ಶಾಲೆಗಳಲ್ಲಿ ಪತ್ರಿಕೆ ಓದಿಗೆ ಉತ್ತಮ ಪ್ರತಿಕ್ರಿಯೆ

KannadaprabhaNewsNetwork |  
Published : Apr 28, 2026, 01:45 AM IST
School

ಸಾರಾಂಶ

ರಾಜ್ಯದ ಎಲ್ಲಾ ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆ ವೇಳೆಯಲ್ಲಿ 10 ನಿಮಿಷಗಳ ಕಾಲ ಕನ್ನಡ ದಿನಪತ್ರಿಕೆಗಳನ್ನು ಕಡ್ಡಾಯವಾಗಿ ಓದಿಸುವ ಅಭ್ಯಾಸ ಜಾರಿಗೊಳಿಸುಂತೆ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶಕ್ಕೆ ಶಿಕ್ಷಕರು, ಪೋಷಕರು, ಸಾಹಿತಿಗಳು ಹಾಗೂ ತಜ್ಞರ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

  ಬೆಂಗಳೂರು :  ರಾಜ್ಯದ ಎಲ್ಲಾ ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆ ವೇಳೆಯಲ್ಲಿ 10 ನಿಮಿಷಗಳ ಕಾಲ ಕನ್ನಡ ದಿನಪತ್ರಿಕೆಗಳನ್ನು ಕಡ್ಡಾಯವಾಗಿ ಓದಿಸುವ ಅಭ್ಯಾಸ ಜಾರಿಗೊಳಿಸುಂತೆ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶಕ್ಕೆ ಶಿಕ್ಷಕರು, ಪೋಷಕರು, ಸಾಹಿತಿಗಳು ಹಾಗೂ ತಜ್ಞರ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇಲಾಖೆಯ ಈ ಕ್ರಮವು ವಿದ್ಯಾರ್ಥಿಗಳ ಕನ್ನಡ ಭಾಷಾ ಶೈಲಿ ಮತ್ತು ಬರವಣಿಗೆ ಸುಧಾರಿಸುವ ಜೊತೆಗೆ ಪತ್ರಿಕೆಗಳಲ್ಲಿನ ಆಸಕ್ತಿದಾಯಕ ಅಂಶಗಳಿಂದ ಮಕ್ಕಳ ಆಸಕ್ತಿ ಬೇರೆ ಬೇರೆ ವಿಷಯಗಳ ಕಡೆ ತಿರುಗಲಿದ್ದು, ಅವರನ್ನು ಮೊಬೈಲ್‌, ಸಾಮಾಜಿಕ ಜಾಲತಾಣಗಳ ಬಳಕೆಯಿಂದ ದೂರ ಮಾಡಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭವಿಷ್ಯ ಉತ್ತಮಗೊಳ್ಳಲು ಸಹಕಾರಿ

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಅವರು, ಮಕ್ಕಳಿಗೆ ಬೆಳಗ್ಗೆ ಎದ್ದು ಪತ್ರಿಕೆ ಅದರಲ್ಲೂ ಕನ್ನಡ ದಿನ ಪತ್ರಿಕೆ ಓದುವ ಅಭ್ಯಾಸ ಬೆಳೆಸುವುದರಿಂದ ಅವರ ಭವಿಷ್ಯ ಉತ್ತಮಗೊಳ್ಳಲು ಸಹಕಾರಿಯಾಗಲಿದೆ. ನಿತ್ಯ ಪತ್ರಿಕೆಗಳಲ್ಲಿ ಬರುವ ದೈನಂದಿನ ಉತ್ತಮ ಸುದ್ದಿಗಳನ್ನು ಮಕ್ಕಳಿಂದ ಓದಿಸುವುದರಿಂದ ಅವರಿಗೆ ಭಾಷೆಯ ಮೇಲೆ ಹಿಡಿತ ಬರುತ್ತದೆ. ನಿತ್ಯ ಒಬ್ಬೊಬ್ಬ ಮಕ್ಕಳಿಂದ ಪತ್ರಿಕೆ ಓದಿಸುವುದರಿಂದ ವೇದಿಕೆ ಬಗೆಗಿನ ಭಯವೂ ದೂರವಾಗುತ್ತದೆ ಎಂದಿದ್ದಾರೆ.

ಪ್ರಚಲಿತ ವಿದ್ಯಮಾನಗಳನ್ನು ತಿಳಿಯುವುದರಿಂದ ಸಾಮಾನ್ಯ ಜ್ಞಾನ ವೃದ್ಧಿಯಾಗಿ ಮುಂದೆ ಅದು ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅನುಕೂಲವಾಗಲಿದೆ. ಜೊತೆಗೆ ಮಕ್ಕಳಲ್ಲಿ ಶಬ್ಧಕೋಶ, ಭಾಷಾ ಶೈಲಿ ಮತ್ತು ಬರವಣಿಗೆಯ ಕೌಶಲ್ಯ ಸುಧಾರಣೆಗೂ ಇದು ಸಹಕಾರಿ. ಈ ಎಲ್ಲ ಅಂಶಗಳನ್ನೂ ಉಲ್ಲೇಖಿಸಿಯೇ ಆಯೋಗವು ಶಾಲೆಗಳಲ್ಲಿ ಕನ್ನಡ ಪತ್ರಿಕೆ ಓದಿಸುವಂತೆ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಿತ್ತು. ಇದನ್ನು ಪರಿಗಣಿಸಿ ಜಾರಿಗೆ ತಂದಿರುವುದು ಸ್ವಾಗತಾರ್ಹ ಎಂದು ಹೇಳಿದ್ದಾರೆ.

ನಿತ್ಯ ಕನಿಷ್ಠ 4 ಪತ್ರಿಕೆಗೆ ಶಿಫಾರಸು:

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿ ಮಲೆ ಅವರು, ಇಂದಿನ ಡಿಜಿಟಲ್‌ ಯುಗದಲ್ಲಿ ಮಕ್ಕಳು ಪತ್ರಿಕೆ, ಪುಸ್ತಕಗಳ ಓದಿನಿಂದ ದೂರವಾಗಿ ಇಂಟರ್ನೆಟ್‌ ಶಿಕ್ಷಣದ ಹೆಸರಲ್ಲಿ ಮನರಂಜನೆ ಮತ್ತು ಸಾಮಾಜಿಕ ಜಾಲತಾಣಗಳಿಗೆ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಅತಿಯಾದ ಮೊಬೈಲ್‌ ಬಳಕೆಯಿಂದ ಅವರ ಆಲೋಚನಾ ರೀತಿ, ನೀತಿಗಳೇ ಬದಲಾಗುತ್ತವೆ. ಯಾವುದೇ ಭಾಷೆಯ ಮೇಲೂ ಹಿಡಿತ, ಪಕ್ವತೆ ಇಲ್ಲದೆ ಹೋಗಬಹುದು. ಜ್ಞಾಪಕ ಶಕ್ತಿಯ ಕೊರತೆ, ಶ್ರವಣದೋಷ ಮತ್ತು ದೈಹಿಕ ಚಟವಟಿಕೆಗಳಲ್ಲಿ ಆಸಕ್ತಿ ಇಲ್ಲದಂತೆ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ನಿತ್ಯ ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸುವುದು ಅತ್ಯಂತ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರ ಕೂಡ ಶಾಲೆಗಳಿಗೆ ನಿತ್ಯ ಕನಿಷ್ಠ 4 ಕನ್ನಡ ಪತ್ರಿಕೆಗಳನ್ನು ತರಿಸಲು ಕ್ರಮ ವಹಿಸಬೇಕೆಂದು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಇದನ್ನು ಸರ್ಕಾರ ಜಾರಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕೌಟುಂಬಿಕ ಕಲಹ: ಆತ್ಮಹತ್ಯೆಗೆ ಶರಣಾದ ಆಟೋ ಚಾಲಕ
ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಅಂಗಡಿಗಳ ತೆರವು