ಎಚ್.ಎನ್.ಪ್ರಸಾದ್
ಬಹು ದಿನಗಳ ನಂತರ ಹಲಗೂರು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಮಳೆಯಾಶ್ರಿತ ಪ್ರದೇಶವಾದ ಹಲಗೂರಿನಲ್ಲಿ ಹಲವು ದಿನಗಳಿಂದ ಮಳೆ ಇಲ್ಲದೇ ಅಳಿದುಳಿದ ಬೆಳೆಗಳನ್ನು ಉಳಿಸಿಕೊಳ್ಳಲು, ಕೃಷಿ ಚಟುವಟಿಕೆ ಕೈಗೊಳ್ಳಲು ನೀರಿಲ್ಲದೆ ರೈತರು ಪರದಾಡುತ್ತಿದ್ದರು.ಶನಿವಾರ ರಾತ್ರಿ ಆರಂಭವಾದ ಮಳೆ ಬೆಳಗಿನ ಜಾವದವರೆಗೂ ಗುಡುಗು ಸಿಡಿಲಿನ ಜೊತೆ ಉತ್ತಮವಾಗಿ ಸುರಿದಿದೆ. ಇದರಿಂದ ಈ ಭಾಗದ ಹಲವು ಕೆರೆ ಕಟ್ಟೆಗಳು ಅರ್ಧದಷ್ಟು ಭಾಗ ತುಂಬಿವೆ. ಅಲ್ಲದೇ, ಸಮೀಪವೇ ಇರುವ ಭೀಮಾ ನದಿಯ ಚಿಕ್ಕತೊರೆಯಲ್ಲಿ ನೀರು ಹರಿದಿರುವುದು ರೈತರಿಗೆ ಖುಷಿ ತರಿಸಿದೆ.
ಕೆಲವು ತಿಂಗಳ ಹಿಂದೆ ಅಲ್ಪಸ್ವಲ್ಪ ಮಳೆಯಾದಾಗ ಜಮೀನನ್ನು ಹಸನ ಮಾಡಿಕೊಂಡು ಧೈರ್ಯದಿಂದ ಹುರುಳಿ, ರಾಗಿ ಇತರ ಬೆಳೆಗಳನ್ನು ಹಾಕಿದ್ದರು. ಆದರೆ, ಮಳೆ ಇಲ್ಲದೆ ರೈತರು ಕಂಗಾಲಾಗಿದ್ದ ವೇಳೆ ಶನಿವಾರ ರಾತ್ರಿ ಸುರಿದ ಮಳೆ ಬಹುತೇಕ ಬೆಳೆಗಳಿಗೆ ಬೆಳೆಯಲು ಸಹಕಾರಿಯಾಗಿದೆ ಎಂಬುದು ರೈತರ ಅಭಿಪ್ರಾಯವಾಗಿದೆ.
ಇದೇ ರೀತಿ ಹಲವು ಗ್ರಾಮಗಳು ಮಳೆಯಾಶ್ರಿತ ಪ್ರದೇಶಗಳಾಗಿವೆ. ಸಂಬಂಧಪಟ್ಟ ಅಧಿಕಾರಿಗಳು ಹಳ್ಳಕೊಳ್ಳಗಳಲ್ಲಿ ತುಂಬಿರುವ ಮಣ್ಣು ಹಾಗೂ ಕಸ ಕಡ್ಡಿಗಳನ್ನು ತೆರವುಗೊಳಿಸಿ ಕೆರೆ ಕಟ್ಟೆಗಳು ಮಳೆ ನೀರಿನಿಂದ ತುಂಬಿದರೆ ರೈತರಿಗೆ ಅನುಕೂಲವಾಗುವ ಜೊತೆಗೆ ಕುಡಿಯುವ ನೀರಿಗೂ ಸಹಕಾರಿಯಾಗಲಿದೆ. ಈ ಬಗ್ಗೆ ಗಮನ ಹರಿಸಬೇಕು ಎಂದು ಈ ಭಾಗದ ಜನರ ಒತ್ತಾಯವಾಗಿದೆ.
-ಶಶಿ ಗ್ರಾಪಂ ಸದಸ್ಯರು, ಬಸವನಹಳ್ಳಿ
ಶನಿವಾರ ರಾತ್ರಿ ಈ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಬಿರುಗಾಳಿ ಇಲ್ಲದ ಕಾರಣ ಯಾವುದೇ ಅನಾಹುತಗಳು ಸಂಭವಿಸಿಲ್ಲ. ವಿದ್ಯುತ್ ಸಮಸ್ಯೆಯೂ ಆಗಿಲ್ಲ. ಮಳೆಯಿಂದಾಗಿ ಈ ಭಾಗದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ.