮಿಮೀ, ಹೊಸದುರ್ಗದಲ್ಲಿ 14.4 ಮಿಮೀ ಮಳೆಯಾಗಿದೆ.